ಮಂಗಳ ಭೂಮಿಗೆ ಅತಿ ಹತ್ತಿರ

ಮಂಗಳಗ್ರಹವನ್ನು ಹತ್ತಿರದಿಂದ ನೋಡುವ ಅವಕಾಶ ಇದೇ ತಿಂಗಳು ೨೭ ರಂದು ಲಭ್ಯವಾಗಲಿದೆ. ಅಂದು ಮಂಗಳ ಭೂಮಿಗೆ ಅತಿ ಹತ್ತಿರದ ಕಕ್ಷೆಯಲ್ಲಿ ಹಾದು ಹೋಗಲಿದ್ದು, ಹೆಚ್ಚು ಪ್ರಕಾಶಮಾನದಿಂದ ಕಾಣಲಿದ್ದಾನೆ.

ಜು. ೨೭ ರಂದು ಮಂಗಳಗ್ರಹ ಎಂದಿಗಿಂತಲೂ ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. ಕಾರಣ ಆ ಸಂದರ್ಭದಲ್ಲಿ ಭೂಮಿಯ ಹತ್ತಿರದ ಕಕ್ಷೆಯಲ್ಲಿರುವುದು.

ಭೂಮಿ, ಮಂಗಳ ಎರಡೂ ತಮ್ಮ ನಿಗದಿತ ಕಕ್ಷೆಗಳಲ್ಲಿ ಸೂರ್ಯನನ್ನು ಸುತ್ತುತ್ತಿರುತ್ತವೆ. ಭೂಮಿಗೆ ಸೂರ್ಯನ ಸುತ್ತ ಒಂದು ಸುತ್ತು ಬರಲು ೩೬೫ ದಿನಗಳು ಬೇಕಾದರೆ, ಮಂಗಳಕ್ಕೆ ೬೮೭ ದಿನಗಳು ಬೇಕು. ಹೀಗೆ ಸುತ್ತುವಾಗ ಭೂಮಿಗೆ, ಸೂರ್ಯ ಮತ್ತು ಮಂಗಳ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬಂದಾಗ ಮಂಗಳ ಭೂಮಿಗೆ ಹತ್ತಿರವಾಗುತ್ತದೆ. ಹೀಗೆ ಮಂಗಳ ಭೂಮಿಯ ಹತ್ತಿರ ಬಂದಿದ್ದು ೨೦೦೩ರಲ್ಲಿ. ಮತ್ತೆ ಬರುವುದು ೨೦೨೦ರಲ್ಲಿ.

೧೫ ವರ್ಷಗಳ ನಂತರ ಮಂಗಳನನ್ನು ಹತ್ತಿರದಿಂದ ನೋಡುವ ಅವಕಾಶವನ್ನು ಬಳಸಿಕೊಂಡು ಮಂಗಳನ ರಮ್ಯನೋಟವನ್ನು ಕಣ್ಣು ತುಂಬಿಸಿಕೊಳ್ಳಲು ಜಗತ್ತಿನಾದ್ಯಂತ ಜನ ಕಾತುರದಿಂದ ಕಾಯುತ್ತಿದ್ದಾರೆ.

ಹೀಗೆ ಮಂಗಳ ಭೂಮಿಗೆ ಅತೀ ಹತ್ತಿರ ಬಂದಿದ್ದು, ೨೦೦೩ರಲ್ಲಿ ಹಾಗೆಯೇ ಮುಂದೆ ಇಂತ ಅವಕಾಶ ಸಿಗುವುದು ೨೦೨೦ರ ಅಕ್ಟೋಬರ್ ೩ ರಂದು ಎಂದು ನಾಸಾ ಹೇಳಿದೆ. ಜು. ೨೭ ರಂದು ಮಂಗಳ ಮತ್ತು ಸೂರ್ಯ ಆಗಸದಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಬರುತ್ತವೆ.

ಮಂಗಳ ಭೂಮಿಯಿಂದ ಅತಿ ದೂರದಲ್ಲಿದ್ದಾಗ ಅದು ಭೂಮಿಯಿಂದ ೨೩೪,೪೦೦,೦೦೦ ಮೈಲುಗಳ ದೂರದಲ್ಲಿದ್ದರೆ, ಹತ್ತಿರ ಬಂದಾಗ ಭೂಮಿಯಿಂದ ೩೪,೬೩೭,೦೦೦ ಮೈಲುಗಳ ಹತ್ತಿರದಲ್ಲಿರುತ್ತದೆ. ಹೀಗಾಗಿ ಹತ್ತಿರ ಬಂದಾಗ ಮಂಗಳ ಗ್ರಹ ಚಿಕ್ಕಗ್ರಹವಾದರೂ ದೊಡ್ಡದಾಗೇ ಕಾಣಿಸುತ್ತದೆ.

