ಮಂಜೇಶ್ವರ ಬಿರುಸಿನ ಮತದಾನ

ಕಾಸರಗೋಡು, ಅ.೨೧- ಶಾಸಕರಾಗಿದ್ದ ಪಿ.ಬಿ.ಅಬ್ದುರ್ರಝಾಕ್ ಅವರ ನಿಧನದಿಂದ ತೆರವಾಗಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಇಂದು ಬೆಳಗ್ಗೆ ಆರಂಭಗೊಂಡಿದ್ದು ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಮತದಾನ ಮುಂದುವರಿದಿದೆ.

ಮಂಜೇಶ್ವರದಲ್ಲಿ ಇದೇ ಮೊದಲ ಬಾರಿಗೆ ಉಪಚುನಾವಣೆ ನಡೆಯುತ್ತಿದ್ದು ತ್ರಿಕೋನ ಸ್ಪರ್ಧೆಯ ಮೂಲಕ ಗಮನ ಸೆಳೆಯುತ್ತಿದೆ. ೨೦೧೭ರಲ್ಲಿ ನಡೆದ ಚುನಾವಣೆಯಲ್ಲಿ ಯುಡಿಎಫ್‌ನ ಪಿ.ಬಿ.ಅಬ್ದುರ್ರಝಾಕ್ ಅವರು ಬಿಜೆಪಿಯ ಕೆ.ಸುರೇಂದ್ರನ್ ವಿರುದ್ಧ ಕೇವಲ ೮೯ ಮತಗಳಿಂದ ಗೆಲುವು ಸಾಧಿಸಿದ್ದರು. ಇದೇ ಕಾರಣಕ್ಕೆ ಈ ಬಾರಿಯ ಚುನಾವಣೆ ರಾಷ್ಟ್ರ ಮಟ್ಟದಲ್ಲೇ ಗಮನಸೆಳೆಯುತ್ತಿದೆ. ೨,೧೪,೭೯೯ ಮತದಾರರನ್ನು ಹೊಂದಿರುವ ಮಂಜೇಶ್ವರದಲ್ಲಿ  ಕ್ಷೇತ್ರದಲ್ಲಿ ೧೯೮ ಮತಗಟ್ಟೆಗಳಲ್ಲಿ ಬೆಳಗ್ಗೆ ಏಳು ಗಂಟೆಗೆ ಮತದಾನ ಆರಂಭಗೊಂಡಿದ್ದು ಸಂಜೆ ಆರರ ತನಕ ನಡೆಯಲಿದೆ. ೨೦ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ. ಎಲ್ಲ ೧೯೮ ಮತಗಟ್ಟೆಗಳಲ್ಲಿ ಮತದಾರರ ವೀಡಿಯೋ ರೆಕಾರ್ಡಿಂಗ್ ನಡೆಸಲಾಗುತ್ತಿದೆ. ಯುಡಿಎಫ್‌ನಿಂದ ಎಂ.ಸಿ.ಖಮರುದ್ದೀನ್, ಎಲ್‌ಡಿಎಫ್‌ನಿಂದ ಎಂ.ಶಂಕರ ರೈ ಹಾಗೂ ಬಿಜೆಪಿಯಿಂದ ಕುಂಟಾರು ರವೀಶ ತಂತ್ರಿ ಸೇರಿದಂತೆ ಒಟ್ಟು ಏಳು ಮಂದಿಯ ರಾಜಕೀಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

Leave a Comment