ಮಂಗಳೂರು : ಸರಕಾರಿ ವೆನ್ಲಾಕ್ ಆಸ್ಪತ್ರೆ ಕೊರೋನಾ ಚಿಕಿತ್ಸೆಗೆ ಮೀಸಲು ; ಇತರ ರೋಗಿಗಳು ಖಾಸಗಿ ಆಸ್ಪತ್ರೆಗೆ ಶಿಫ್ಟ್

ಮಂಗಳೂರು , ಮಾ.26 – ಮಂಗಳೂರು ನಗರದಲ್ಲಿರುವ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಮಾತ್ರ ಮೀಸಲಿರಿಸಿ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮಂಗಳೂರಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ವೆನ್ಲಾಕ್ ಆಸ್ಪತ್ರೆಯ 250 ಬೆಡ್ ಗಳ ಸೂಪರ್ ಸ್ಪೆಶಾಲಿಟಿ ಕಟ್ಟಡವನ್ನು ಕೊವಿಡ್ ಪೊಸಿಟಿವ್ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಆಸ್ಪತ್ರೆಯ 20 ಹಾಸಿಗೆಗಳ ಆಯುಷ್ ಕಟ್ಟಡವನ್ನು ಕೊವಿಡ್ ಶಂಕಿತ ರೋಗಿಗಳಿಗಾಗಿ ಮೀಸಲಿಡಲಾಗಿದೆ ಎಂದು ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದರು.
705 ಬೆಡ್ ಗಳ ವೆನ್ಲಾಕ್ ಆಸ್ಪತ್ರೆ ಯ ಹಳೆಯ ಕಟ್ಟಡವನ್ನು ಕೋವಿಡ್ ಪ್ರಕರಣಗಳನ್ನು ದಾಖಲಿಸಲು ಹಂತ ಹಂತವಾಗಿ ಉಪಯೋಗಿಸಲಾಗುವುದೆಂದು ಸಚಿವರು ತಿಳಿಸಿದರು.
ಈಗಾಗಲೇ ಸರಕಾರಿ ವೆನ್ಲಾಕ್ ಆಸ್ಪತ್ರೆ ಯಲ್ಲಿ ದಾಖಲಾಗಿರುವ ಇತರ 218 ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಮೂರು ದಿನಗಳ ಒಳಗಡೆ ಸ್ಥಳಾಂತರ ಮಾಡಲಾಗುವುದು , ಹಾಗೂ ಸರಕಾರಿ ವೆನ್ಲಾಕ್ ಆಸ್ಪತ್ರೆ ಯ ದರ ಪಟ್ಟಿಯಂತೆ ಈ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ವೆನ್ಲಾಕ್ ಆಸ್ಪತ್ರೆ ಯ ಮಕ್ಕಳ ವಾರ್ಡ್ ಇರುವ ಆರ್.ಎ.ಪಿ.ಸಿ.ಸಿ ಯಲ್ಲಿ ಬ್ಲಾಕ್ ನಲ್ಲಿ ದಾಖಲಾಗಿರುವ 140 ಮಕ್ಕಳನ್ನು ಸಮೀಪದ ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ವರ್ಗಾಯಿಸಿ ಮುಂದಿನ ದಿನಗಳಲ್ಲಿ ಈ ಕಟ್ಟಡವನ್ನು ಕೂಡ ಕೋವಿಡ್ ಚಿಕಿತ್ಸೆ ಗಾಗಿ ಉಪಯೋಗಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮುಂದಿನ ದಿನಗಳಲ್ಲಿ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಇತರ ಕಾಯಿಲೆಗೆ ಚಿಕಿತ್ಸೆ ಗೆ ಬರುವ ಹೊರ ರೋಗಿ ಹಾಗೂ ಒಳ ರೋಗಿಗಳಿಗೆ ಸ್ಥಳೀಯ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಹಾಗೂ ವೆನ್ಲಾಕ್ ಆಸ್ಪತ್ರೆಯ ದರದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದರು.
ಮುಂದಿನ ಪರಿಸ್ಥಿತಿಯನ್ನು ನೋಡಿಕೊಂಡು ಜಿಲ್ಲೆಯ ಪ್ರತೀ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 20 ಹಾಸಿಗೆಗಳ ಐಸೋಲೇಷನ್ ವಾರ್ಡ್ ತೆರೆಯಲಾಗುವುದು ಎಂದು ಸಚಿವರು ತಿಳಿಸಿದರು.
ವೆನ್ಲಾಕ್ ಆಸ್ಪತ್ರೆಯ ರೋಗಿಗಳ ವರ್ಗಾವಣೆ ಮತ್ತು ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ವ್ಯವಸ್ಥೆ ಹಾಗೂ ಸಮನ್ವಯತೆಗಾಗಿ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ , ಈ ಸಮಿತಿಗೆ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಈಗಾಗಲೇ ಕೋವಿಡ್ ದೃಡಪಟ್ಟು ಚಿಕಿತ್ಸೆ ಪಡೆಯುತ್ತಿರುವ 4 ರೋಗಿಗಳ ಆರೋಗ್ಯ ದಲ್ಲಿ ಸುಧಾರಣೆ ಕಾಣುತ್ತಿದೆ ಎಂದು ಸಚಿವರು ತಿಳಿಸಿದರು. ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋವಿಡ್ ದೃಢಪಟ್ಟ ರೋಗಿಯನ್ನು ವೆನ್ಲಾಕ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದವರು ಮಾಹಿತಿ ನೀಡಿದರು.
ವೆನ್ಲಾಕ್ ಆಸ್ಪತ್ರೆ ಯಲ್ಲಿ ಈಗ 32 ವೆಂಟಿಲೇಟರ್ ಗಳಿದ್ದು , ಹೊಸ ಕಟ್ಟಡದಲ್ಲಿ ಇನ್ನೊಂದು ವಾರದಲ್ಲಿ 100 ವೆಂಟಿಲೇಟರ್ ಗಳನ್ನು ಅಳವಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಇಂದಿನಿಂದ ಸೆಕ್ಷನ್ ಕಟ್ಟುನಿಟ್ಟು :
ಜನತೆ ನಿಷೇಧಾಜ್ನೆ ಯನ್ನು ಉಲ್ಲಂಘಿಸಬಾರದು , ನಿಗದಿಯಾದ ಅವಧಿಯಲ್ಲಿ ಸ್ಥಳೀಯ ಅಂಗಡಿಗಳಲ್ಲಿ ಯೇ ಖರೀದಿಮಾಡಬೇಕು , ಸೆಂಟ್ರಲ್ ಮಾರ್ಕೇಟ್ ನಲ್ಲಿ ರಿಟೈಲ್ ಮಾರಾಟವನ್ನು ಇಂದಿನಿಂದ ಸ್ಥಗಿತಗೊಳಿಸಲಾಗಿದೆ. ಸಣ್ಣ ವ್ಯಾಪಾರಿಗಳಿಗೆ ಮಾತ್ರ ಸೆಂಟ್ರಲ್ ಮಾರ್ಕೇಟ್ ನಲ್ಲಿ ರಖಂ ಖರೀದಿಗೆ ಅವಕಾಶ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
ಸ್ಥಳೀಯ ಅಂಗಡಿಯವರು ತಮ್ಮ ಗ್ರಾಹಕರು ಸರದಿ ಸಾಲಿನಲ್ಲಿ ಅಂತರದಲ್ಲಿ ನಿಲ್ಲಲು ಅನುಕೂಲವಾಗುವಂತೆ ಸರದಿ ಸಾಲಿನ ಗೆರೆಗಳನ್ನು , ವೃತ್ತಗಳನ್ನು ರಚಿಸಿ ವ್ಯವಸ್ಥೆ ಮಾಡಬೇಕು , ಇದು ಅಂಗಡಿಯವರ ಜವಾಬ್ದಾರಿ ಯಾಗಿದೆ ಎಂದು ಸಚಿವರು ಸೂಚಿಸಿದರು.

