ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ವಾಲಾ ಕರೆ

ಬೆಂಗಳೂರು, ನ. ೧೪- ದೇಶಕ್ಕಾಗಿ ಬದುಕಬೇಕು, ದೇಶಕ್ಕಾಗಿ ಮಡಿಯಬೇಕು ಎನ್ನುವ ಸಂಸ್ಕಾರದೊಂದಿಗೆ ಮಕ್ಕಳನ್ನು ಬೆಳೆಸುವ ನಿಟ್ಟಿನಲ್ಲಿ ಪೋಷಕರು ಹೆಚ್ಚು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ರಾಜ್ಯಪಾಲ ವಜೂಬಾಯಿ ವಾಲಾ ಹೇಳಿದರು.
ಅವರಿಂದು ನಗರದ ಜವಾಹಾರ್ ಬಾಲ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡಿದರೆ ಸಾಲದು, ಜ್ಞಾನವುಳ್ಳವರನ್ನಾಗಿ ಬೆಳೆಸಬೇಕು. ಪ್ರಶಸ್ತಿ ಪಡೆದುಕೊಳ್ಳುವ ಮಕ್ಕಳ ಸಂಖ್ಯೆಯೂ ಸಹ ಹೆಚ್ಚಳಗೊಳ್ಳಬೇಕು ಎಂದು ತಿಳಿಸಿದರು.
ಪ್ರಸ್ತುತ ದಿನಗಳು ಮಕ್ಕಳಿಗಾಗಿಯೇ ಇರುವ ದಿನಗಳು. ದೇಶದ ಪ್ರತಿ ಮಕ್ಕಳ ಬುದ್ಧಿ, ಸಾಹಸ, ಜ್ಞಾನ, ಧೈರ್ಯ ಹೆಚ್ಚಳಗೊಂಡರೆ ದೇಶ ಬಲಿಷ್ಠಗೊಂಡಂತೆ ಮಕ್ಕಳ ಮುಷ್ಠಿಯಲ್ಲಿ ರಾಷ್ಟ್ರದ ಶಕ್ತಿ ಅಡಗಿದೆ. ಮಕ್ಕಳು ಯಾರಿಗೂ ಹೆದರಬೇಕಿಲ್ಲ, ಹೆದರಿಕೆಯಿಂದ ಬದುಕು ಉತ್ತಮ ಭವಿಷ್ಯ ಸಾಧ್ಯವಿಲ್ಲ ಎಂದರು.
ತಾಯಿ ಉತ್ತಮ ಸಂಸ್ಕಾರವಂತಳಾಗಿದ್ದರೆ ಮಕ್ಕಳು ಸಹ ಸಂಸ್ಕಾರವಂತರಾಗುತ್ತಾರೆ. ಎಲ್ಲಿ ಮಹಿಳೆ ಪೂಜಿತಳಾಗುತ್ತಾಳೊ ಅಲ್ಲಿ ಸಮೃದ್ಧತೆ ಇರುತ್ತದೆ. ಇಡೀ ತನ್ನ ಪರಿವಾರವನ್ನು ಜೋಪಾನವಾಗಿ ಸಂರಕ್ಷಿಸುವ ತಾಯಿಯ ಶಕ್ತಿಯನ್ನೆ ಮಾತೃಶಕ್ತಿ ಎನ್ನಲಾಗುತ್ತಿದೆ. ಮಹಿಳೆಯರಲ್ಲಿರುವ ಅಪಾರ ಜ್ಞಾಪಕಶಕ್ತಿ ಸದ್ಭಳಕೆಯಾಗಬೇಕಿದೆ ಎಂದ ಅವರು, ಮಕ್ಕಳಿಂದ ತಂದೆ-ತಾಯಿಗಳು ಗುರುತಿಸಿಕೊಳ್ಳುವಂತಹ ಪರಿಸ್ಥಿತಿ ಸೃಷ್ಠಿಯಾಗಬೇಕು ಎಂದರು.
ಮಕ್ಕಳಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಮಾಡಿದ್ದು, ಇದನ್ನು ಪ್ರತಿಯೊಬ್ಬರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ನಂತರ ಕಾರ್ಯಕ್ರಮದ ಅಂಗವಾಗಿ ರಾಜ್ಯಪಾಲ ವಜುಬಾಯಿ ವಾಲಾ ಅವರು ಧೈರ್ಯ ಹಾಗೂ ಸಾಹಸ ಪ್ರದರ್ಶಿಸಿದ 7 ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಹಾಗೂ 4 ವ್ಯಕ್ತಿಗಳಿಗೆ ಮಕ್ಕಳ ಕಲ್ಯಾಣ ಪ್ರಶಸ್ತಿ ಹಾಗೂ 35 ಮಕ್ಕಳಿಗೆ ಅಸಾಧಾರಣ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭಾನ್ವಿತ ಮಕ್ಕಳಿಗೆ ಕಲಾಶ್ರೀ ಪ್ರಶಸ್ತಿ ಪ್ರಧಾನ ಮಾಡಿದರು.
ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ, ಬಾಲಭವನ ಸೊಸೈಟಿ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕಿ ಎಂ.ದೀಪ ಹಾಗೂ ಇಲಾಖೆ ಪ್ರದಾನ ಕಾರ್ಯದರ್ಶಿ ಉಮಾಮಹದೇವನ್ ಉಪಸ್ಥಿತರಿದ್ದರು.

Leave a Comment