ಮಂಗಳೂರು ಗೋಲಿಬಾರ್‌ ವಿಧಾನಸಭೆಯಲ್ಲಿ ಪ್ರತಿಧ್ವನಿ: ಗದ್ದಲ, ಕೋಲಾಹಲ

ಬೆಂಗಳೂರು, ಫೆ.19 – ಮಂಗಳೂರು ಗೋಲಿಬಾರ್ ಪ್ರಕರಣ ಇಂದು ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಭಾರೀ ಕೋಲಾಹಲ, ಗದ್ದಲ ಉಂಟಾಗಿ, ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿಗೆ ಸಾಕ್ಷಿಯಾಯಿತು.
ರಾಜ್ಯದ ಕಾನೂನು ಸುವ್ಯವಸ್ಥೆ ಕುರಿತು ನಿಯಮ 69ರಡಿ ನಡೆದ ಚರ್ಚೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವದಲ್ಲಿ ಪ್ರತಿರೋಧ ಎಂಬುದು ಅದರ ಸೌಂದರ್ಯ, ಭಿನ್ನಮತ, ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದಲ್ಲಿ ಇರಬೇಕಾಗುತ್ತದೆ. ಆಗ ಮಾತ್ರ ಆರೋಗ್ಯಪೂರ್ಣವಾದಂತಹ ಪ್ರಜಾಪ್ರಭುತ್ವ ಸಾಧ್ಯ. ಸರ್ಕಾರದ ಯಾವುದೇ ನೀತಿ, ನಿರ್ಧಾರಗಳನ್ನು, ಕಾನೂನುಗಳನ್ನು ಮಾಡಿದಾಗ ಅವುಗಳು ಜನಪರವಾಗಿರಬೇಕು. ಅದಕ್ಕೆ ಪರ-ವಿರೋಧ ಅಭಿಪ್ರಾಯ ಇರುತ್ತವೆ. ಅದಕ್ಕೆ ಅವಕಾಶ ಇರಬೇಕು ಮತ್ತು ಇದೆ. ಅದನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಏಕೆಂದರೆ ಅದು ಸಂವಿಧಾನ ಕೊಟ್ಟಿರುವ ಮೂಲಭೂತ ಹಕ್ಕು. ಈ ಹಕ್ಕು ಕಸಿದುಕೊಳ್ಳುವುದು ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ಬಾಹಿರ ಹಾಗು ಜನವಿರೋಧಿಯಾಗಿದೆ ಎಂದು ಹೇಳಿದರು.

ಡಿಸೆಂಬರ್ 9ರ ಬಳಿಕ ಇಡೀ ರಾಷ್ಟ್ರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ಬಳಿಕ ಆರಂಭಗೊಂಡಿದೆ. ಮಂಡನೆಯಾದ ದಿನದಿಂದಲೂ ಜನ ತಮ್ಮ ಪ್ರತಿರೋಧವನ್ನು ವ್ಯಕ್ತಮಾಡಿದ್ದಾರೆ. ಜನರು ತಮ್ಮ ವಿರುದ್ಧವಾದ ಧ್ವನಿಯನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಪ್ರತಿಭಟನೆಗಳು, ಹೋರಾಟಗಳು, ಶಾಂತಿಯುತವಾಗಿ ನಡೆಯುತ್ತಿವೆ. ಆ ಪ್ರತಿಭಟನೆಯಲ್ಲಿ ಹೋರಾಟದಲ್ಲಿ ಸಾಹಿತಿಗಳು, ಕಲಾವಿದರು, ಪ್ರಗತಿಪರರು, ವಿದ್ಯಾರ್ಥಿಗಳು ,ಮಹಿಳೆಯರು,ರಾಷ್ಟ್ರೀಯ ಪಕ್ಷಗಳು ಭಾಗವಹಿಸಿವೆ ಎಂದು ಹೇಳಿದರು.
