ಮಂದಿರ ನಿರ್ಮಾಣಕ್ಕೆ ಬಿಜೆಪಿ ಬದ್ಧ

ಅಯೋಧ್ಯೆ, ಡಿ. ೬- ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಬಿಜೆಪಿಯ ಬದ್ಧತೆಗಳಲ್ಲಿ ಒಂದು.ಈ ಸಂಬಂಧ ಎರಡೂ ಪಕ್ಷಗಳ ನಡುವೆ ಒಪ್ಪಂದಕ್ಕೂ ಸಿದ್ಧವಿರುವುದಾಗಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಇಂದಿಲ್ಲಿ ಹೇಳಿದ್ದಾರೆ.
ರಾಮಜನ್ಮಭೂಮಿಯ ಚಳವಳಿಯಿಂದಲೇ ರಾಜಕೀಯಕ್ಕೆ ಧುಮುಕಿ ಈ ಸ್ಥಾನಮಾನ ಪಡೆದಿದ್ದೇನೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ನಮ್ಮ ಆಧ್ಯತೆ.ಈ ವಿಷಯದಲ್ಲಿ ಮತ್ತೊಬ್ಬರಿಂದ (ಉದ್ಧವ್ ಠಾಕ್ರೆ) ಅವರಿಂದ ಹೇಳಿಸಿಕೊಂಡು ನಿರ್ಮಾಣ ಮಾಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಕಳೆದ ತಿಂಗಳು ಅಯೋಧ್ಯೆಗೆ ಭೇಟಿ ನೀಡಿದ್ದ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ, ರಾಮಮಂದಿರ ನಿರ್ಮಾಣಕ್ಕೆ ಶೀಘ್ರ ಅಡಿಗಲ್ಲು ಹಾಕದಿದ್ದರೆ ಹೋರಾಟ, ಜೈಲಿಗೆ ಹೋಗಲೂ ಸಿದ್ಧವಿರುವುದಾಗಿ ಹೇಳಿದ್ದರು.
ಈ ಸಂಬಂಧ ಇಂದು ಪ್ರತಿಕ್ರಿಯಿಸಿರುವ ಅವರು, ಸುಪ್ರೀಂಕೋರ್ಟ್‌ನ ಆದೇಶದನ್ವಯ ಪರಸ್ಪರ ಸಮ್ಮತಿ ಹಾಗೂ ಸೌಹಾರ್ದಯುತವಾಗಿ ಹಿಂದೂಪರ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಮಂದಿರ ನಿರ್ಮಾಣಕ್ಕೆ ಸಿದ್ಧರಿರುವುದಾಗಿ ಹೇಳಿದರು.
ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ 26 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಕರ ಸೇವಕರು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿರುವುದು ಸುವರ್ಣಾಕ್ಷರಗಳಲ್ಲಿ ಬರೆಯುವಂತದ್ದು ಎಂದು ಹೇಳಿದ್ದಾರೆ.
ದೇಶದ ವಿವಿಧೆಡೆಯಲ್ಲಿರುವ ಜನರು, ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳಿಂದ ರಾಮಮಂದಿರ ನಿರ್ಮಾಣಕ್ಕೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಬಿಜೆಪಿ ರಾಮಮಂದಿರ ನಿರ್ಮಾಣ ಮಾ‌ಡಲು ಸಿದ್ಧವಿದೆ. ಈ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಮತ್ತೊಬ್ಬರಿಂದ ಹೇಳಿಸಿಕೊಂಡು ರಾಮಮಂದಿರ ನಿರ್ಮಾಣ ಮಾ‌ಡುವ ಅಗತ್ಯವೂ ಇಲ್ಲ ಎಂದು ಹೇಳಿದ್ದಾರೆ.

Leave a Comment