ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಲು ಸಲಹೆ

ತುಮಕೂರು, ಜ. ೧೨- ಪೋಷಕರು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂದು ಕರ್ನಾಟಕ ಮಾನವ ಹಕ್ಕುಗಳ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಜ್ಞಾನ ಪ್ರಕಾಶ್ ಅಭಿಪ್ರಾಯಪಟ್ಟರು.

ನಗರದ ದಾನಪ್ಯಾಲೇಸ್ ಸಭಾಂಗಣದಲ್ಲಿ ನಡೆದ ಎಂ.ಕೆ.ಎಸ್. ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
\

ಮಕ್ಕಳು ಒಳ್ಳೆಯದ್ದನ್ನು ಹಾಗೆ ಕೆಟ್ಟದ್ದನ್ನು ಬೇಗನೇ ಕಲಿಯುತ್ತಾರೆ. ಪೋಷಕರು ಮಕ್ಕಳನ್ನು ಸರಿದಾರಿಗೆ ತಂದು ಓದುವ ನಿಟ್ಟಿನಲ್ಲಿ ಉತ್ತೇಜನ ನೀಡಿದರೆ ಮುಂದೆ ಉತ್ತಮ ವ್ಯಕ್ತಿಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗುತ್ತದೆ. ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಅವರನ್ನು ಸರಿದಾರಿಯಲ್ಲಿ ಮುನ್ನಡೆಸಬೇಕಾದ ಜವಾಬ್ದಾರಿ ಪೋಷಕರ ಮೇಲಿದೆ ಎನ್ನುವುದನ್ನು ಮರೆಯುವಂತಿಲ್ಲ ಎಂದು ಹೇಳಿದರು.

ಒಳ್ಳೆಯ ವಿಚಾರಗಳನ್ನಷ್ಟೇ ಮಕ್ಕಳು ತೆಗೆದುಕೊಳ್ಳುವ ಮೂಲಕ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು, ಉನ್ನತ ಶಿಕ್ಷಣವನ್ನು ಪಡೆಯುವುದರ ಕಡೆಗೆ ಮಕ್ಕಳು ಗಮನ ಹರಿಸಬೇಕು. ಶ್ರದ್ಧೆ ಮತ್ತು  ಶಿಸ್ತಿನಿಂದ ಮಾತ್ರ ವಿದ್ಯಾರ್ಥಿಗಳು ಯಶಸ್ಸು ಗಳಿಸಲು ಸಾಧ್ಯ ಎನ್ನುವುದನ್ನು ಮನಗಾಣಬೇಕಿದೆ. ಶ್ರದ್ಧೆ ಇಲ್ಲದೇ ವಿದ್ಯೆ ಹತ್ತುವುದಿಲ್ಲ ಎಂಬ ಗಾದೆಯನ್ನು ಪ್ರತಿಯೊಬ್ಬರು ನೆನಪಿನಲ್ಲಿಟ್ಟುಕೊಂಡು ಶ್ರದ್ಧೆಯಿಂದ ವಿದ್ಯೆ ಕಲಿತು ಉನ್ನತ ಸ್ಥಾನಗಳನ್ನು ಪಡೆಯುವಂತೆ ಕರೆ ನೀಡಿದರು.

ಎಂಕೆಎಸ್ ಶಾಲೆಯ ಕಾರ್ಯದರ್ಶಿ ಅಮೀನಾ ಅಜ್ಮಲ್ ಮಾತನಾಡಿ, 2004ರಲ್ಲಿ ಬಾಡಿಗೆ ಮನೆಯಲ್ಲಿ ಕೇವಲ 7 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶಾಲೆ ಇಂದು 150 ವಿದ್ಯಾರ್ಥಿಗಳನ್ನು ಹೊಂದಿದ್ದು, ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಸದಾಶಯದೊಂದಿಗೆ ತುಮಕೂರಿನಲ್ಲಿ ಶಾಲೆಯನ್ನು ಆರಂಭಿಸಲಾಗಿದ್ದು, ಎಲ್ಲ ವರ್ಗದ ಮಕ್ಕಳು ವಿದ್ಯಾಭ್ಯಾಸವನ್ನು ಮಾಡುತ್ತಿದ್ದು, ಇದೊಂದು ಸೇವೆಯನ್ನಾಗಿ ಪರಿಗಣಿಸಿರುವುದಾಗಿ ತಿಳಿಸಿದರು.

ಬಡವ-ಶ್ರೀಮಂತ, ವರ್ಗಗಳ ಭೇದವಿಲ್ಲದೆ ಎಲ್ಲರೂ ಒಂದೇ ಎಂದು ತಿಳಿದು ಶಾಲೆಯಲ್ಲಿ ಶಿಕ್ಷಕರು ಬೋಧನೆ ಮಾಡುತ್ತಿದ್ದು, ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಎಂಕೆಎಸ್ ಶಾಲೆ ಕಾರ್ಯನಿರ್ವಹಿಸುತ್ತಿದ್ದು, ನಮ್ಮ ಶಾಲೆಯಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಪ್ರಸ್ತುತ ಉನ್ನತ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತ ಮಟ್ಟದಲ್ಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯರಾದ ಸೈಯದ್ ನಯಾಜ್, ಶಕೀಲ್ ಷರೀಫ್, ಕರ್ನಾಟಕ ಮಾನವ ಹಕ್ಕು ಜನ ಜಾಗೃತಿ ಸಮಿತಿ ಜಿಲ್ಲಾಧ್ಯಕ್ಷ ಸೈಯದ್ ಅಜ್ಮಲ್ ಪಾಷ, ಕರ್ನಾಟಕ ಹೋರಾಟಗಾರರ ಒಕ್ಕೂಟ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮಹಮದ್ ಕೌಸರ್, ಉಪಾಧ್ಯಕ್ಷ ಯೋಗೀಶ್, ಕಾರ್ಯಾಧ್ಯಕ್ಷೆ ಮಂಜುಳಾ, ಸಾಹಿತಿ ಡಾ.ಭಾಗ್ಯಮ್ಮ, ಕಾರ್ಮಿಕ ಘಟಕದ ಕಾರ್ಯದರ್ಶಿ ರವಿಕುಮಾರ್, ಯುವ ಘಟಕದ ಉಪಾಧ್ಯಕ್ಷ ಯೋಗೀಶ್ ಮತ್ತಿತರರು ಉಪಸ್ಥಿತರಿದ್ದರು.

Leave a Comment