ಮಂಗಳದಲ್ಲಿ ಜೈವಿಕ ವಾತಾವರಣ

ಮಂಗಳದಲ್ಲಿ ಜೀವರಾಶಿಗಳಿಗೆ ಪೂರಕವಾದ ರಾಸಾಯನಿಕ ಸಂಯುಕ್ತ ಅಂಶಗಳನ್ನು ಕ್ಯೂರಿಯಾಸಿಟಿ ರೋವರ್ ಪತ್ತೆ ಮಾಡಿದೆ ಎಂದು ನಾಸಾ ಹೇಳಿದೆ. ಮಂಗಳದಲ್ಲಿ ಕೊರೆದು, ಸಂಗ್ರಹಿಸಲಾಗಿದ್ದ ಕಲ್ಲು, ಮಣ್ಣು, 3.5 ಶತಕೋಟಿ ವರ್ಷಗಳ ಹಿಂದಿನವಾಗಿದ್ದು, ಅವುಗಳಲ್ಲಿ ಅಡಕವಾಗಿರುವ ಜೈವಿಕ ಅಂಶಗಳು ಒಂದು ಕಾಲದಲ್ಲಿ ಅಲ್ಲಿ ಜೀವರಾಶಿ ಇದ್ದುದನ್ನು ಸ್ಪಷ್ಟ ಪಡಿಸುತ್ತದೆ.

ಮಂಗಳ ಗ್ರಹದಲ್ಲಿ ಶೋಧನಾ ಕಾರ್ಯದಲ್ಲಿ ತೊಡಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ಇತ್ತೀಚೆಗೆ ಸಂಗ್ರಹಿಸಿರುವ ಜೈವಿಕ ಅಂಶಗಳಿಂದ ಅಲ್ಲಿ ಜೀವ ಯೋಗ್ಯ ವಾತಾವರಣದ ಸಾಧ್ಯತೆ ಇದೆ ಎಂದು ನಾಸಾ ಹೇಳಿದೆ. ಅಲ್ಲಿನ ಕಲ್ಲು, ಮಣ್ಣುನಲ್ಲಿಯ ಜೈವಿಕ ಕಣಗಳು ಅಲ್ಲಿಯ ವಾತಾವರಣದಲ್ಲಿಯ ಮೀಥೆನ್ ಅಂಶ ಇತ್ಯಾದಿ ಹಿಂದೊಮ್ಮೆ ಅಲ್ಲಿ ಜೀವ ಯೋಗ್ಯ ವಾತಾವರಣ ಇತ್ತು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಹಾಗೆಯೇ ಗ್ರಹದ ಶೋಧನೆಯಲ್ಲಿ ಅದರ ಮೈಲ್ಮೇ ವಾತಾವರಣದಲ್ಲಿ ಮೀಥೆನ್ ಪ್ರಮಾಣದಲ್ಲಿಯ ಏರಿಳಿತ ಅಲ್ಲಿಯ ರಾಸಾಯನಿಕ ಸಂಯುಕ್ತಗಳು ಜೀವರಾಶಿಗೆ ಪೂರಕ ಅಂಶಗಳಾಗಿವೆ. ಭೂಮಿಯ ಮೇಲಿನ ವಾತಾವರಣದ ಮೀಥೆನ್‌ಗೆ ಪ್ರಾಣಿ ಮತ್ತು ಸಸ್ಯ ಜೀವಿಗಳೇ ಮೂಲವಾಗಿರುವಂತೆ ಮಂಗಳ‌ನಲ್ಲಿಯ ಮೀಥೆನ್ ವಾತಾವರಣಕ್ಕೂ ಹಿಂದೊಮ್ಮೆ ಅಲ್ಲಿದ್ದ ಜೀವ ಸಂಕುಲವೇ ಮೂಲವಾಗಿದೆ ಎಂದು ಮೇರಿಲ್ಯಾಂಡ್‌ನಲ್ಲಿರುವ ನಾಸಾದ ಗೊಡ್ಡಾಡಾನ್ ಬಾಹ್ಯಾಕಾಶ ಕೇಂದ್ರದ ಖಗೋಳ ಜೀವ ವಿಜ್ಞಾನಿ ಜೆನ್ನಿಫೆರ್ ಇಗೋನ್ ಬೋರ್ಡೆ ಹೇಳಿದ್ದಾರೆ.