ರಾಜ್ಯದಲ್ಲೂ ಈ ಪ್ರತಿರೋಧ ರಾಜ್ಯಾದ್ಯಂತ ನಡೆದಿದೆ. ಅನೇಕ ಹೈಕೋರ್ಟ್, ಸುಪ್ರೀಂಕೋರ್ಟ್‌ಗಳು ಸೇರಿ ಅನೇಕ ನ್ಯಾಯಾಲಯಗಳು ಪ್ರತಿಭಟನೆ ನಡೆಸುವುದು ಮೂಲಭೂತ ಹಕ್ಕು ಎಂದು ಹೇಳಿದೆ. ಸಂವಿಧಾನದ ಮೂರನೆ ಭಾಗದಲ್ಲಿ ಬರುವ 19(1)ಎ ಸೇರಿದಂತೆ ಅನೇಕ ವಿಧಿಗಳು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ್ದವು. ಸಂವಿಧಾನದ ಪೀಠಿಕೆಯಲ್ಲಿ ಅಡಕವಾಗಿರುವ ಎಲ್ಲಾ ಆಶಯಗಳು 12ನೇ ವಿಧಿಯಿಂದ 32ನೇ ವಿಧಿಯವರೆಗೆ ಸಂವಿಧಾನದ ಆಶಯಗಳಿಗೆ ಸಂಬಂಧಿಸಿವೆ. ಈ ವಿಧಿಗಳನ್ನು ಬದಲಾಯಿಸಲು ಸಂಸತ್ ಅಥವಾ ಸುಪ್ರೀಂಕೋರ್ಟ್‌ಗೆ ಸಾಧ್ಯವಿಲ್ಲ. ಕೇಶವಾನಂದ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಇದನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಅನೇಕ ಕಡೆಗಳಲ್ಲಿಯೂ ಪ್ರತಿಭಟನೆಗಳು ನಡೆದಿವೆ. ಡಿ.9ರಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿವೆ. ಯಾವುದೇ ಪ್ರತಿಭಟನೆ ಶಾಂತಿಯುತವಾಗಿ ನಡೆದರೆ ಅದನ್ನು ಯಾರಿಗೂ ತಡೆಯಲು ಸಾಧ್ಯವಿಲ್ಲ. ಇದನ್ನು ರಕ್ಷಿಸಬೇಕಾದುದು ನಮ್ಮೆಲ್ಲರ ಜವಾಬ್ದಾರಿ. ರಾಜ್ಯದಲ್ಲಿ ಡಿಸೆಂಬರ್ 18, 19, 20,21ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಡಿ. 18ರಾತ್ರಿ 9 22 ರಾತ್ರಿ 12 ಗಂಟೆಯವರೆಗೆ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಯಾವ ಸನ್ನಿವೇಶದಲ್ಲಿ, ಸಂದರ್ಭದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಬೇಕು ಎಂಬುದನ್ನು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಇದನ್ನು ಉಪಯೋಗಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಅಹಿತಕರ ಘಟನೆ ನಡೆದಿದೆಯಾ ? ನಿಷೇಧಾಜ್ಞೆ ಜಾರಿಗೊಳಿಸಲು ಅನಿವಾರ್ಯವೇ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡುವ ಅನಿವಾರ್ಯತೆ ಇರಲಿಲ್ಲ. ನಿಷೇಧಾಜ್ಞೆ ಜಾರಿಗೊಳಿಸಿದ್ದರ ಬಗ್ಗೆ ಮಾಹಿತಿ ಇಲ್ಲದೆ ಸುತ್ತಮುತ್ತಲಿನ ಜನರು ಮಂಗಳೂರು ನಗರಕ್ಕೆ ಬಂದಿದ್ದರು. ಸುಮಾರು 150ರಿಂದ 200 ಯುವಕರು ಇದ್ದರು. ಅವರನ್ನು ಸಮಾಧಾನಪಡಿಸಿ, ಪರಿಸ್ಥಿತಿಯ ಮನವರಿಕೆ ಮಾಡಿ ಹಿಂದಕ್ಕೆ ಕಳುಹಿಸಬೇಕಿತ್ತು. ಆದರೆ ಪೊಲೀಸರು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸದೆ ಲಾಠಿಚಾರ್ಜ್ ಹಾಗೂ ಗೋಲಿಬಾರ್ ಮಾಡಿದರು ಎಂದು ಸಿದ್ದರಾಮಯ್ಯ ಆರೋಪಿಸಿದರು.
