ಮಂಗಳೂರು ಗಲಭೆಗೆ ‘ಪೊಲೀಸ್ ಕಮೀಷನರ್ ಕಾರಣ’- ಸಿದ್ದರಾಮಯ್ಯ ಗಂಭೀರ ಆರೋಪ

ಬೆಂಗಳೂರು.ಫೆ.೧೯ ವಿಧಾನಸಭೆಯಲ್ಲಿ ಇಂದು ಮಂಗಳೂರು ಗಲಭೆ ಪ್ರಕರಣ ವಿಚಾರವಾಗಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಜಟಾಪಟಿಯೇ ನಡೆಯಿತು. ಇಂದು ಮಂಗಳೂರು ಗಲಭೆ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಹರಿಹಾಯ್ದರು. ಮಂಗಳೂರು ಗಲಭೆ ಪ್ರಕರಣ ಪೊಲೀಸರ ಕ್ರಮ ಪೂರ್ವಯೊಜಿತ. ಮಂಗಳೂರು ಗೋಲಿಬಾರ್ ಗೆ ಅಲ್ಲಿನ ಪೊಲೀಸ್ ಕಮೀಷನರ್ ಅವರೇ ಕಾರಣ ಎಂದು ನೇರ ಆರೋಪ ಮಾಡಿದರು.

ಇನ್ನು ಈ ಹಿಂದೆ ಪೊಲೀಸರು ಪ್ರತಿಭಟನಾಕಾರರ ಮೇಲೆ ದೌರ್ಜನ್ಯ ಮಾಡಿರಲಿಲ್ಲ. ಕರ್ನಾಟಕ ಪೊಲೀಸ್ ರಾಜ್ಯ ಯಾವತ್ತು ಆಗಿಲ್ಲ. ಇಬ್ಬರು ಅಮಾಯಕರು ಗೋಲಿಬಾರ್ ನಲ್ಲಿ ಸಾವನ್ನಪ್ಪಿದ್ದಾರೆ. ಅವರಿಬ್ಬರೂ ಕೂಲಿ ಕೆಲಸ ಮಾಡಿಕೊಂಡಿದ್ದವರು. ಇದಕ್ಕೆ ಯಾರು ಹೊಣೆ. ಗೋಲಿಬಾರ್ ನಲ್ಲಿ ಬಲಿಯಾದ ನೌಶಿದ್, ಜಲೀಲ್ ಅವರ ಕುಟುಂಬ ನೋಡಿಕೊಳ್ಳುವವರು ಯಾರು ಎಂದು ಪ್ರಶ್ನಿಸಿದರು. ಲಾಠಿ ಚಾರ್ಜ್ ಮಾಡಬಾರದು ಅಂತ ಸಿಎಂ ಬಿಎಸ್ ವೈ ಆದೇಶ ನೀಡಿದ್ದೇನೆ ಎಂದು ಹೇಳಿಕೆ ನೀಡಿದ್ರು. ಆದರೆ, ಸಿಎಂ ಆದೇಶವನ್ನ ಪೊಲೀಸರು ಪಾಲಿಸಿಲ್ಲ ಏಕೆ.. ಸಿಎಂ ಗಿಂತ ಪೊಲೀಸರು ಮೇಲಾ..? ಕವನ ಓದಿದ್ದಕ್ಕೆ ಕೊಪ್ಪಳದ ಸಿರಾಜ್ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸುತ್ತಾರೆ. ಪದ್ಯ ಓದೋದು ತಪ್ಪಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇನ್ನು ಮಂಗಳೂರು ಗೋಲಿಬಾರ್ ಗೆ ಅಲ್ಲಿ ಪೊಲೀಸ್ ಕಮೀಷನರ್ ಕಾರಣ. ಅವರೇ ಮುಂದೆ ನಿಂತು ಗೋಲಿಬಾರ್ ಮಾಡಿಸಿದ್ದಾರೆಂದು ನೇರ ಆರೋಪ ಮಾಡಿದರು. ಅಲ್ಲದೇ, ಪೊಲೀಸರ ಕ್ರಮ ಸರಿಯಲ್ಲ. ಇದು ಪೊಲೀಸ್ ರಾಜ್ಯ ಅನ್ನದೇ ಇನ್ನೇನು ಕರೆಯಬೇಕು. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಯಾವ ಪೊಲೀಸ್ ಅಧಿಕಾರಿ ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಆಗಲೇ ಬೇಕು. ಇದು ನಾವೆಲ್ಲಾ ನಾಚಿಕೆ ಪಡುವ ಸಂಗತಿ. ರಾಜ್ಯದಲ್ಲಿ ಕಾನೂನು ಇದೆಯೋ ಇಲ್ಲವೋ ಅನ್ನೊ ಅನುಮಾನ ರಾಜ್ಯದ ಜನತೆಯನ್ನ ಕಾಡುತ್ತಿದೆ. ಘಟನೆ ಸಂಬಂಧ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇದೇ ವೇಳೆ, ಗೋಲಿಬಾರ್ ನಲ್ಲಿ ಬಲಿಯಾದವರಿಗೆ ಪರಿಹಾರ ವಿಚಾರವಾಗಿ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಗೋಲಿಬಾರ್ ನಲ್ಲಿ ಮೃತಪಟ್ಟ ಮೃತರಿಬ್ಬರಿಗೆ ಹತ್ತು ಲಕ್ಷ ಪರಿಹಾರ ಘೋಷಿಸಿ ವಾಪಸ್ ತೆಗೆದುಕೊಳ್ಳಲಾಯಿತು. ಅವರ ಮೇಲೆ ಯಾರದ್ದೋ ಒತ್ತಡ ಇರಬೇಕು ಅನಿಸುತ್ತದೆ. ಬಿಜೆಪಿಯವರೂ ದ್ವೇಷದ ಹೇಳಿಕೆಗಳನ್ನು ಕೊಟ್ಟಿದ್ದಾರೆ. ಕಲ್ಲಡ್ಕ ಪ್ರಭಾಕರ್ ಭಟ್ ಏನೇನೋ ಹೇಳಿಕೆ ಕೊಟ್ರು ಎಂದು ಕಿಡಿಕಾರಿದರು. ಪ್ರಭಾಕರ್ ಭಟ್ ಮೇಲೆ ದೇಶದ್ರೋಹ ಪ್ರಕರಣ ಹಾಕಲಿಲ್ಲ. ಇದು ತಾರತಮ್ಯ ಅಲ್ಲದೇ ಮತ್ತೇನು ಎಂದು ತೀವ್ರವಾಗಿ ಹರಿಹಾಯ್ದರು.

