ಮಂಗಳದ ಒಳರಚನೆ ಹೇಗಿದೆ

ಭೂಮಿಯನ್ನೇ ಬಹುಪಾಲು ಹೋಲುವ ಮಂಗಳಗ್ರಹದ ಒಳರಚನೆ ಹೇಗಿದೆ ಎಂಬುದರ ಬಗ್ಗೆ 2 ವರ್ಷಗಳ ಕಾಲ ಅಧ್ಯಯನ ನಡೆಸಲು ಅಮೆರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಉಡಾವಣೆ ಮಾಡಿರುವ `ಇನ್‌ಸೈಟ್’ ಬಾಹ್ಯಾಕಾಶ ನೌಕೆಯ ಮುಖ್ಯ ಉದ್ದೇಶ.

ಮಂಗಳದ ಒಳ ರಚನೆಯ ಅಧ್ಯನಯಕ್ಕೆಂದು ಮೊಟ್ಟ ಮೊದಲ ಬಾರಿಗೆ ನಾಸಾ ತನ್ನ ಇನ್‌ಸೈಟ್ ಬಾಹ್ಯಾಕಾಶ ನೌಕೆಯನ್ನು ಉಡಾವಣೆ ಮಾಡಿದೆ. ನೌಕೆ ತಾನು ಕ್ರಮಿಸಬೇಕಾದ 48.5 ಕೋಟಿ ಕಿ.ಮೀ ದೂರದಲ್ಲಿ ಅರ್ಧಭಾಗದ ಯಾನವನ್ನು ಪೂರೈಸಿದೆ.  ಇದೇ ವರ್ಷ ಮೇ 5 ರಂದು ಉಡಾವಣೆಗೊಂಡಿರುವ ಈ ನೌಕೆ, ನ. 26 ರಂದು ಮಂಗಳದ ಸುರಕ್ಷಿತ ಭಾಗದಲ್ಲಿ ತಳವೂರಲಿದೆ. ಅಲ್ಲಿ ಈ ನೌಕೆ 2 ವರ್ಷಗಳ ಕಾಲ ಮಂಗಳದ ಒಳರಚನೆ, ಕಂಪನಗಳು, ತಾಪಮಾನ ಇತ್ಯಾದಿಗಳ ಅಧ್ಯಯನ ನಡೆಸುತ್ತದೆ. ಈ ಅಧ್ಯಯನದಿಂದ ಭೂಮಿ, ಚಂದ್ರ ಸೇರಿದಂತೆ ಅನ್ಯ ಗ್ರಹಗಳ ರಚನೆ ಕುರಿತಂತೆ ಮಹತ್ವದ ಅಂಶಗಳನ್ನು ತಿಳಿಯುವುದು ಯಾನದ ಮುಖ್ಯ ಉದ್ದೇಶ.

ಈ ಯೋಜನೆಯ ಅಂದಾಜು ವೆಚ್ಚ 814 ದಶಲಕ್ಷ ಡಾಲಱ್ಸ್ ಎಂದು ನಾಸಾ ಹೇಳಿದೆ.

ಈವರೆವಿಗೂ ಮಂಗಳದ ಮೇಲ್ಮೈ ಶೋಧನೆ ಮತ್ತು ಅದರಲ್ಲಿಯ ನೀರಿನ ಅಂಶಗಳ ಅಧ್ಯಯನ ನಡೆಸಿದ್ದ ನಾಸಾ, ಈಗ ಮೊದಲ ಬಾರಿಗೆ ಮಂಗಳದ ಒಳರಚನೆ ಕುರಿತಂತೆ ಅಧ್ಯಯನ ನಡೆಸಲು ಇನ್‌ಸೈಟ್ (ಇನ್‌ಟೀರಿಯಲ್ ಎಕ್ಸ್‌ಪ್ಲೊರೇಷನ್ ಯೂಸಿಂಗ್ ಸಿಸ್ಮಿಕ್ ಇನ್‌ವೆಸ್ಟಿಗೇಷನ್ ಜಿಯೋಡೆಸಿ ಆಂಡ್ ಹೀಟ್ ಟ್ರಾನ್ಸ್‌ಪೋರ್ಟ್) ಬಾಹ್ಯಾಕಾಶ ನೌಕೆಯನ್ನು ಕಳುಹಿಸಿದೆ.

