ಮಂಡ್ಯ ಕುರುಡು ಕಾಂಚಾಣದ ಸದ್ದು

ಮಂಡ್ಯ, ಏ. ೧೩- ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರನ್ನು ಶತಾಯ – ಗತಾಯ ಸೋಲಿಸಿ, ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸಲು ಪಣ ತೊಟ್ಟಿರುವ ಜೆಡಿಎಸ್ ಪಡೆ ಮಂಡ್ಯ ಕ್ಷೇತ್ರದಲ್ಲಿ ಕುರುಡು ಕಾಂಚಾಣವನ್ನು ಹರಿದಾಡಿಸುತ್ತಿದೆ.

ಪ್ರತಿ ಬೂತ್‌ಗೆ 5 ಲಕ್ಷ ರೂ. ಗಳಂತೆ ಸರಿಸುಮಾರು 150 ಕೋಟಿ ರೂ. ಗಳನ್ನು ಕ್ಷೇತ್ರದಾದ್ಯಂತ ಖರ್ಚು ಮಾಡಲು ಜೆಡಿಎಸ್ ಮುಂದಾಗಿರುವ ಆಘಾತಕಾರಿ ಸಂಗತಿ ಆಡಿಯೋ ಟೇಪ್‌ನಿಂದ ಬೆಳಕಿಗೆ ಬಂದಿದೆ.

ಸಂಸದ ಶಿವರಾಮೇಗೌಡ ಅವರ ಪುತ್ರ ಚೇತನ್ ಗೌಡ ಹಾಗೂ ಜೆಡಿಎಸ್‌ನ ಮಾಜಿ ಮುಖಂಡ ಪಿ. ರಮೇಶ್ ನಡುವೆ ನಡೆದಿದೆ ಎನ್ನಲಾದ 150 ಕೋಟಿ ರೂ. ಹಣದ ಹಂಚಿಕೆ ವಿಚಾರ ಮಂಡ್ಯ ಕ್ಷೇತ್ರದಲ್ಲದೆ, ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ.

ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಸೋಲಿಸಿ, ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಎಷ್ಟು ಖರ್ಚಾದರೂ ಸರಿ ಅದನ್ನು ನಿಭಾಯಿಸೋಣ ಇದಕ್ಕಾಗಿ ಪ್ರತಿ ಬೂತ್‌ಗೆ 5 ಲಕ್ಷ ರೂ. ನಂತೆ ಹಣ ತೆಗೆದಿರಿಸಿದ್ದು, ಒಟ್ಟಾರೆ 150 ಕೋಟಿ ರೂ. ಸಂಗ್ರಹಿಸಲಾಗಿದೆ ಎನ್ನುವ ಈ ಇಬ್ಬರು ನಾಯಕರ ಸಂಭಾಷಣೆ ಹಲವು ಅನುಮಾನಕ್ಕೆ ಕಾರಣವಾಗಿದೆ.

ಈ ಇಬ್ಬರೂ ಮುಖಂಡರು ನಡೆಸಿರುವ ಮಾತುಕತೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು, ಜೆಡಿಎಸ್ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮೊದಲೇ ಸಂಶಯವಿತ್ತು

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕುರುಡು ಕಾಂಚಾಣವನ್ನು ಎಗ್ಗಿಲ್ಲದೆ ಹಂಚುವ ಬಗ್ಗೆ ಮೊದಲೇ ಸಂಶಯವಿತ್ತು. ಈಗ ಆಡಿಯೋ ಬಹಿರಂಗಗೊಂಡಿರುವುದು ಅನುಮಾನಕ್ಕೆ ಮತ್ತಷ್ಟು ರೆಕ್ಕೆ-ಪುಕ್ಕ ಸಿಕ್ಕಿದೆ. ಚುನಾವಣೆಯಲ್ಲಿ ಗೆಲ್ಲಲು ಏನು ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ ಇದೇ ತಾಜಾ ಉದಾಹರಣೆ.

– ಸುಮಲತಾ ಅಂಬರೀಶ್, ಪಕ್ಷೇತರ ಅಭ್ಯರ್ಥಿ

ಆಡಿಯೋ ನಕಲಿ

ತಮ್ಮ ಪುತ್ರ 2 – 3 ದಿನಗಳಿಂದ ಕೈಗೇ ಸಿಕ್ಕಿಲ್ಲ, ಪುತ್ರನ ಹೆಸರಿಗೆ ಕಳಂಕ ತರಲು ಕುತಂತ್ರ ನಡೆಸಲಾಗಿದೆ. ಆಡಿಯೋ ಸಂಪೂರ್ಣ ನಕಲಿ, ಇದಕ್ಕೂ ತಮ್ಮ ಪುತ್ರನಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆ, ಇನ್ನೂ ಏನೇನು ಬರುತ್ತದೋ ಬಲ್ಲವರಾರು.

– ಎಲ್.ಆರ್.  ಶಿವರಾಮೇಗೌಡ, ಮಂಡ್ಯ ಸಂಸದ

1 Comment on this Post

  1. Vinoda karnam

    ರಾಧಿಕಾ ಕುಮಾರಸ್ವಾಮಿ ಮಾಯಾಂಗನೆ . ಸಿನಿಮಾದಲ್ಲಿ ನಟಿಸುವಾಕೆ. ಟೂರಿಂಗ್ ಟಾಕೀಸ್. ಅಂತ ಕುಮಾರಸ್ವಾಮಿ ಮುಂದೆ ಶಿವರಾಮೇಗೌಡ ಹೇಳಲಿ ನೋಡೋಣ. ಶಿವರಾಮೇಗೌಡ ಮಾಯಾಂಗನೆ ಯರ ಮಧ್ಯೆದಲ್ಲಿ ಬೆಳೆದಿರುವುದರಿಂದ ಸುಮಲತಾ ಮಾಯಾಂಗನೆ ಅನಿಸಿರಬೇಕು. ನಾನು ಹಳ್ಳಿ ಹೆಣ್ಣು ಮಗಳು. ನಾನು ಏಕವಚನ ದಲ್ಲೇ ಮಾತಾಡೋದು. ಒಂಟಿ ಹೆಣ್ಣನ್ನು ಸೋಲಿಸಲು ಮೀಸೆ ಹೊತ್ತ ಘಟಾನುಘಟಿ ಗಂಡಸರು ಕುತಂತ್ರದ ಮೊರೆ ಹೋಗಿದ್ದಾರೆ

    Reply

Leave a Comment