ಮಂಗಳ ಗ್ರಹದಲ್ಲಿ ಸರೋವರ

ಮಂಗಳಗ್ರಹದಲ್ಲಿ ಶಾಶ್ವತವಾದ ನೀರಿನ ಸರೋವರವಿದೆ ಎಂದು ಖಗೋಳ ವಿಜ್ಞಾನಿಗಳ ಸಂಶೋಧನಾ ತಂಡ ಹೇಳಿದೆ. ಮಂಗಳ ಗ್ರಹದ ಶೋಧನೆಯಲ್ಲಿರುವ ಮಾಱ್ಸ್ ಎಕ್ಸ್‌ಪ್ರೆಸ್ ಬಾಹ್ಯಾಕಾಶ ನೌಕೆ ನೀಡಿರುವ ಮಾಹಿತಿಯ ಅಧ್ಯಯನದಿಂದ ಈ ಸಂಶೋಧನಾ ತಂಡ ಮಂಗಳ ಗ್ರಹದಲ್ಲಿ ಬಹುದೊಡ್ಡ ಸರೋವರವಿದೆ ಎಂಬ ಅಭಿಪ್ರಾಯಕ್ಕೆ ಬಂದಿದೆ. ಈ ಕುರಿತ ವರದಿಯು ಸೈನ್ಸ್ ಬುಲಿಟಿನ್ ವೈಜ್ಞಾನಿಕ ನಿಯತ ಕಾಲಿಕದಲ್ಲಿ ೨ ದಿನಗಳ ಹಿಂದೆ ಪ್ರಕಟವಾಗಿದೆ.

ಇತ್ತೀಚೆಗೆ ಇಟಲಿಯ ಖಗೋಳ ವಿಜ್ಞಾನಿಗಳ ತಂಡವೊಂದು ಮಂಗಳ ಗ್ರಹದ ಗರ್ಭದಲ್ಲಿ ಅತಿ ದೊಡ್ಡು ಉಪ್ಪು ನೀರಿನ ಸರೋವರವಿದೆ ಎಂದು ಹೇಳಿದೆ. ಈ ಕುರಿತ ಸಂಶೋಧನಾ ವರದಿ ವೈಜ್ಞಾನಿಕ ನಿಯತಕಾಲಿಕವೊಂದರಲ್ಲಿ ೨ ದಿನಗಳ ಹಿಂದೆ ವರದಿಯಾಗಿದೆ. ಭೂಗರ್ಭದಲ್ಲಿ ಎಲ್ಲ ಕಡೆಯೂ ನೀರು ಸಿಗುವುದರಿಂದ ಮಂಗಳನಲ್ಲಿಯೂ ನೀರಿನ ಅಂಶ ಇರಬೇಕು ಎಂಬುದು ವಿಜ್ಞಾನಿಗಳ ಆಶಾಭಾವನೆ. ಹಾಗೆಯೇ ಅಂಟಾರ್ಟಿಕಾದ ಧೃವ ಭಾಗದಲ್ಲಿ ಹೂತು ಹೋಗಿರುವ ಸಾಗರ ಕುರಿತಂತೆ ಈ ಹಿಂದೆ ಸಂಶೋಧನಾ ವರದಿಗಳು ಪ್ರಕಟವಾಗಿದ್ದವು.

ಮಂಗಳನ ಅಧ್ಯಯನದಲ್ಲಿ ಕಳೆದ ೪ ವರ್ಷಗಳಿಂದ ತೊಡಗಿರುವ ಇಟಲಿಯ ಖಗೋಳ ಸಂಶೋಧಕರ ತಂಡ ಮಂಗಳನ ಗರ್ಭದಲ್ಲಿ ಉಪ್ಪು ನೀರಿನ ಬಹುದೊಡ್ಡ ಸರೋವರ ಇರುವುದಾಗಿ ಹೇಳಿದೆ. ಆ ಸರೋವರ ಗ್ರಹದ ದಕ್ಷಿಣ ಧೃವದ ಮೇಲ್ಮೈ ಭಾಗದಿಂದ ೧.೫ ಕಿ.ಮೀ ಕೆಳಗೆ ಇದ್ದು, ಇದು ೨೦ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ ಎಂದು ಅಧ್ಯಯನ ತಂಡ ಹೇಳಿದೆ.

