ಮಂಗಳನಲ್ಲಿತ್ತು ಹಿಂದೊಮ್ಮೆ ನೀರು

ಇಂದು ಬೆಂದು ಬೆಂಗಾಡಾಗಿರುವ ಮಂಗಳ ಗ್ರಹದಲ್ಲಿ ಹಿಂದೊಮ್ಮೆ ಯಥೇಚ್ಛವಾಗಿ ನೀರು ಇತ್ತು ಎಂದು ಮಂಗಳ ಶೋಧನೆಯಲ್ಲಿರುವ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಂಗಳ ಗ್ರಹದ ಶೊಧನೆಯಲ್ಲಿರುವ ನಾಸಾದ ಕ್ಯೂರಿಯಾಸಿಟಿ, ರೋವರ್ ಬಾಹ್ಯಾಕಾಶ ನೌಕೆ ಅಲ್ಲಿರುವ ಒಳಪದರಗಳಿಂದ ಸಂಗ್ರಹಿಸಿ ಕಳುಹಿಸಿರುವ ಶಿಲಾ ಮಾದರಿಗಳಲ್ಲಿ ವೈವಿಧ್ಯಮಯ ಖನಿಜಾಂಶಗಳು ಪತ್ತೆಯಾಗಿವೆ.

ಶಿಲಾ ಮಾದರಿಗಳ ವೈಜ್ಞಾನಿಕ ಅಧ್ಯಯನ ನಡೆಸಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ಈ ಖನಿಜಗಳ ಮೂಲಗಳಲ್ಲಿ ಹಿಂದೊಮ್ಮೆ ಯಥೇಚ್ಛವಾಗಿ ನೀರು ಇರುವುದನ್ನು ತೋರಿಸುತ್ತದೆ. 3.5 ಶತಕೋಟಿ ವರ್ಷಗಳ ಹಳೆಯದಾದ ಸೆಡಿಮೆಂಟರಿ ಶಿಲಾ ಪದರಗಳ ನಿರ್ಮಾಣಕ್ಕೆ ನೀರು ಪ್ರಮುಖ ಮೂಲ. ಹೀಗಾಗಿ ಭೂಮಿಯ ಮೇಲೆ ಜೈವಿಕ ವಾತಾವರಣ ನಿರ್ಮಾಣದ ಹಂತದಲ್ಲಿಯೇ ನಾಸಾಗಳ ಗ್ರಹದಲ್ಲಿಯೂ ಜೈವಿಕ ಪರಿಸರ ಇರುವ ಸಾಧ್ಯತೆಯನ್ನು ಈ ಖನಿಜಾಂಶಗಳ ಅಧ್ಯಯನದಿಂದ ತೀರ್ಮಾನಿಸಿದ್ದಾರೆ.  

ಮಂಗಳ ಶೋಧನೆಯಲ್ಲಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ಸಂಗ್ರಹಿಸಿದ್ದ ಶಿಲಾ ಮಾದರಿಗಳ ವೈಜ್ಞಾನಿಕ ಪರೀಕ್ಷೆಗಳಲ್ಲಿ ಈ ಅಂಶ ಖಚಿತಪಟ್ಟಿದೆ. ಕ್ಯೂರಿಯಾಸಿಟಿ ರೋವರ್ ಬಾಹ್ಯಾಕಾಶ ನೌಕೆ, ಮಂಗಳನಲ್ಲಿ ಅಗೆದು ತೆಗೆದಿದ್ದ ಶಿಲಾ ಮಾದರಿಗಳ ಪರೀಕ್ಷೆಯಲ್ಲಿ ಅಲ್ಲಿ ಬಹುವಿಧದ ಖನಿಜಗಳು ಇರುವುದು ಪತ್ತೆಯಾಗಿದ್ದು, ಈ ಖನಿಜಗಳು ನೀರಿನ ಮೂಲದಿಂದ ರಚನೆಯಾಗಿರುವಂತಹುದು. ನೀರಿನಲ್ಲಿ ನಿರಂತರವಾಗಿ ಸಂಗ್ರಹವಾಗುವ ಕಲ್ಲು, ಮಣ್ಣು ಚೂರುಪಾರು ಕ್ರಮೇಣ ಪದರ ಪದರವಾಗಿ ಸಂಗ್ರಹವಾಗುತ್ತ ಸೆಡಿಮೆಂಟರಿ ಕಲ್ಲು ರಚನೆಯಾಗುತ್ತದೆ. ಅಂತಹ ಕಲ್ಲುಗಳ ಮಾದರಿಗಳನ್ನು ಕ್ಯೂರಿಯಾಸಿಟಿ ರೋವರ್ ಮಂಗಳನ ಒಳಪದರಗಳಿಂದ ಸಂಗ್ರಹಿಸಿ ಭೂಮಿಗೆ ರವಾನಿಸಿತ್ತು. ಅವುಗಳ ವೈಜ್ಞಾನಿಕ ಪರೀಕ್ಷೆ ನಡೆಸಿರುವ ವಿಜ್ಞಾನಿಗಳು ಈ ಕಲ್ಲಿನ ಮಾದರಿಗಳಲ್ಲಿ ಬಹುವಿಧದ ಖನಿಜಾಂಶಗಳು ಇರುವುದನ್ನು ಪತ್ತೆ ಮಾಡಿವೆ.

