ಮಕರ ಸಂಕ್ರಾಂತಿ : ಖರೀದಿ ಭರಾಟೆ ಜೋರು

ಮೈಸೂರು. ಜ. 14 ನಗರದೆಲ್ಲೆಡೆ ನಾಳೆ ಮಕರ ಸಂಕ್ರಾಂತಿ ಹಬ್ಬ ಆಚರಣೆ ಸಂಭಂದ ವಿವಿಧ ವಸ್ತುಗಳ ಖರೀದಿ ಭರಾಟೆ ಜೋರಾಗಿದ್ದು, ನಿನ್ನೆ ದೇವರಾಜ ಮಾರುಕಟ್ಟೆ, ಆಗ್ರಹಾರ, ಚಿಕ್ಕ ಮಾರುಕಟ್ಟೆ, ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಹೂವು, ಹಣ್ಣು, ಎಳ್ಳು, ಬೆಲ್ಲ, ಕಬ್ಬು ಖರೀದಿಗಾಗಿ ಜನರು ಮುಗಿಬಿದ್ದಿದ್ದರು, ಸಂಕ್ರಾಂತಿ ಸಮೃದ್ಧಿಯ ಸಂಕೇತ, ಎಳ್ಳು ಬೆಲ್ಲವ ತಿಂದು ಒಳ್ಳೆಯ ಮಾತನಾಡು ಎಂಬುದು ಹಿರಿಯರ ಪ್ರೀತಿಯ ಸಲಹೆ. ಹೀಗಾಗಿ ಹಬ್ಬದ ಅಂಗವಾಗಿ ಬಂಧುಗಳು, ಸ್ನೇಹಿತರ ಹಾಗೂ ಹಿತೈಷಿಗಳ ಮನೆಗಳಿಗೆ ತೆರಳಿ ಎಳ್ಳು, ಬೆಲ್ಲ, ಕಬ್ಬು ವಿನಿಮಯ ಮಾಡಿಕೊಳ್ಳುವ ಮೂಲಕ ಆತ್ಮೀಯ ಸಂಬಂಧಗಳಿಗೆ ಒತ್ತು ನೀಡುವ ಹಬ್ಬವಿದು. ಹೀಗಾಗಿ ಪ್ರಮುಖ ವೃತ್ತಗಳಲ್ಲಿ ವಸ್ತುಗಳ ಖರೀದಿಗೆ ಜನರು ಮುಂದಾಗಿದ್ದರು.
ಮಾರುಕಟ್ಟೆಯಲ್ಲಿ ಹುರಿದ ಕಡಲೇಬೀಜ 180 ರೂ : ಹಬ್ಬದ ಅಂಗವಾಗಿ ಹುರಿದ ಕಡಲೇ ಬೀಜ ಕೆಜಿ ಒಂದಕ್ಕೆ 180 ವರೆಗೆ ಮಾರಾಟವಾಗುತ್ತಿತ್ತು ಜೊತೆಗೆ ಕತ್ತರಿಸಿದ ಬೆಲ್ಲ ಕೆಜಿಗೆ 100 ರೂ. ಕತ್ತರಿಸಿದ ಕೊಬ್ಬರಿ ಕೆಜಿಗೆ 350 ರೂ, ಹುರಿಗಡಲೆ ಕೆಜಿಗೆ 120 ರೂ, ಸಕ್ಕರೆ ಅಚ್ಚು ಕೆಜಿಗೆ 120 ರೂ, ಗಳಿಂದ 200 ರೂ, ಗಳ ವರೆಗೂ ಮಾರಾಟವಾದವು.
ಕಬ್ಬಿನ ರಾಶಿ : ಸಂಕ್ರಾಂತಿ ಹಬ್ಬದ ಅಂಗವಾಗಿ ದೇವರಾಜ ಮಾರುಕಟ್ಟೆ, ಅಗ್ರಹಾರ, ಅಶೋಕ ವೃತ್ತ, ಕುವೆಂಪುನಗರ, ವಿವೇಕಾನಂದನಗರ, ಒಂಟಿಕೊಪ್ಪಲು ಸೇರಿದಂತೆ ವಿವಿಧ ಬಡಾವಣೆಗಳ ಪ್ರಮುಖ ವೃತ್ತಗಳಲ್ಲಿ ರೈತರು ಕಬ್ಬು ಮಾರಟ ಮಾಡುತ್ತಿದ್ದುದು ಕಂಡುಬಂತು. ಒಂದು ಜಲ್ಲೆ ಕಬ್ಬು 20 ರೂ. ಗಳಿಂದ 30 ರೂ. ವರೆಗೂ ಮಾರಾಟವಾಗುತ್ತಿತ್ತು.
50 ರೂ. ದಾಟಿದ ಸೇವಂತಿಗೆ : ಹಬ್ಬವೆಂದರೆ ಅಲ್ಲಿ ಹೂವು ಇರಲೇಬೇಕು. ಹೀಗಾಗಿ ಈ ಬಾರಿ ಸೇವಂತಿಗೆ ಹೂವು ತನ್ನ ಬೆಲೆಯನ್ನು ಹೆಚ್ಚಿಸಿಕೊಂಡಿದೆ.