ನಾಸಾ ಕ್ಯೂರಿಯಾಸಿಟಿ ರೋವರ್ ಪತ್ತೆ ಹಚ್ಚಿರುವ ಜೈವಿಕ ಕಣಗಳಿಂದಾಗಿ ಮುಂದಿನ ಶೋಧನೆಗಳಲ್ಲಿ ಅಲ್ಲಿ ಹಿಂದೊಮ್ಮೆ ಜೀವ ಸಂಕುಲ ಇದ್ದ ಬಗ್ಗೆ ಇನ್ನಷ್ಟು ಸ್ಪಷ್ಟ ಪುರಾವೆಗಳೂ ಸಿಗಲಿವೆ ಎಂದು ನಾಸಾದ  ಕ್ಯೂರಿಯಾಸಿಟಿ ಯಾನದ ಇಂಜಿನಿಯರ್ ಅಶ್ವಿನ್ ವಾಸವಾಡ ಹೇಳಿದ್ದಾರೆ.

ಮಂಗಳದಲ್ಲಿ ಜೀವರಾಶಿ ಪತ್ತೆಯಾಗಿಲ್ಲ. ಆದರೆ ಹಿಂದೊಮ್ಮೆ ಅಲ್ಲಿ ಯಥೇಚ್ಛ ನೀರು ಮತ್ತು ಬೆಚ್ಚನೆಯ ವಾತಾವರಣ ಇತ್ತು ಎಂಬುದಕ್ಕೆ ಅಲ್ಲಿ ಸಿಕ್ಕಿರುವ ಕುರುಹುಗಳೇ ಸಾಕ್ಷಿ ಎಂದು ನಾಸಾದ ಜೆಟ್ ಫ್ರೋಪುಲ್ ಕ್ಷನ್, ಪ್ರಯೋಗಾಲಾಯದ ವಿಜ್ಞಾನಿ ಕ್ರಿಸ್ಟ್‌ಫರ್ ವೆಬ್‌ಸ್ಟರ್ ಅಭಿಪ್ರಾಯಪಟ್ಟಿದ್ದಾರೆ.

ಭೂಮಿಯನ್ನು ಬಿಟ್ಟು ಅನ್ಯ ಗ್ರಹಗಳಲ್ಲಿ ಜೀವ ಯೋಗ್ಯ ವಾತಾವರಣ ಇದೆಯೇ ಎಂಬುದರ ಬಗ್ಗೆ ವಿಶ್ವದ್ಯಾದ್ಯಂತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ನಿರಂತರವಾಗಿ ಶೋಧನಾ ಕಾರ್ಯದಲ್ಲಿ ತೊಡಗಿವೆ. ಭೂಮಿಯ ವಾತಾವರಣದಲ್ಲಿ ಸ್ವಲ್ಪಮಟ್ಟಿಗೆ ಹೋಲುವ ವಾತಾವರಣ ಮಂಗಳದಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಲ್ಲಿ ಜೀವ ಪೂರಕ ವಾತಾವರಣ ಶೋಧನೆಗೆ ನಾಸಾ ಹೆಚ್ಚಿನ ಗಮನ ನೀಡಿದೆ.

ಮಂಗಳದಲ್ಲಿ ಶೇ. 1 ರಿಂದ 2 ರಷ್ಟು ಆರ್ಗಾನ್ ಶೇ. 2 ರಿಂದ 3 ರಷ್ಟು ನೈಟ್ರೋಜನ್, ಶೇ. 95 ರಷ್ಟು ಕಾರ್ಬನ್ ಡೈ ಆಕ್ಸೈಡ್, ಮತ್ತು ಶೇ.0.3 ರಷ್ಟು ಆಮ್ಲಜನಕ ಇರುವುದರಿಂದ ಇಲ್ಲಿ ಜೇವ ಯೋಗ್ಯ ವಾತಾವರಣ ಇರುವ ಸಾಧ್ಯತೆಯನ್ನು ಹೆಚ್ಚಿಸಿದೆ. ಹೀಗಾಗಿಯೇ ಈ ಗ್ರಹದ ಶೋಧನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಅಮೆರಿಕದ ನಾಸಾ ಮಂಗಳದಲ್ಲಿ ಹೆಚ್ಚು ಶೋಧನೆ ಕೈಗೊಂಡಿರುವ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಿದೆ.

– ಉತ್ತನೂರು ವೆಂಕಟೇಶ್

Leave a Comment