ಮಂಡ್ಯದ ಕೆರೆ ಕಾಮೇಗೌಡರನ್ನು ಮನ್ ಕಿ ಬಾತ್ ನಲ್ಲಿ ಸ್ಮರಣೆ: ಕರ್ನಾಟಕದ ಅಳಿಗುಳಿ ಮನೆ ಆಟ ಆಡುವಂತೆ ಕರೆ ನೀಡಿ ಮೋದಿ

ನವದೆಹಲಿ, ಜೂ, 28 -ಮಂಡ್ಯದಲ್ಲಿ ಕೆರೆಗಳನ್ನು ನಿರ್ಮಿಸಿ ಹೆಸರಾಗಿರುವ ಕಾಮೇಗೌಡರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೊಂಡಾಡಿದ್ದಾರೆ.
ತಮ್ಮ 66 ನೇ ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿರುವ ಅವರು, ಜಲ ರಕ್ಷಣೆಗೆ ಕಾಮೇಗೌಡರು ಬಹುದೊಡ್ಡ ಅಭಿಯಾನವನ್ನೇ ನಡೆಸಿರುವುದಾಗಿ ಹೇಳಿಕೊಂಡಿದ್ದಾರೆ.

“ಮಂಡ್ಯದಲ್ಲಿ 80-85 ವಯೋಮಾನದ ಒಬ್ಬ ಹಿರಿಯರಿದ್ದಾರೆ. ಅವರೇ ಕಾಮೇಗೌಡ, ಅವರೊಬ್ಬ ಸಾಮಾನ್ಯ ರೈತ. ಆದರೆ ಅವರ ವ್ಯಕ್ತಿತ್ವ ಅಸಾಧಾರಣ. ಅವರು ಮಾಡಿರುವ ಕೆಲಸವನ್ನು ಕೇಳಿದರೆ ಯಾರಿಗಾದರೂ ಅಚ್ಚರಿಯಾಗುತ್ತದೆ. ಹಿರಿಯ ನಾಗರಿಕರಾದ ಕಾಮೇಗೌಡರು ತಮ್ಮ ಜಾನುವಾರುಗಳನ್ನು ಮೇಯಿಸುತ್ತಾರೆ, ಆದರೆ, ಜತೆಜತೆಗೇ ತಮ್ಮ ಜಮೀನಿನಲ್ಲಿ ಹೊಸ ಕೆರೆಯೊಂದನ್ನು ನಿರ್ಮಿಸುವ ಕೈಂಕರ್ಯವನ್ನೂ ಮಾಡುತ್ತಾ”

