ಮಂಗಳ ಗ್ರಹದಲ್ಲಿ ಬಿರುಸು ಮಳೆ

ನಿರಂತರವಾಗಿ ಸುರಿದ ಮಳೆಗಳು ಮಂಗಳ ಗ್ರಹದ ಸ್ವರೂಪ ಬದಲಿಸಿವೆ. ಇದರಲ್ಲಿ ಮೂಡಿರುವ ಕೊರಕಲು, ಕಣಿವೆ, ಕಾಲುವೆಗಳಿಗೆ ಬಿದ್ದ ಮಳೆಯ ನೀರು ರಭಸವಾಗಿ ಹರಿದಿರುವುದೇ ಕಾರಣ ಎಂದು ಅಮೆರಿಕಾದ ಜಾನ್ಸ್ ಹಾಫ್‌ಕಿನ್ಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳಾದ ರಾಬರ್ಟ್ ಕ್ರಾಡೊಕ್ ಮತ್ತು ರಾಲ್ಫ್ ಲೊರೆಂಜ್ ತಮ್ಮ ಹೊಸ ಅಧ್ಯಯನ ವರದಿಯಲ್ಲಿ ಹೇಳಿದ್ದಾರೆ.

ಸುರಿದ ಬಿರುಸು ಮಳೆಯೇ ಮಂಗಳ ಗ್ರಹ ಸ್ವರೂಪವನ್ನು ಬದಲಿಸಿದೆ ಎಂದು ಅಮೆರಿಕಾದ ಜಾನ್ ಹಾಫ್ ಕಿನ್ಸ್ ವಿವಿ ವಿಜ್ಞಾನಿಗಳ ಹೊಸ ಅಧ್ಯಯನ ವರದಿ ಹೇಳಿದೆ.

ಕಲ್ಲು ಬಂಡೆಗಳಿಂದ ಕೂಡಿದ ಮರುಭೂಮಿಯಂತಿರುವ ಮಂಗಳ ಗ್ರಹ ತಾನು ರೂಪುಗೊಂಡ ದಿನಗಳ ನಂತರದಲ್ಲಿ ಒಳ್ಳೆಯ ವಾತಾವರಣದ ತೇವಾಂಶದಿಂದ ಕೂಡಿತ್ತು. ಆಗ ಭಾರಿ ಮಳೆಗಳು ಬಿದ್ದು, ರಭಸದಿಂದ ನೀರು ಹರಿದಿದೆ. ಈಗ ಅಲ್ಲಿಯ ಕೊರಕಲು ಕಣಿವೆ, ಕಾಲುವೆಗಳಿಗೆ ನೀರು ಹರಿದಿರುವಿಕೆಯೇ ಕಾರಣ. ಈಗ ಮಂಗಳ ಕಾದ ಶುಷ್ಕ ಮರುಭೂಮಿ.

ಭಾರಿ ಮಳೆಗಳೇ ಈ ಗ್ರಹದ ಸ್ವರೂಪ ಬದಲಾವಣೆಗೆ ಕಾರಣ ಎಂಬುದು ವರದಿಯ ಮುಖ್ಯ ತಿರುಳು.

ಭೂಮಿಯ ಮೇಲೆ ಬೀಳುವ ಮಳೆಯ ಪರಿಣಾಮಗಳ ಕುರಿತಂತೆ ಬಹುಮಂದಿ ವಿಜ್ಞಾನಿಗಳು ಅಧ್ಯಯನ, ವಿಶ್ಲೇಷಣೆ ನಡೆಸಿದ್ದಾರೆ. ಆದರೆ ಮಂಗಳನ ಮೇಲಿನ ಮಳೆಯ ಕುರಿತಂತೆ ಭೌತಶಾಸ್ತ್ರದನ್ವಯ ಅಧ್ಯಯನ ನಡೆಸಲಾಗಿಲ್ಲ ಎಂದು ಕ್ರಾಡೊಕ್ ಹೇಳಿದ್ದಾರೆ.

