ಮಕರ

ಈ ವರ್ಷಾಂರಂಭದಲ್ಲಿ ಗುರು 12.9.2017ವರೆಗೆ 9ನೆಯವನಾಗಿ ಬಲಾಢ್ಯನಿರುವನು. ನಂತರ 17.3.2018ವರೆಗೆ 10ನೆಯನಾಗುವನು. ಈ ವರ್ಷ ಎಂಥ ಕಠಿಣ ಕಾರ್ಯಗಳಿದ್ದರೂ ಅವುಗಳು ಸರಳವಾಗಿ ನೆರವೇರುವವು. ಮಕ್ಕಳು ವಿದ್ಯಾಪಾರಂಗತರಾಗಿ ಉದ್ಯೋಗಶೀಲರಾಗುವರು. ಮನೆಯಲ್ಲಿ ಶುಭ ಕಾರ್ಯಗಳು ನಡೆಯುವವು. ಬೆಲೆ ಬಾಳುವ ವಸ್ತುಗಳನ್ನು ಖರೀದಿಸುವಿರಿ. ಧಾರ್ಮಿಕ ಸಮಾರಂಭಗಳಲ್ಲಿ ಆಸಕ್ತರಾಗುವಿರಿ. ಕುಟುಂಬದಲ್ಲಿ ಕೆಲವು ಬದಲಾವಣೆಗಳು ಆಗಲಿವೆ. ಹಿತಶತೃಗಳು ನಿಮಗೆ ತಿಳಿಯದಂತೆ ಅಹಿತ ಕಾರ್ಯಗಳಲ್ಲಿ ಪ್ರವೃತ್ತರಾಗಿ ಕಪಟತನ ತೋರುವರು. ಆದರೆ ಅದು ಮಾಯವಾಗಿ ಸರ್ವಕಾರ್ಯಗಳು ಫಲಿಸುವವು. ಗುರು ಹಿರಿಯರ ಉಪದೇಶ, ದಾನ-ಧರ್ಮಗಳಲ್ಲಿ ತಲ್ಲೀನರಾಗುವಂತೆ ಮಾಡುವುದು. ವ್ಯಾಪಾರಿಗಳು ಸಮಾಧಾನಕರ ಲಾಭ ಪಡೆಯುವರು. ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದುವರು. ಮಹಿಳೆಯರಿಗೆ ನೌಕರಿ ಭಾಗ್ಯವಿದೆ. ಕಂಕಣ ಭಾಗ್ಯದೊಂದಿಗೆ ಸಂತಾನ ಭಾಗ್ಯವೂ ಪ್ರಾಪ್ತಿಯಾಗಲಿದೆ. ರೈತರಿಗೆ ಯಂತ್ರ ಖರೀದಿ ಯೋಗವಿದೆ. ಜನೋಪಯೋಗಿ ಕೆಲಸಗಳನ್ನು ಮಾಡಿ ಖ್ಯಾತರಾಗುವಿರಿ. ಶನಿದೇವನು 20.6.2017ವರೆಗೆ 12ನೆಯವನು. ಮುಂದೆ 25.10.17ವರೆಗೆ 11ನೆಯವನಾಗಿ ಸಂಪತ್ತನ್ನು ಅನುಗ್ರಹಿಸುವನು. ಬಂಧುಗಳ ಕಾರ್ಯದಲ್ಲಿ ಪಾಲ್ಗೊಂಡು ಸಮಸ್ಯೆಗಳನ್ನು ಪರಿಹರಿಸಿ ಮಾರ್ಗದರ್ಶನ ಮಾಡುವಿರಿ. ವ್ಯಾಪಾರಿಗಳಿಗೆ ವ್ಯವಹಾರಗಳಲ್ಲಿ ಏರು ಪೇರುಗಳು ಸಂಭವಿಸಲಿವೆ. ಅನಾರೋಗ್ಯ ಖರ್ಚುಗಳಿಗೆ ಹೆಗಲು ಕೊ‌ಡುವಿರಿ. ರಾಜಕೀಯ ರಂಗದಲ್ಲಿ ಬಲಿಷ್ಠ ಸಾಧನೆಯಾಗಲಿದೆ. ಪಕ್ಷ, ಸಿದ್ಧಾಂತಗಳಿಗೆ ಬೆಲೆ ಕೊಡುವಿರಿ. ಎಷ್ಟೇ ಕಷ್ಟಗಳು ಬಂದರೂ ಸಂಸಾರಕ್ಕೆ ಕುಂದಣವಿಟ್ಟಂತೆ ರಕ್ಷಿಸುವನು ಗುರುರಾಯನು.

ಆದಾಯ – 11, ವ್ಯಯ – 5