ಮಂಗಳಮುಖಿಯ ಸ್ವಾವಲಂಬಿ ಬದುಕು!

 

ಮಂಗಳೂರು, ಡಿ.೬- ನಗರದ ಲಾಲ್‌ಬಾಗ್ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಬಸವೇಶ್ವರ ಖಾನಾವಳಿಯಲ್ಲಿ ಕೆಲಸ ಮಾಡಿಕೊಂಡು ಸ್ವಾವಲಂಬಿ ಜಿವನ ಸಾಗಿಸುತ್ತಿರುವ ಸಂಜನಾ ಇತರ ಮಂಗಳಮುಖಿಯರಿಗೆ ಮಾದರಿಯಾಗಿದ್ದಾರೆ. ಇತ್ತೀಚೆಗೆ ನಡೆದ ರಾಜ್ಯಮಟ್ಟದ ಪ್ರಪ್ರಥಮ ಟ್ರಾನ್ಸ್‌ಜೆಂಡರ್ ಸೌಂದರ್ಯ ಸ್ಪರ್ಧೆಯಲ್ಲಿ ‘ಪರಿವರ್ತನ್ ಟ್ರಾನ್ಸ್‌ಮಿಸ್-೨೦೧೮’ ಮುಕುಟ ಮುಡಿಗೇರಿಸಿಕೊಂಡಿದ್ದಾರೆ. ಈ ಯಶಸ್ಸಿನಿಂದ ಪ್ರೇರಿತಗೊಂಡು ಥಾಯ್ಲೆಂಡ್‌ನಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಟ್ರಾನ್ಸ್ ಜೆಂಡರ್ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಲು ಸಂಜನಾ ತಯಾರಿ ನಡೆಸುತ್ತಿದ್ದಾರೆ.

 

ಸಂಜನಾ ಕೆಲದಿನಗಳ ಹಿಂದೆ ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದಾರೆ. ಇದೀಗ ಅವರಿಗೆ ಕನ್ನಡ ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಲು ಆಫರ್ ಕೂಡ ಬಂದಿದೆಯಂತೆ. ಯಶಸ್ಸಿನ ಮೆಟ್ಟಿಲೇರಿರುವ ಸಂಜನಾ ಹಳೆಯ ಜೀವನ ಇತರೆ ಮಂಗಳಮುಖಿಯರಂತೆ ಕಷ್ಟಕರವಾಗಿತ್ತು. ಕಾರವಾರದ ದಾಂಡೇಲಿಯಲ್ಲಿದ್ದ ಈಕೆ ೬ನೇ ತರಗತಿಯ ನಂತರ ಹೆಣ್ಣಿನ ಭಾವನೆ ಬೆಳೆಯಲು ಪ್ರಾರಂಭವಾಯಿತು. ಹತ್ತನೇ ತರಗತಿಯ ಪರೀಕ್ಷೆ ಫೀಸ್ ಕಟ್ಟಲು ತಂದೆ ಕೊಟ್ಟ ಹಣ ತೆಗೆದುಕೊಂಡು ಬೆಂಗಳೂರಿಗೆ ಓಡಿಹೋಗಿ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಳು. ಆಮೇಲೆ ಜೀವನ ನಡೆಸಲು ಭಿಕ್ಷೆ ಬೇಡಿದ್ದಲ್ಲದೆ ಸೆಕ್ಸ್ ವರ್ಕರ್ ಆಗಿಯೂ ಬದುಕು ಸಾಗಿಸುತ್ತಿದ್ದಳು.

 

ಈ ವೇಳೆ ‘ಪರಿವರ್ತನ’ ಅನ್ನುವ ಸಂಘಟನೆ ಮಂಗಳಮುಖಿಯರ ಫ್ಯಾಷನ್ ಶೋ ಏರ್ಪಡಿಸಿದ್ದು, ರಾಜ್ಯದ ವಿವಿಧ ಕಡೆಗಳಿಂದ ಭಾಗವಹಿಸಿದ್ದ ಸುಮಾರು ೪೧ ಮಂದಿ ಮಂಗಳಮುಖಿಯರಲ್ಲಿ ಸಂಜನಾ ಗೆದ್ದಿದ್ದಾಳೆ. ಫ್ಯಾಷನ್ ಶೋ ನೋಡಲು ಬಂದ ಬಸವೇಶ್ವರ ಖಾನಾವಳಿಯ ನಿತಿನ್ ದೇಶಪಾಂಡೆ ಫೋನ್ ಮಾಡಿ, ನಮ್ಮ ಹೋಟೆಲ್‌ಗೆ ಕ್ಯಾಶಿಯರ್ ಆಗಿ ಕೆಲಸ ಮಾಡಲು ಬರಬಹುದಾ ಎಂದು ಕೇಳಿದರು. ನನಗೂ ಜನರೊಂದಿಗೆ ಬೆರೆಯಬೇಕು ಎಂದು ಆಸೆಯಿತ್ತು. ಭಿಕ್ಷೆ ಬೇಡಿ ಬದುಕುವುದು ಬೇಡವಾಗಿತ್ತು. ಎರಡು ದಿನ ಯೋಚನೆ ಮಾಡಿ ಕಡೆಗೆ ಒಪ್ಪಿದೆ. ಈಗ ನನ್ನನ್ನು ಮಗಳ ರೀತಿ ನೋಡುತ್ತಿದ್ದಾರೆ ಎಂದು ಸಂಜನಾ ಹೆಮ್ಮೆಯಿಂದ ಹೇಳುತ್ತಾರೆ.

Leave a Comment