ಮೌಂಟ್ ಶಾರ್ಪ್ ಗುಡ್ಡದಡಿ

ಮಂಗಳ ಗ್ರಹದ ಗಲೆ ಹೆಸರಿನ ಕೊರಕಲು ಭಾಗದಲ್ಲಿಯ ಮೌಂಟ್ ಶಾರ್ಪ್ ಗುಡ್ಡದ ಅಡಿಯಲ್ಲಿ ನೆಲೆನಿಂತ ಕ್ಯೂರಿಯಾಸಿಟಿ ರೋವರ್ ಅಲ್ಲಿ ನಾಲ್ಕು ಕಡೆ ಕೊರೆದ ಶಿಲಾ ಮಾದರಿಗಳನ್ನು ಸಂಗ್ರಹಿಸಿ ಭೂಮಿಗೆ ರವಾನಿಸಿತ್ತು.

ಆ ಮಾದರಿಗಳ ಪರೀಕ್ಷೆ ನಡೆಸಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದ ವಿಜ್ಞಾನಿಗಳು ಮಂಗಳ ಗ್ರಹ ರಚನೆಯ ಆರಂಭದಲ್ಲಿ ಅದರಲ್ಲಿ ಹೇರಳವಾಗಿ ನೀರು ಮತ್ತು ಜೈವಿಕ ವಾತಾವರಣ ಇತ್ತು ಎಂಬುದನ್ನು ಈ ಖನಿಜಗಳು ತಿಳಿಸುತ್ತವೆ ಎಂದಿದ್ದಾರೆ.

ಮಂಗಳನಲ್ಲಿಯ ಶಿಲಾ ರಚನೆಗಳು 3.5 ಶತಕೋಟಿ ವರ್ಷಗಳಷ್ಟು ಹಳೆಯವಾಗಿದ್ದು, ದೀರ್ಘಾವಧಿಯಲ್ಲಿ ಕ್ರಮೇಣ ಸಂಗ್ರಹವಾದಂತಹವು. ಹೆಚ್ಚು-ಕಮ್ಮಿ ಭೂಮಿಯ ಆರಂಭವೂ ಇದೇ ಕಾಲಕ್ಕೆ ಬರುವುದರಿಂದ ಭೂಮಿಯ ಮೇಲಿನ ಜೈವಿಕ ವಾತಾವರಣ ಮಂಗಳನ ಆರಂಭದ ದಿನಗಳಲ್ಲಿ ಅಲ್ಲಿಯೂ ಇತ್ತು ಎಂಬ ಅಭಿಪ್ರಾಯವನ್ನು ತಮ್ಮ ಶೋಧನಾ ವರದಿಯಲ್ಲಿ ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಈ ವರದಿ ಇತ್ತೀಚಿನ ಅರ್ತ್ ಅಂಡ್ ಪ್ಲಾನೇಟರಿ ಸೈನ್ಸ್ ಲೆಟರ್ ನಿಯತಕಾಲಿಕದ ಇತ್ತೀಚಿನ ಸಂಚಿಕೆಯಲ್ಲಿ ಪ್ರಕಟವಾಗಿದೆ.

– ಉತ್ತನೂರು ವೆಂಕಟೇಶ್.

Leave a Comment