ಶಾಸಕಿ ಸೌಮ್ಯ ಮತ್ತು ರಾಜ್ಯಸಭಾ ಸದಸ್ಯ ರಾಜುಗೌಡ ಅವರು ಸೆಕ್ಷನ್ ಹಾಕಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೇ 13ರಂದು ಹೈಕೋರ್ಟ್‌ನ ಮುಖ್ಯನ್ಯಾಯಾಧೀಶರಿದ್ದ ಪೀಠ, ಸೆಕ್ಷನ್‌ ಹಾಕಿರುವುದು ಅಕ್ರಮ ಎಂದು ಹೇಳಿದೆ. 144 ಸೆಕ್ಷನ್ ಜಾರಿ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ ಎಂದು ಬಹಳ ಸ್ಪಷ್ಟವಾಗಿ ಮುಖ್ಯ ನ್ಯಾಯಮೂರ್ತಿ ಹೇಳಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ಕೂಡ ತರಾಟೆಗೆ ತೆಗೆದುಕೊಂಡಿದೆ, 144 ಸೆಕ್ಷನ್ ಹಾಕಿರುವುದು ಕಾನೂನುಬಾಹಿರ ಎಂದು ಸಿದ್ದರಾಮಯ್ಯ ಹೇಳಿದರು.

ಆಗ ಮಧ್ಯೆ ಪ್ರವೇಶಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಹಾಗಾದರೆ ಯಾರು 144 ಸೆಕ್ಷನ್ ಹಾಕಬೇಕು ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತೀರ್ಪಿನ ಬಗ್ಗೆ ಅಸಮಾಧಾನ ಇದ್ದರೆ ಸುಪ್ರಿಂಕೋರ್ಟ್‌ಗೆ ಹೋಗಿ ಎಂದು ತಿರುಗೇಟು ನೀಡಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಮಂಗಳೂರು ಪರಿಸ್ಥಿತಿಯನ್ನು ಪೊಲೀಸರು ಸಮರ್ಥವಾಗಿ ನಿಭಾಯಿಸಿದ್ದಾರೆ. ಪೊಲೀಸರು ಯಾವುದೇ ಸರ್ಕಾರವಿದ್ದರೂ ಜನರಿಗೆ ರಕ್ಷಣೆ ನೀಡುವವರು. ಅವರು ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ಹೇಳಿಕೆ ನೀಡಬಾರದು. ಮಂಗಳೂರು ಪ್ರಕರಣ ನ್ಯಾಯಾಲಯದಲ್ಲಿ ಅಲ್ಲಿ ತೀರ್ಮಾನವಾಗಬೇಕಾಗಿದೆ ಎಂದು ಹೇಳಿದರು.
ಮಂಗಳೂರು ಗಲಭೆಗೆ ಸಂಬಂಧಿಸಿ 21 ಮಂದಿ ಜಾಮೀನಿಗೆ ಅರ್ಜಿ ಹಾಕಿದ್ದರು. ಹೈಕೋರ್ಟ್‌ ಅವರಿಗೆ ಜಾಮೀನು ನೀಡಿದ್ದು, ಇದು ಜಾಮೀನು ಆದೇಶವಾಗಿದೆ. ಪ್ರತಿಭಟನಕಾರರ ಬಳಿ ಯಾವುದೇ ಆಯುಧ ಇರಲಿಲ್ಲ. ಅವರ ಬಳಿ ಬಾಟಲ್, ಕಲ್ಲುಗಳೂಇರಲಿಲ್ಲ. ಯಾರೋ ಒಬ್ಬ ಬಳಿಕ ಬಾಟೆಲ್‌ ಇತ್ತು. ಆದರೆ ಪೊಲೀಸರೇ ಕಲ್ಲನ್ನು ಎಸೆಯುತ್ತಿದ್ದರು. ಇದನ್ನು ಜಾಮೀನು ನೀಡುವಾಗ ನೀಡಿದ ತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಬಿಜೆಪಿಯವರು ಏನು ಬೇಕಾದರೂ ಹೇಳಬಹುದು. ನಾನು ಅರ್ಜಿಯಲ್ಲಿ ಇರುವುದನ್ನು ಓದುತ್ತಿದ್ದೇನೆ ಎಂದು ಹೇಳಿದರು.
ಈ ವೇಳೆ ಬಿಜೆಪಿ ಸದಸ್ಯರು ಮಂಗಳೂರು ಗಲಭೆಗೆ ಸಂಬಂಧಿಸಿದ ಫೋಟೋಗಳನ್ನು ಪ್ರದರ್ಶಿಸಿದರು. ಇದರಿಂದ ಸದನದಲ್ಲಿ ಗದ್ದಲ ಉಂಟಾಯಿತು.

Leave a Comment