ಮಂಚಿಕೆರೆ ಭೂಮಿಯಲ್ಲಿ ಬಿರುಕು ಭೂ ವಿಜ್ಞಾನಿಗಳಿಂದ ಪರಿಶೀಲನೆ

 

ಉಡುಪಿ, ಜೂ.೨೦- ೮೦ ಬಡಗುಬೆಟ್ಟು ಗ್ರಾಪಂ ವ್ಯಾಪ್ತಿಯ ಮಣಿಪಾಲ- ಅಲೆವೂರು ರಸ್ತೆಯ ಮಂಚಿಕೆರೆ ಎಂಬಲ್ಲಿ ಭೂಮಿ ಹಾಗೂ ಮನೆಗಳ ಗೋಡೆ ಗಳಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಉಡುಪಿಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅಂತರ್ಜಲ ಪ್ರಾಧಿಕಾರದ ಭೂ ವಿಜ್ಞಾನಿಗಳ ತಂಡ ನಿನ್ನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಿರಿಯ ಭೂವಿಜ್ಞಾನಿ ರಾನ್‌ಜಿ ನಾಯ್ಕ ನೇತೃತ್ವದಲ್ಲಿ ಭೂ ವಿಜ್ಞಾನಿಗಳಾದ ಮಹೇಶ್, ಡಾ.ಮಹದೇಶ್ವರ, ಗೌತಮ್ ಶಾಸ್ತ್ರಿ, ಸಂಧ್ಯಾ, ಅಂತರ್ಜಲ ಪ್ರಾಧಿಕಾರದ ಪ್ರಭಾರ ಹಿರಿಯ ಭೂ ವಿಜ್ಞಾನಿ ಡಾ.ದಿನಕರ ಶೆಟ್ಟಿ, ಕಂದಾಯ ನಿರೀಕ್ಷಕ ಉಪೇಂದ್ರ ತಂಡ ಮಂಚಿಕೆರೆಯ ಭೌಗೋಳಿಕ ಶಿಲಾ ರಚನೆಯ ಬಗ್ಗೆ ಅಧ್ಯಯನ ನಡೆಸಿತು. ಬಿರುಕು ಬಿಟ್ಟ ಮಂಚಿಕೆರೆಯ ನಾಗಬ್ರಹ್ಮಸ್ಥಾನದ ಎದುರಿನ ಎರಡನೆ ಅಡ್ಡ ರಸ್ತೆಯ ಭೂಮಿ, ಮುರಕಲ್ಲಿನ ಪ್ರದೇಶ, ಮುಖ್ಯರಸ್ತೆಯ ಇನ್ನೊಂದು ಭಾಗ ದಲ್ಲಿರುವ ರಮೇಶ್ ನಾಯ್ಕೊ ಹಾಗೂ ಲೋಕೇಶ್ ದೇವಾಡಿಗ ಎಂಬವರ ಬಿರುಕು ಬಿಟ್ಟ ಗೋಡೆ, ಬಾವಿ, ಕಂಪೌಂಡು ಮತ್ತು ಅಲ್ಲೇ ಸಮೀಪದಲ್ಲಿ ಮಳೆಯ ನೀರು ಬಿರುಕಿನೊಳಗೆ ಹರಿದು ಸೇರುವ ಸ್ಥಳಗಳ ಬಗ್ಗೆ ಕೂಲಂಕಷ ವಾಗಿ ಪರಿಶೀಲನೆ ನಡೆಲಾಯಿತು. ‘ಮಂಚಿಕೆರೆಯ ಭೌಗೋಳಿಕ ಶಿಲಾ ರಚನೆ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಇಲ್ಲಿ ಒಂದೆಡೆ ತಗ್ಗು ಮತ್ತೊಂದು ಕಡೆ ಎತ್ತರ ಪ್ರದೇಶ ಇದೆ. ಇಲ್ಲಿನ ಭೂಮಿಯ ಮೇಲ್ಭಾಗದಲ್ಲಿ ಮುರಕಲ್ಲು ಮತ್ತು ಒಳಗಿನ ಪದರದಲ್ಲಿ ಜೇಡಿ ಮಣ್ಣು ಇದೆ. ಇತ್ತೀಚೆಗೆ ಅಂತರ್ಜಲ ಮಟ್ಟ ಕಡಿಮೆಯಾಗಿರುವ ಪರಿಣಾಮ ಭೂಮಿ ಒಳಗೆ ಉಷ್ಣತೆ ಹೆಚ್ಚಾಗಿದೆ. ಹೀಗೆ ಮಳೆಯ ನೀರು ಭೂಮಿ ಒಳಗೆ ಇಂಗಿದಾಗ ಮುರಕಲ್ಲಿನ ಅಡಿಭಾಗದಲ್ಲಿರುವ ಮೃದುವಾದ ಜೇಡಿ ಮಣ್ಣು ಮಳೆಯ ನೀರಿ ನಲ್ಲಿ ನಿಧಾನವಾಗಿ ಕೊಚ್ಚಿಕೊಂಡು ಹೋಗಿರುತ್ತದೆ. ಇದರಿಂದ ಭೂಮಿ ಒಳಗಡೆ ನಡೆಯುತ್ತಿರುವ ಸಾಮಾನ್ಯ ಪ್ರಕ್ರಿಯೆಯಿಂದ ಮೇಲ್ಭಾಗದಲ್ಲಿರುವ ಸಡಿಲಾದ ರಚನೆಯಲ್ಲಿ ಬಿರುಕು ಕಾಣಿಸಿಕೊಂಡಿದೆ’ ಎಂದು ಹಿರಿಯ ಭೂ ವಿಜ್ಞಾನಿ ರಾನ್‌ಜಿ ನಾಯ್ಕ ಅಭಿಪ್ರಾಯ ಪಟ್ಟರು. ಇಲ್ಲಿ ಉದ್ದಕ್ಕೆ ಬಿರುಕು ಬಿಡದೆ ವೃತ್ತಕಾರದಲ್ಲಿ ಬಿರುಕು ಕಾಣಸಿಕೊಂಡಿದೆ. ವೃತ್ತ ಆಕಾರದಲ್ಲಿರುವ ಇಲ್ಲಿನ ತಗ್ಗು ಪ್ರದೇಶದ ಭೂಮಿ ಒಳಗಡೆ ನಡೆದ ಪ್ರತ್ರಿಯೆಯಿಂದ ವೃತ್ತ ಆಕಾರದಲ್ಲಿ ಭೂಮಿ ಬಿರುಕು ಬಿಟ್ಟು ಸಿಂಕ್ ಆಗಿರುವ ರೀತಿಯಲ್ಲಿ ಕಾಣುತ್ತದೆ. ಇಲ್ಲಿನ ಎತ್ತರ ಪ್ರದೇಶದ ಎಲ್ಲೂ ಬಿರುಕು ಕಾಣಿಸಿ ಕೊಂಡಿಲ್ಲ. ಇದು ಬಹಳ ನಿಧಾನವಾದ ಪ್ರಕ್ರಿಯೆಯಾಗಿದ್ದು, ತಕ್ಷಣಕ್ಕೆ ಆಗಿರುವು ದಲ್ಲ. ಬಿರುಕು ತುಂಬಾ ಹಿಗ್ಗುವ ಸಾಧ್ಯತೆ ಕಡಿಮೆ ಎಂದರು.