ಸೂರ್ಯನಿಂದ ೪ನೇ ಗ್ರಹವಾಗಿರುವ ಮಂಗಳ, ಸೌರಮಂಡಲದಲ್ಲಿ ೨ನೇ ಅತಿ ಚಿಕ್ಕ ಗ್ರಹ. ಸೂರ್ಯನಿಂದ ೨೨೭.೯ ದಶಲಕ್ಷ ಕಿ.ಮೀ ದೂರದಲ್ಲಿದೆ. ಮಂಗಳ ಗ್ರಹದ ವಿಶಿಷ್ಠವೆಂದರೆ ಭೂಮಿಯನ್ನು ಬಿಟ್ಟು ಜೀವರಾಶಿಗಳ ವಿಕಾಸದ ಅವಕಾಶವಿದ್ದರೆ ಅದು ಈ ಗ್ರಹದಲ್ಲಿ ಮಾತ್ರ ಎಂದು ವಿಜ್ಞಾನಿಗಳು ಭಾವಿಸಿದ್ದಾರೆ. ಹೀಗಾಗಿಯೇ ಇದರ ಶೋಧನೆ ನಿರಂತರವಾಗಿ ನಡೆಯುತ್ತಿದೆ. ಎರಡನೇ ವಿಶೇಷವೆಂದರೆ ಇಲ್ಲಿ ಏಳುವ ಬಿರುಗಾಳಿ. ಆ ವೇಳೆ ಇದರ ಮೇಲ್ಮೈಯಲ್ಲಿಯ ಕಬ್ಬಿಣದ ಆಕ್ಸೈಡ್ ಧೂಳು ಇಡೀ ಗ್ರಹವನ್ನು ಆವರಿಸಿಕೊಳ್ಳುತ್ತದೆ.

ಇದು ಭೂಮಿಗಿಂತ ಚಿಕ್ಕಗ್ರಹ, ಭೂಮಿಯ ಅರ್ಧಕ್ಕಿಂತಲೂ ಕಡಿಮೆ ವ್ಯಾಸ ಹೊಂದಿದೆ. ಇದರ ಒಟ್ಟು ವ್ಯಾಸ ೪೨೧೫ ಮೈಲುಗಳು. ಕೆಲವು ವಿಷಯಗಳಲ್ಲಿ ಮಂಗಳ ಭೂಮಿಯನ್ನು ಹೋಲುತ್ತದೆ. ಇಲ್ಲಿಯೂ ಬೇಸಿಗೆ, ಕಡು ಚಳಿಗಾಲವಿರುತ್ತದೆ. ಇದರ ವಾತಾವರಣದಲ್ಲಿಯೂ ಸಾರಜನಕ, ಇಂಗಾಲದ ಡೈಆಕ್ಸೈಡ್, ಆಮ್ಲಜನಕ, ಆರ್ಗಾನ್ ಮತ್ತು ತೇವಾಂಶವಿದೆ.

ಲಕ್ಷಾಂತರ ವರ್ಷಗಳ ಹಿಂದೆ ಇದರ ಮೇಲ್ಮೈನಲ್ಲಿ ನೀರು ಇತ್ತು ಎಂದು ಊಹಿಸಲಾಗಿದೆ. ಆದರೆ, ಈಗ ಅಲ್ಲಿ ನೀರು ಇಲ್ಲ. ಅದರ ಧೃವ ಪ್ರದೇಶಗಳಲ್ಲಿ ನೀರು ಹಿಮದ ರೂಪದಲ್ಲಿದೆ. ಇಲ್ಲಿಯ ದಿನದ ಅವಧಿ ೨೪ ಗಂಟೆ ೩೨ ನಿಮಿಷ, ಬೇಸಿಗೆ ದಿನಗಳಲ್ಲಿ ದಿನದಲ್ಲಿಯ ತಾಪಮಾನ ೨೯೦ ಡಿಗ್ರಿ ಸೆಂಟಿಗ್ರೇಡ್‌ನಷ್ಟಿದ್ದರೆ, ಧೃವ ಪ್ರದೇಶದಲ್ಲಿ ರಾತ್ರಿಯ ಉಷ್ಣಾಂಶ ಮೈನಸ್ ೧೪೦ ಡಿಗ್ರಿ ಸೆಂಟಿಗ್ರೇಡ್‌ಗೆ ಇಳಿಯುತ್ತದೆ.

ಉತ್ತನೂರು ವೆಂಕಟೇಶ್

Leave a Comment