ಬದಲಾದ ಮಳೆ

ಕಾಲಘಟ್ಟದಲ್ಲಿ ಬದಲಾದ ಮಳೆ ಮಂಗಳನ ವಾತಾವರಣದಲ್ಲಿ  ಬದಲಾವಣೆ ತಂದಿದೆ. 4.5 ಶತಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹ ರೂಪುಗೊಂಡಾಗ ಸ್ಥಿರ ವಾತಾವರಣವಿದ್ದು, ಅದು ಹೆಚ್ಚಿನ ಒತ್ತಡದಿಂದ ಕೂಡಿತ್ತು. ಈ ಒತ್ತಡ ಮಳೆಯ ಹನಿಗಳ ಗಾತ್ರವನ್ನು ನಿರ್ಧರಿಸುತ್ತಿತ್ತು. ಆರಂಭದಲ್ಲಿ ಇಲ್ಲಿಯ ಮಳೆ, ಮಂಜಿನಂತೆ ಅತಿ ಸಣ್ಣ ಹನಿಗಳ ರೂಪದಲ್ಲಿ ಸುರಿಯುತ್ತಿತ್ತು. ದಶಲಕ್ಷ ವರ್ಷಗಳ ಕಾಲಾಂತರದಲ್ಲಿ ಇಲ್ಲಿಯ ವಾತಾವರಣದ ಒತ್ತಡ ಕ್ಷೀಣಿಸುತ್ತ ಬಂದು ತೀರಾ ತೆಳುವಾದಾಗ ಬೀಳುವ ಮಳೆಯ ಹನಿಗಳು ಭಾರಿ ಗಾತ್ರ ಮತ್ತು ಭಾರದಿಂದ ಕೂಡಿದ್ದರಿಂದ ಹನಿಗಳ ರಭಸಕ್ಕೆ ನೆಲವನ್ನು ಕೊರಕಲುಗೊಳಿಸಿವೆ ಹಾಗೂ ಹರಿದ ನೀರು ಕಣಿವೆ, ಕಾಲುವೆಗಳನ್ನು ಮೂಡಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬದಲಾದ ವಾತಾವರಣ

ಕಲ್ಲು-ಬಂಡೆಗಳಿಂದ ಕೂಡಿದ ಕಿಲುಬು ಹಿಡಿದ ಕೆಂಪಗಿನ ಮರುಭೂಮಿಯಂತಿರುವ ಮಂಗಳ ಗ್ರಹ ಹಿಂದೊಮ್ಮೆ ಒದ್ದೆಯಾದ ನೆಲದಿಂದ ಅಧಿಕ ಒತ್ತಡ ವಾತಾವರಣದಿಂದ ಕೂಡಿತ್ತು. ಈಗ ಅದೆಲ್ಲವೂ ಬದಲಾಗಿ ಈಗ ಅಲ್ಲಿ ತೆಳ್ಳಗಿನ ಒತ್ತಡರಹಿತ ವಾತಾವರಣ. ಭೂವಾತಾವರಣ ಒತ್ತಡಕ್ಕೆ ಹೋಲಿಸಿದರೆ, ಮಂಗಳನಲ್ಲಿ ಶೇ. 1 ರಷ್ಟು ಒತ್ತಡ ಮಾತ್ರ.

4.5 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡ ಮಂಗಳ ಗ್ರಹದಲ್ಲಿ ಆನಂತರದಲ್ಲಿ ಅಲ್ಲಿ ಗಾಢ, ಬೆಚ್ಚಗಿನ ಮತ್ತು ಒದ್ದೆಯಿಂದ ಕೂಡಿದ್ದ ವಾತಾವರಣವಿತ್ತು. ಆ ಕಾಲದಲ್ಲಿಯೇ ಭಾರಿ ಮಳೆಗಳು ಸುರಿದು ನದಿಗಳು ಏರ್ಪಟ್ಟಿವೆ. ಅವು ಹರಿದು ಕಾಲುವೆ, ಕೊರಕಲುಗಳು ಮೂಡಿವೆ. ಈಗ ಅದು ಗತ ಇತಿಹಾಸ. ಈಗೇನಿದ್ದರೂ ಶುಕ್ಕ ಬರಡು ನೆಲ. ನೀರು ಹೆಪ್ಪುಗಟ್ಟಿದ ರೂಪದಲ್ಲಿ ಇರಬಹುದು ಎಂಬ ಆಶಯವಿದೆ.

ಹೀಗಾಗಿಯೇ ಇದರ ಶೋಧನೆಗೆ ಹೆಚ್ಚಿನ ಉತ್ಸಾಹ ತೋರಲಾಗಿದೆ. 1997 ರಲ್ಲಿಯೇ ನಾಸಾದ ಪಾಥ್ ಫೈಂಡರ್ ಇದರ ಮೇಲ್ಮೈ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಿದೆ. ನಾಸಾ ಮಂಗಳ ಯಾನ ಶೋಧನೆಯನ್ನು ಮುಂದುವರೆಸಿದೆ. ಭಾರತವೂ ಯಶಸ್ವಿ ಯಾನದೊಂದಿಗೆ ಇದರ ಶೋಧನೆಯಲ್ಲಿ ತೊಡಗಿದೆ.

– ಉತ್ತನೂರು ವೆಂಕಟೇಶ್.

 

Leave a Comment