ಈ ಸಂದರ್ಭದಲ್ಲಿ ೮೦ ಬಡಗಬೆಟ್ಟು ಗ್ರಾಪಂ ಅಧ್ಯಕ್ಷ ಶಾಂತಾರಾಮ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಮನಾ ಹಾಜರಿದ್ದರು.

 

ಭೂಕಂಪನದ ಬಿರುಕು ಅಲ್ಲ

ಇದು ಭೂಕಂಪನದಿಂದ ಆಗಿರುವ ಬಿರುಕು ಅಲ್ಲ. ಕರಾವಳಿ ಹಾಗೂ ಮಲೆ ನಾಡು ಪ್ರದೇಶದ ಭೌಗೋಳಿಕ ಶಿಲಾ ರಚನೆಯಲ್ಲಿ ಮಳೆಗಾಲ ಆರಂಭದಲ್ಲಿ ಇಂತಹ ಪ್ರಕ್ರಿಯೆ ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಮೇಲ್ನೋಟಕ್ಕೆ ಈ ಬಿರುಕು ಭೂಕಂಪನಕ್ಕೆ ಸಂಬಂಧಿಸಿದ್ದಲ್ಲ ಎಂಬುದು ಕಂಡು ಬರುತ್ತದೆ. ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ. ಇಂತಹ ಮುರಕಲ್ಲಿನ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿರುತ್ತದೆ. ಇದು ಗಂಭೀರ ವಿಚಾರ ಅಲ್ಲ. ಇಡೀ ತಂಡ ಈ ಕುರಿತು ಅವಲೋಕನ ನಡೆಸಿ ವರದಿ ಸಿದ್ಧಪಡಿಸಲಿದೆ. ಅಲ್ಲದೆ ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು ಎಂದು ರಾನ್‌ಜಿ ನಾಯ್ಕ ತಿಳಿಸಿದರು.

Leave a Comment