ಮಂಡ್ಯ ಎಸ್‌ಪಿಗೆ ಸಿಎಂ ದಮ್ಕಿ ಪರಮೇಶ್ವರ್ ಸಮರ್ಥನೆ

ಚಿಕ್ಕಮಗಳೂರು, ಏ. ೨೧- ಮಂಡ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ತೋರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ರೆಡ್ಡಿ ಅವರಿಗೆ ಸಿಎಂ ಜೋರು ಮಾಡಿದ್ದು ಸರಿಯಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ವೇಳೆ ಕಪ್ಪು ಬಾವುಟ ತೋರಿಸುವ ಬದಲು ಕಲ್ಲು ಎಸೆದಿದ್ದರೆ ಏನಾಗ್ತಿತ್ತು? ಹೀಗಾಗಿ ಸಿಎಂ ಎಸ್ಪಿಗೆ ಜೋರು ಮಾಡಿದ್ದು ಸರಿ. ಈ ವಿಚಾರದ ಬಗ್ಗೆ ಈಗಾಗಲೇ ಮಂಡ್ಯ ಎಸ್ಪಿ ಬಳಿ ಮಾತನಾಡಿದ್ದೇನೆ. ಅಲ್ಲದೇ ಘಟನೆ ನಡೆದ ಸಂದರ್ಭ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶೆಟ್ಟರ್ ಹೇಳಿಕೆಗೆ ತಿರುಗೇಟು: ಉಪಚುನಾವಣೆಯಲ್ಲಿ ಗೆದ್ದು ಐಸಿಯುನಲ್ಲಿದ್ದ ಕಾಂಗ್ರೆಸ್ ಸರ್ಕಾರ ಚೇತರಿಸಿಕೊಂಡಿದೆ ಎಂಬ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್‌ರವರು, ಜಗದೀಶ್ ಶೆಟ್ಟರ್ ಬಾಯಿಗೆ ಬಂದಂತೆ ಮಾತನಾಡಬಾರದು. 2013ರಲ್ಲಿ ಬಿಜೆಪಿ ಸರ್ಕಾರ ಅಡಳಿತದಲ್ಲಿತ್ತು. 20 ಉಪಚುನಾವಣೆಗಳು ನಡೆದವು. ಅವರು ಸಹ ಹಣ ಹಾಗೂ ಹೆಂಡದ ಹೊಳೆ ಹರಿಸಿದ್ದಾರೆ ಅಂತ ನಾವು ಹೇಳಬೇಕಾಗುತ್ತದೆ. ಇದು ಮತದಾರರು ನೀಡಿರುವ ತೀರ್ಪು. ಸರ್ಕಾರ ಹಾಗೂ ಸಿಎಂ ಅಭಿವೃದ್ಧಿ ಕಾರ್ಯಗಳೇ ನಮ್ಮ ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಿದರು.
ಉಪಚುನಾವಣೆ ಫಲಿತಾಂಶ 2018ರ ಸೆಮಿಫೈನಲ್ ಎಂದು ಯಡಿಯೂರಪ್ಪ ಹೇಳಿದ್ದನ್ನು ಸ್ಮರಿಸಿದ ಅವರು, ಬಿಜೆಪಿ ಸೆಮಿಫೈನಲ್‌ನಲ್ಲಿ ಸೋತಿದೆ. ಸೆಮಿಫೈನಲ್‌ನಲ್ಲಿ ಸೋತವರು ಎಲ್ಲಿಗೆ ಹೋಗುತ್ತಾರೆ? ಆದರೂ 150 ಸೀಟ್ ಗೆಲ್ಲುತ್ತೇವೆ ಎಂದು ಹೇಳ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Leave a Comment