29vichara2ನಾಸಾದ ಮಾಱ್ಸ್ ಎಕ್ಸ್‌ಪ್ರೆಸ್ ಉಪಗ್ರಹ ಮಂಗಳ ಗ್ರಹದ ಸುತ್ತ ಡಿ. ೨೫, ೨೦೦೩ ರಿಂದ ಸುತ್ತುತ್ತ ಆ ಗ್ರಹದ ವಾತಾವರಣ, ಅದರಲ್ಲಿಯ ನೀರಿನ ಅಂಶ ಸೇರಿದಂತೆ ಆ ಗ್ರಹದ ವಿವಿಧ ಅಂಶಗಳ ಶೋಧನೆಯಲ್ಲಿ ತೊಡಗಿದೆ. ಇದರಲ್ಲಿರುವ ದಿ ಮಾಱ್ಸ್ ಅಡ್ವಾನ್ಸ್ಡ್ ರೆಡಾರ್ ಫಾರ್ ಸಬ್ ಸರ್ಫೇಸ್ ಅಂಡ್ ಲೊನೊಸ್ಪಿಯರ್ ಸೌಂಡಿಂಗ್ (ಎಂಎಆರ್‌ಎಸ್‌ಐಎಸ್) ಉಪಕರಣದ ದತ್ತಾಂಶಗಳಿಂದ ಗ್ರಹದ ಗರ್ಭದಲ್ಲಿ ನೀರು ಇರುವುದನ್ನು ದೃಢಪಡಿಸಿದೆ.

ಮಂಗಳಗ್ರಹದ ದಕ್ಷಿಣ ಧೃವ ಪ್ರದೇಶದಲ್ಲಿ ಹೂತು ಹೋಗಿರುವ ಈ ಸರೋವರದ ಪತ್ತೆಯಿಂದ ಅಲ್ಲಿ ಒಂದು ಕಾಲಘಟ್ಟದಲ್ಲಿ ಜೀವರಾಶಿ ಇರುವ ಬಗ್ಗೆ ಶೋಧನೆಗೆ ಹೆಚ್ಚಿನ ಆಶಾಭಾವನೆಯನ್ನು ವಿಜ್ಞಾನಿಗಳಲ್ಲಿ ಮೂಡಿಸಿದೆ.

ಈ ಹಿನ್ನೆಲೆಯಲ್ಲಿಯೇ ನಾಸಾ ಸೇರಿದಂತೆ ಅನೇಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಕಳೆದ ೨ ದಶಕಗಳಲ್ಲಿ ಮಂಗಳನ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡಿದೆ. ಮಾಱ್ಸ್ ಎಕ್ಸ್‌ಪ್ರೆಸ್, ಸ್ಪಿರಿಟ್, ಆಪರ್ಚ್ಯುನಿಟಿ ಬಾಹ್ಯಾಕಾಶ ನೌಕೆಗಳು ಮಂಗಳನ ಸುತ್ತದ ಕಕ್ಷೆಯಲ್ಲಿ ಸುತ್ತುತ್ತ ನಿರಂತರವಾಗಿ ಮಂಗಳ ಶೋಧನಾ ಕಾರ್ಯದಲ್ಲಿ ತೊಡಗಿವೆ.

ಭೂಮಿಯ ಕೆಳಗೆ ಎಲ್ಲ ಕಡೆ ನೀರು ಇರುವುದೇ ವಿಜ್ಞಾನಿಗಳಿಗೆ ಮಂಗಳನಲ್ಲಿಯೂ ನೀರು ಇರುವ ಬಗ್ಗೆ ಶೋಧನೆಯಲ್ಲಿ ತೊಡಗಲು ವಿಶ್ವಾಸ ಮೂಡಿಸಿದೆ ಹಾಗೂ ಅಂಟಾರ್ಟಿಕಾದ ಧೃವ ಭಾಗದಲ್ಲಿ ಮೈ ರಿಡ್ ಸರೋವರ ಹೂತು ಹೋಗಿರುವ ಅಂಶವೂ ಶೋಧನೆಗೆ ಪೂರಕವಾಗಿದೆ. ಅಂಟಾರ್ಟಿಕಾದ ಪಶ್ಚಿಮದಲ್ಲಿ ೮೦೦ ಮೀ. ಆಳದಲ್ಲಿ ಸರೋವರವೊಂದು ಹೂತು ಹೋಗಿರುವುದಾಗಿ ೨೦೧೩ರಲ್ಲಿ ವಿಜ್ಞಾನಿಗಳ ತಂಡವೊಂದು ತಮ್ಮ ಶೋಧನಾ ವರದಿಯಲ್ಲಿ ಹೇಳಿತ್ತು. ಆ ತಂಡ ಆ ಭಾಗದಲ್ಲಿ ಕೊರೆದು ಸರೋವರ ಇರುವ ಬಗ್ಗೆ ಮಾದರಿಗಳನ್ನು ಸಂಗ್ರಹಿಸಿತ್ತು.

ಉತ್ತನೂರು ವೆಂಕಟೇಶ್

Leave a Comment