ದಲ್ಲಾಳಿಗಳ ಗೋಜಿಗೆ ಹೋಗದ ಬಹುತೇಕ ರೈತರು ತಾವೇ ಖುದ್ದು ಹೂ ಮಾರಾಟಕ್ಕೆ ನಿಂತು ಪ್ರತಿ ಮಾರಿಗೆ 40 ರಿಂದ 60ರೂಗೆ ಮಾರಾಟ ಮಾಡಿ ಸಾಕಷ್ಟು ಲಾಭ ಮಾಡಿಕೊಂಡರು. ಉಳಿದಂತೆ ಮಾರುಕಟ್ಟೆಯಲ್ಲಿ ಮಲ್ಲಿಗೆ, ಕಾಕಡ, ಕನಕಾಂಬರ, ಸುಗಂದರಾಜ, ಗುಲಾಬಿ ಹೂಗಳನ್ನು ಕೂಡ ಸಾರ್ವಜನಿಕರು ಖರೀದಿಸಿದರು. ದುಬಾರಿಯಾದ ಅವರೆ: ಹಿಂದಿನ ವರ್ಷದಲ್ಲಿ 25 ರಿಂದ 30ರೂ.ಗೆ ದೊರಕುತ್ತಿದ್ದ ಅವರೇಕಾಯಿ, ಈ ಬಾರಿ 40 ರಿಂದ 50ರೂ. ಮುಟ್ಟುವ ಮೂಲಕ ದುಬಾರಿ ಎನಿಸಿಕೊಂಡಿದೆ.
ದರ ಏರಿಕೆ ಕಾಣದ ತರಕಾರಿ : ಹಬ್ಬದ ಪ್ರಯುಕ್ತ ಬೀನ್ಸ್, ನುಗ್ಗೆ 40 ರಿಂದ 60ರೂ. ವರೆಗೆ ಏರಿಕೆಯಾಗಿದೆ ಎಂಬುದನ್ನು ಬಿಟ್ಟರೆ ಇನ್ನಿತರ ತರಕಾರಿಗಳ ಬೆಲೆ ಹೆಚ್ಚಳವಾಗಿಲ್ಲ ಎಂಬುದೇ ಸಮಾಧಾನಕರ ಸಂಗತಿ. ಮಾರುಕಟ್ಟೆಯಲ್ಲಿ ಸೋಮವಾರ ಕೆಜಿ ಕ್ಯಾರೇಟ್, ಬೀಟ್‍ರೋಟ್, ಹಸಿ ಬಟಾಣಿ, ಬದನೆ, ಹೂ ಕೋಸು 25 ರಿಂದ 40ರೂ., ಬೆಂಡೆಕಾಯಿ 25ರೂ. ಪಡುವಲ, ಸೋರೆಕಾಯಿ, ಹೀರೇಕಾಯಿ 20 ರಿಂದ 25ರೂ., ಉಳಿದಂತೆ ಸೌತೇಕಾಯಿ, ಹಸಿ ಮೆಣಸಿನಕಾಯಿ, ನಿಂಬೆ ಹಣ್ಣು ಹಾಗೂ ಇನ್ನಿತರ ತರಕಾರಿಗಳು ಸಾಕಷ್ಟು ಅಗ್ಗದ ಬೆಲೆಯಲ್ಲಿ ಮಾರಾಟವಾದವು.
ಪ್ಲಾಸ್ಟಿಕ್ ಡಬ್ಬಗಳಿಗೆ ಬೇಡಿಕೆ
ಈ ಹಿಂದೆ ಕಾಗದದ ಕವರ್ ಅಥವಾ ಪ್ಲಾಸ್ಟಿಕ್ ಕವರ್‍ಗಳಲ್ಲಿ ಎಳ್ಳು ಬೆಲ್ಲವನ್ನು ನೀಡಲಾಗುತ್ತಿತ್ತು. ಆದರೀಗ ಅವುಗಳ ಜಾಗವನ್ನು ಪ್ಲಾಸ್ಟಿಕ್ ಡಬ್ಬಿಗಳು ಆವರಿಸಿಕೊಂಡಿವೆ, ಹೀಗಾಗಿ ದೇವರಾಜ ಮಾರುಕಟ್ಟೆಯ ಶಿವರಾಮಪೇಟೆ, ಅಗ್ರಹಾರ, ವಿದ್ಯಾರಣ್ಯಪುರಂ ಹಾಗೂ ಇನ್ನಿತರ ಕಡೆಗಳ ಪ್ಲಾಸಿಕ್ ಮಾರಾಟ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಡಬ್ಬಿಗಳು ಸಾಕಷ್ಟು ಬಿಕರಿಯಾದವು.

Leave a Comment