ಇನ್ನು ಇದೇ ಸಂದರ್ಭ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಮಂಗಳೂರು ಬಸ್ ನಿಲ್ದಾಣದಲ್ಲಿ ಘೋಷಣೆ ಕೂಗಿದ ವ್ಯಕ್ತಿ ಮೇಲೆ ಕ್ರಮವಿಲ್ಲ. ನಿಲ್ದಾಣದಲ್ಲಿ ಪೊಲೀಸರೇ ವಿನಾಕಾರಣ ಲಾಠಿ ಬೀಸಿದರು. ಆಗ ಜನ ಕಲ್ಲುತೂರಾಟ ಆರಂಭಿಸಿರಲಿಲ್ಲ. ಪೊಲೀಸರಿಂದಲೇ ಮೊದಲು ಲಾಠಿಚಾರ್ಜ್ ನಡೆಸಿದರು. ಆ ಬಳಿಕ ಜನ ಕಲ್ಲುತೂರಾಟ ಮಾಡಿದ್ರು. ವಿದ್ಯಾರ್ಥಿಗಳ ಮೇಲೂ ಲಾಠಿಚಾರ್ಜ್ ನಡೆಸಿದರು. ಮೃತರಿಬ್ಬರು ನಿಜಕ್ಕೂ ಅಮಾಯಕರೇ. ಈ ಮೃತರ ಮೇಲೆ ಹಿಂದೆ ಕೇಸ್ ಇತ್ತಾ ಎಂದು ಪ್ರಶ್ನಿಸಿದರು…

Leave a Comment