ಪೊನ್ನುರಾಜ್ ನೋಡಲ್ ಅಧಿಕಾರಿ :
ಹಿರಿಯ ಐ.ಎ.ಎಸ್ ಅಧಿಕಾರಿ ಪೊನ್ನುರಾಜ್ ಅವರು ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕಾರ್ಯಚರಣೆಯ ವಿಶೇಷ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.

ಕೇರಳ ಅಂಬ್ಯೂಲೆನ್ಸ್ ಗೆ ಗೇಟ್ :
ಕೇರಳ ಕಡೆಯಿಂದ ಕರ್ನಾಟಕದ ಯಾವುದೇ ಆಸ್ಪತ್ರೆಗೆ ಬರುವ ಯಾವುದೇ ರೋಗಿಗಳಿರುವ ಅಂಬ್ಯುಲೆನ್ಸ್ ಗಳನ್ನು ತಲಪಾಡಿ ಗಡಿಯಲ್ಲಿ ತಡೆದು ಹಿಂದಕ್ಕೆ ಕಳುಹಿಸಲಾಗುತ್ತಿದೆ , ಕೇರಳದ ಅಂಬ್ಯೂಲೆನ್ಸ್ ಗಳಿಗೆ ಕರ್ನಾಟಕ ಪ್ರವೇಶವನ್ನು ಸಂಪೂರ್ಣ ತಡೆ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು .
ಸುದ್ದಿಗೋಷ್ಠಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಡಾ. ಭರತ್ ಶೆಟ್ಟಿ, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ , ಅಪರ ಜಿಲ್ಲಾಧಿಕಾರಿ ರೂಪ ಉಪಸ್ಥಿತರಿದ್ದರು.

Leave a Comment