26vichara1

ಇದೇ ವರ್ಷದ ಕಳೆದ ಮೇ 15 ರಂದು ಮಧ್ಯ ಕ್ಯಾಲಿಪೋರ್ನಿಯಾದ ವ್ಯಂಡೆಸ್‌ಬರ್ಗ್ ವಾಯು ನೆಲೆಯಿಂದ ಯುನೈಟೆಡ್ ಲಾಂಚ್ ಅಲಿಯನ್ಸ್ ಅಟ್ಲಾಸ್-5 ರಾಕೆಟ್ ಬೆನ್ನೇರಿ ಹೊರಟಿರುವ ಇನ್‌ಸೈಟ್ ನೌಕೆ ಈಗಾಗಲೇ ತನ್ನ ಗಮ್ಯಸ್ಥಾನ ತಲುಪುವ ಅರ್ಧ ಹಾದಿಯ ಪಯಣ ಮುಗಿಸಿದೆ.

ಒಟ್ಟು 205 ದಿನಗಳ ಅವಧಿಯಲ್ಲಿ 48.5 ಕೋಟಿ ಕಿ.ಮೀ,ಗಳಷ್ಟು ದೂರವನ್ನು ಕ್ರಮಿಸಿ ನ. 26 ರಂದು ಮಂಗಳದ ಸಮತಟ್ಟಾದ ಹಾಗೂ ಸುರಕ್ಷಿತ ಪ್ರದೇಶವಾಗಿರುವ ಎಲಿಸಿಯಂ ಪ್ಲಾನಿಟಿಯ ಪ್ರದೇಶದಲ್ಲಿ ಇಳಿಯಲಿದೆ. ನಂತರದಲ್ಲಿ 2 ವರ್ಷಗಳ ಕಾಲ ಮಂಗಳದ ಒಳರಚನೆ ಕುರಿತಂತೆ ಎಲ್ಲ ಬಗೆಯ ಅಧ್ಯಯನ ನಡೆಸಲಿದೆ ಎಂದು ಯೋಜನೆಯ ಮುಖ್ಯ ವಿಜ್ಞಾನಿ ಬ್ರೂಸ್ ಬೆನರ್ಟ್ ಹೇಳಿದ್ದಾರೆ.

ಇನ್‌ಸೈಟ್ ಬಾಹ್ಯಾಕಾಶ ನೌಕೆಯ ಮುಖ್ಯಗುರಿ ಮಂಗಳದಲ್ಲಿಯ ಭೂಕಂಪನಗಳು, ಅದರ ಒಳ ಭಾಗದ ಮತ್ತು ಹೊರ ಭಾಗದ ತಾಪಮಾನ ಅಧ್ಯಯನವಾಗಿದ್ದು, ಈ ಅಧ್ಯಯನಕ್ಕೆ ಪೂರಕವಾಗಿರುವ ವೈಜ್ಞಾನಿಕ ಸಾಧನಗಳು ಈ ನೌಕೆಯಲ್ಲಿವೆ.

ಮಂಗಳದ ಮೇಲ್ಮೈಯಿಂದ 5 ಮೀ. (16 ಅಡಿ) ಆಳದವರೆವಿಗೂ ಕೊರೆಯಬಲ್ಲ ಸಾಮರ್ಥ್ಯವಿರುವ ಹೆಚ್‌ಪಿ-3 ( ಹೀಟ್ ಫ್ಲೋ ಅಂಡ್ ಫಿಜಿಕಲ್ ಪ್ರಾಪರ್ಟಿಸ್ ಪ್ಯಾಕೇಜ್) ಎಂಬ ರೊಬೋರ್ಟ್ ಉಪಕರಣವಿದೆ. ಗ್ರಹದ ಒಳಭಾಗದಲ್ಲಿಯ ಭೂಕಂಪನಗಳನ್ನು ಅಳೆಯಲು ಸಿಸ್ಮೊ ಮೀಟರ್ ಹಾಗೂ ಗ್ರಹದ ಮಧ್ಯಭಾಗ ಮತ್ತು ಅದು ಪರಿಭ್ರಮಿಸುವಾಗ ಅದರ ಅಕ್ಷದಲ್ಲಾಗುವ ಬದಲಾವಣೆಗಳನ್ನು ಅಧ್ಯಯನ ಮಾಡಲು ಆರ್.ಐ.ಎಸ್.ಸಿ (ರೋಟೇಷನ್ ಅಂಡ್ ಇಂಟೀರಿಯಲ್ ಸ್ಟ್ರಕ್ಚರ್ ಎಕ್ಸ್‌ಪಿರಿಮೆಂಟ್) ಸಾಧನವಿದೆ ಎಂದು ನಾಸಾ ಮೂಲಗಳು ಹೇಳಿವೆ.

ಉತ್ತನೂರು ವೆಂಕಟೇಶ್

Leave a Comment