ಕಾಮೇಗೌಡರು ತಮ್ಮ ಪ್ರದೇಶದಲ್ಲಿ ನೀರಿನ ಸಮಸ್ಯೆಯನ್ನು ನಿವಾರಿಸಲು ಬಯಸುತ್ತಾರೆ. ಜಲ ಸಂರಕ್ಷಣೆಗಾಗಿ ಸಣ್ಣ ಸಣ್ಣ ಕೆರೆಗಳನ್ನು ನಿರ್ಮಿಸುವ ಕಾಯಕದಲ್ಲಿ ಅವರು ತಲ್ಲೀನರಾಗಿರುತ್ತಾರೆ. ಇಲ್ಲಿಯವರೆಗೆ ಸುಮಾರು ೧೬ ಕೆರೆಗಳನ್ನು ನಿರ್ಮಿಸಿದ್ದಾರೆ ಎಂದು ಕೇಳಿದರೆ ನೀವು ಚಕಿತರಾಗುತ್ತೀರಿ. ಇವೆಲ್ಲವನ್ನೂ ಅವರು ತಮ್ಮ ಪ್ರಯತ್ನದಿಂದ, ಪರಿಶ್ರಮದಿಂದಲೇ ನಿರ್ಮಿಸಿದ್ದಾರೆ. ಅವರು ಕಟ್ಟಿರುವ ಈ ಕೆರೆಗಳು ಬಹಳ ದೊಡ್ಡದಾಗಿರಲಿಕ್ಕಿಲ್ಲ, ಆದರೆ, ಅವರ ಪ್ರಯತ್ನ ಬಹಳ ದೊಡ್ಡದು. ಇವರ ಕೆರೆಗಳಿಂದ ಇಂದು ಆ ಇಡೀ ಪ್ರದೇಶಕ್ಕೆ ಹೊಸ ಜೀವನ ಸಿಕ್ಕಿದೆ ಎಂದಿದ್ದಾರೆ.
ನಮ್ಮ ದೇಶದಲ್ಲಿ ಪಾರಂಪರಿಕ ಆಟಗಳ ಸಮೃದ್ಧ ಆನುವಂಶಿಕತೆಯೇ ಇದೆ. ಅವುಗಳಲ್ಲಿ ಒಂದು ಆಟದ ಹೆಸರನ್ನು ನೀವು ಕೇಳಿದ್ದಿರಬಹುದು ಈ ಆಟವನ್ನು ತಮಿಳುನಾಡಿನಲ್ಲಿ ಪಲ್ಲಾಂಗುಳಿ’ ಎಂದು, ಕರ್ನಾಟಕದಲ್ಲಿ ಅಳಿಗುಳಿ ಮಣೆ’ ಎಂದು ಮತ್ತು ಆಂಧ್ರಪ್ರದೇಶದಲ್ಲಿ ವಾಮನ ಗುಂಟಲೂ’ ಎನ್ನುವ ಹೆಸರಿನಲ್ಲಿ ಆಡಲಾಗುತ್ತದೆ. ಇದೊಂದು ರೀತಿಯ ತಂತ್ರಗಾರಿಕೆಯ ಆಟವಾಗಿದೆ. ಇದರಲ್ಲಿ ಮಣೆಯ ಉಪಯೋಗ ಮಾಡಲಾಗುತ್ತದೆ. ಅನೇಕ ಗುಳಿಗಳಿರುತ್ತವೆ, ಅವುಗಳಲ್ಲಿ ಬಳಸುವ ಗೋಲಿ ಅಥವಾ ಬೀಜಗಳನ್ನು ಆಟಗಾರರು ಹಿಡಿಯಬೇಕಿರುತ್ತದೆ. ಈ ಆಟವನ್ನು ದಕ್ಷಿಣ ಭಾರತದಿಂದ ದಕ್ಷಿಣ-ಪೂರ್ವ ಏಷ್ಯಾ ಹಾಗೂ ಇಡೀ ಜಗತ್ತಿನಲ್ಲಿ ಆಡುವುದು ವಿಶೇಷ ಎಂದಿದ್ದಾರೆ.
ಇಂದು ಪ್ರತಿಯೊಂದು ಮಗುವೂ ಹಾವು-ಏಣಿ ಆಟವನ್ನು ಆಡುವುದನ್ನು ತಿಳಿದಿದೆ. ಆದರೆ, ಇದು ಸಹ ಭಾರತೀಯ ಪಾರಂಪರಿಕ ರೂಪದ ಆಟವೇ ಆಗಿದ್ದು, ಇದಕ್ಕೆ ಮೋಕ್ಷ ಪಟ ಅಥವಾ ಪರಮಪದ ಎಂದು ಹೇಳಲಾಗುತ್ತದೆ. ನಮ್ಮಲ್ಲಿನ ಇನ್ನೊಂದು ಪಾರಂಪರಿಕ ಆಟವೆಂದರೆ, ಹರಳಿನ ಆಟ. ಇದನ್ನು ದೊಡ್ಡವರು ಚಿಕ್ಕವರೆಲ್ಲರೂ ಆಡುತ್ತಾರೆ. ಒಂದೇ ಗಾತ್ರದ ಐದು ಕಲ್ಲಿನ ಹರಳುಗಳನ್ನು ಆಯ್ದುಕೊಂಡು ಈ ಆಟವನ್ನು ಆಡಲು ಸಿದ್ಧರಾಗಬಹುದು. ಒಂದು ಕಲ್ಲನ್ನು ಮೇಲಕ್ಕೆ ಎಸೆದು ಅದು ಮೇಲೆ ಗಾಳಿಯಲ್ಲಿರುವ ಅಲ್ಪ ಅವಧಿಯಲ್ಲೇ ಕೆಳಗ್ಗೆ ಬಿದ್ದಿರುವ ಉಳಿದ ಕಲ್ಲುಗಳನ್ನು ಆರಿಸಬೇಕಿರುತ್ತದೆ. ಸಾಮಾನ್ಯವಾಗಿ, ನಮ್ಮ ನೆಲದ ಒಳಾಂಗಣ ಆಟಗಳನ್ನು ಆಡಲು ಯಾವುದೇ ದೊಡ್ಡ ಸಾಧನಗಳ ಅಗತ್ಯವಿಲ್ಲ. ಯಾರಾದರೂ ಒಂದು ಚಾಕ್ ಪೀಸ್ ಅಥವಾ ಕಲ್ಲನ್ನು ತಂದರೂ ಅದರಿಂದಲೇ ನೆಲದ ಮೇಲೆ ಒಂದು ಚಿತ್ರ ಬಿಡಿಸಿ ಆಡವಾಡಲು ಆರಂಭಿಸುತ್ತಾರೆ. ಯಾವ ಆಟದಲ್ಲಿ ದಾಳಗಳ ಅಗತ್ಯವಿದೆಯೋ ಅಲ್ಲೆಲ್ಲ ಕವಡೆಗಳು ಅಥವಾ ಹುಣಸೆಹಣ್ಣಿನ ಬೀಜಗಳಿಂದಲೇ ಕೆಲಸವಾಗುತ್ತದೆ. ಎಲ್ಲರೂ ಸಹ ಇಂತಹ ಆಟ ಆಡಿ ಎಂದು ಮೋದಿ ಕರೆ ನೀಡಿದ್ದಾರೆ.

Share

Leave a Comment