ಮಂಗಳೂರು-ಕಣ್ಣೂರು ಮಧ್ಯೆ ರೈಲ್ವೇ ಟಿಕೆಟ್ ಚೆಕ್ಕಿಂಗ್: ೨,೧೨,೬೯೦ ರೂ. ದಂಡ ಸಂಗ್ರಹ

ಮಂಗಳೂರು, ಮಾ.೨- ಮಂಗಳೂರು-ಕಣ್ಣೂರು ನಡುವಣ ರೈಲ್ವೇ ಪ್ರಯಾಣಿಕರನ್ನು ರೈಲ್ವೇ ಟಿಕೆಟ್ ತಪಾಸಣ ಅಧಿಕಾರಿಗಳು ಫೆ.೨೬ ಮತ್ತು ೨೭ರಂದು ದಿಢೀರ್ ತಪಾಸಣೆ ನಡೆಸಿ ಒಟ್ಟು ೬೬೧ ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿ ೨,೧೨,೬೯೦ ರೂ. ದಂಡ ವಸೂಲಿ ಮಾಡಿದ್ದಾರೆ. ೨೧೮ ಪ್ರಕರಣಗಳು ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿಯೇ ಪತ್ತೆಯಾಗಿದ್ದು ಅಲ್ಲಿ ೬೭,೪೪೫ ರೂ. ದಂಡ ವಸೂಲಿಯಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ. ಹಾಗೆಯೇ ಮಲಬಾರ್ ಎಕ್ಸ್‌ಪ್ರೆಸ್, ತಿರುವನಂತಪುರ ಎಕ್ಸ್‌ಪ್ರೆಸ್ ಮತ್ತು ಪ್ಯಾಸೆಂಜರ್ ರೈಲುಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರು ಅಧಿಕ ಸಂಖ್ಯೆಯಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು- ಕಣ್ಣೂರು ವಿಭಾಗದಲ್ಲಿ ರೈಲು ಟಿಕೆಟ್ ಮಾರಾಟದಲ್ಲಿ ಏಕಾಏಕಿ ಕುಸಿತ ಕಂಡು ಬಂದಿದ್ದು ಈ ನಿಟ್ಟಿನಲ್ಲಿ ಹಿರಿಯ ರೈಲ್ವೇ ಅಧಿಕಾರಿ ಪ್ರತಾಪ್ ಸಿಂಗ್ ಶಮಿ ಅವರು ಟಿಕೆಟ್ ತಪಾಸಣೆ ಮಾಡುವಂತೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ದಿಢೀರ್ ಟಿಕೆಟ್ ತಪಾಸಣೆ ಮಾಡಲಾಗಿದೆ. ರೈಲ್ವೇ ಅಧಿಕಾರಿಗಳು, ಇನ್‌ಸ್ಪೆಕ್ಟರ್‌ಗಳು, ರೈಲು ಟಿಕೆಟ್ ತಪಾಸಣ ಸಿಬಂದಿ ಮತ್ತು ರೈಲ್ವೇ ಸುರಕ್ಷತಾ ಪಡೆಯ(ಆರ್‌ಪಿಎಫ್) ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಗೆ ಸೀಸನ್ ಟಿಕೆಟ್ ಅಥವಾ ಮೊಬೈಲ್ ಆಪ್ ಬಳಸಿ ಯುಟಿಎಸ್ ಟಿಕೆಟ್ ಪಡೆದು ಪ್ರಯಾಣಿಸುವಂತೆ ಸಲಹೆ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Leave a Comment