ಮಂಡೂರಿನಲ್ಲಿ ಕೃಷಿ ಉದ್ಯೋಗ ಮೇಳ

ಕೆ.ಆರ್. ಪುರ, ಆ. ೨೫- ಬೆಂಗಳೂರು ಪೂರ್ವ ತಾಲೂಕು ಮಟ್ಟದ ಕೃಷಿ ಉದ್ಯೋಗ ಮೇಳವನ್ನು ಇದೆ ೨೬ ರಂದು ಮಂಡೂರಿನಲ್ಲಿ ಹಮ್ಮಿಕೊಂಡಿದ್ದು ರೈತರು ಹಾಗೂ ಯುವಕರು ಅಗಮಿಸಿ ಮೇಳ ಸದುಪಯೋಗ ಪಡಿಸಿಕೊಳ್ಳಬೇಕಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಕೆಂಪರಾಜ್ ಮನವಿ ಮಾಡಿದ್ದಾರೆ.
ಬಿದರಹಳ್ಳಿಯಲ್ಲಿರುವ ರೈತ ಸಂಪರ್ಕ ಕೇಂದ್ರ ಕಚೇರಿಯಲ್ಲಿ ಸಮಗ್ರ ಕೃಷಿ ಅಭಿಯಾನ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲೆ ಇದೇ ಮೊದಲ ಭಾರಿಗೆ ಬರಡು ಭೂಮಿಯಲ್ಲಿ ಬಂಗಾರ ಎಂಬ ಕಾರ್ಯಕ್ರಮದಡಿ ರೈತರು ಹಾಗೂ ರೈತರ ಮಕ್ಕಳು ಬರಡು ಭೂಮಿಯಲ್ಲಿ ವೈಜ್ಞಾನಿಕವಾಗಿ ಮಿಶ್ರ ಬೆಳೆಗಳನ್ನು ಬೆಳೆಯುವ ಮೂಲಕ
ಹಣಗಳಿಸುವ ವ್ಯವಸ್ಥೆ ಬಗ್ಗೆ ತಿಳಿಸಲಾಗುವುದು ಎಂದರು.
ಸರ್ಕಾರ ನೀಲಗಿರಿ ಬೆಳೆಯನ್ನು ನಿಷೇದಿಸಿರುವುದರಿಂದ ಅದರ ಪರ್ಯಾಯವಾಗಿ ಒಂದಕ್ಕೆ ನಾಲ್ಕರಷ್ಟು ಆದಾಯ ಗಳಿಸುವಂತಹ ಶ್ರೀಗಂಧ, ಹಲಸು, ನೇರಳೆ , ಬಿಲ್ಲಪತ್ರೆ, ಸಿಲ್ವರ್ ಓಕ್, ಹೆಬ್ಬೆವು, ಸಂಪಿಗೆ ,ನುಗ್ಗೆ ಇತ್ಯಾದಿ ಮರಗಳನ್ನು ಬೆಳೆಸುವುದರಿಂದ ಪರಿಸರ ಸಂರಕ್ಷಣೆ ಜೊತೆಗೆ ರೈತರು ಮತ್ತು ರೈತರ ಮಕ್ಕಳು
ಕಾರ್ಖಾನೆಗಳ ಮೇಲೆ ಅವಲಂಬಿತರಾಗದೆ ಆರ್ಥಿಕವಾಗಿ ಸದೃಢ ರಾಗಲು ಇದು ಸಹಕಾರಿಯಾಗಲಿದೆ ಎಂದರು.
ಸೋಮವಾರ ನಡೆಯುವ ಕೃಷಿ ಉದ್ಯೋಗ ಮೇಳದಲ್ಲಿ ಅರಣ್ಯ ಇಲಾಖೆ, ಕೃಷಿ ಇಲಾಖೆ, ಮೀನುಗಾರಿಗೆ, ಪಶು ಇಲಾಖೆ, ತೋಟಗಾರಿಕೆ, ಆರೋಗ್ಯ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು
ಭಾಗವಹಿಸಿ ತಮ್ಮ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ್ಳ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಅಲ್ಲದೆ ಈ ಮೇಳದಲ್ಲಿ ಟ್ರಾಕ್ಟರ್ ಗಳು, ಪವರ್ ವಿಂಡರ್, ದೇಸಿ ತಳಿಯ ರಾಸುಗಳು, ಕುರಿ-ಮೇಕೆಗಳು, ಸಿರಿಧಾನ್ಯ ಗಳ ಪ್ರದರ್ಶನವನ್ನು ಮಾಡಲಾಗುವುದು ಎಂದು ತಿಳಿಸಿದರು.
ಅಭಿಯಾನ ವಾಹನವು ಬೆಂಗಳೂರು ಪೂರ್ವ ತಾಲೂಕಿನ ಗ್ರಾಮಗಳಲ್ಲಿ ಎರಡು ದಿನಗಳ ಕಾಲ ಪ್ರಚಾರ ಕಾರ್ಯ ನಡೆಸಲಿದ್ದು ಹೆಚ್ಚಿನ ಸಂಖ್ಯೆಯ ರೈತರು ಹಾಗೂ ಯುವ ಸಮೂಹ ಈ ಮೇಳದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕಾಗಿ ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಮುನಿರಾಜು, ಮುಖಂಡರಾದ ನಟರಾಜ್, ಸಹಾಯಕ ಕೃಷಿ ಆಧಿಕಾರಿ ನರಸಿಂಹ ಮೂರ್ತಿ , ರಾಂಪುರ ಗಜೇಂದ್ರ ಇದ್ದರು.

 

Leave a Comment