ಭ್ರಷ್ಟಾಚಾರ, ಜಾತಿ ತಾರತಮ್ಯಗಳ ವಿರುದ್ಧ ಹೋರಾಡಿ: ಕುಪ್ಪೂರುಶ್ರೀ

ತಿಪಟೂರು, ಆ. ೧೮- ಹಲವು ಮಹನೀಯರ, ಹೋರಾಟಗಾರರ ತ್ಯಾಗ, ಬಲಿದಾನದಿಂದ ದೊರಕಿರುವ ಸ್ವಾತಂತ್ರ್ಯವು ಸ್ವೇಚ್ಚಚಾರವಾಗದೆ, ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಕೋಮುವಾದ, ಜಾತಿ ತಾರತಮ್ಯಗಳ ವಿರುದ್ಧ ಹೋರಾಡುವ ದೃಢ ಸಂಕಲ್ಪವನ್ನು ಯುವ ಪೀಳಿಗೆ ಸ್ವಾತಂತ್ರ್ಯ ದಿನದಂದು ಮಾಡಬೇಕು ಎಂದು ಕುಪ್ಪೂರು ತಮ್ಮಡಿಹಳ್ಳಿ ‌ಡಾ. ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಗರದ ಹಳೇಪಾಳ್ಯದ ಕಲ್ಕೆಳೆ ಗ್ರಾಮದಲ್ಲಿ ಜಯಕರ್ನಾಟಕ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ 72ನೇ ಸ್ವಾತಂತ್ರ್ಯ ದಿನಾಚರಣೆಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ನಮಗೆ ಸ್ವಾತಂತ್ರ್ಯ ಲಭಿಸಿದೆ. ಆದರೆ ಇದನ್ನು ಸರಿಯಾದ ಕ್ರಮದಲ್ಲಿ ಯಾರೂ ಬಳಕೆ ಮಾಡಿಕೊಳ್ಳುತ್ತಿಲ್ಲ. ಸ್ವಾತಂತ್ರ್ಯ ಸ್ವೇಚ್ಛಚಾರವಾಗುತ್ತಿದ್ದು, ಮಹನೀಯರ ತ್ಯಾಗ ಬಲಿದಾನಕ್ಕೆ ಅರ್ಥವಿಲ್ಲದಂತಾಗಿದೆ. ಅವರು ಕೊಟ್ಟ ಸ್ವಾತಂತ್ರ್ಯವನ್ನು ನಾವು ಸದ್ವಿನಿಯೋಗ ಮಾಡಿಕೊಂಡು ಸುಂದರ ಸುಸಂಸ್ಕೃತವಾದ ನಮ್ಮ ದೇಶದ ಹಿರಿಮೆಯನ್ನು ಎತ್ತಿ ಹಿಡಿಯಬೇಕಾದ ಕರ್ತವ್ಯ ಯುವಪೀಳಿಗೆಯದ್ದಾಗಿದೆ. ದೇಶಕ್ಕಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹೋರಾಟ ಮಾಡುತ್ತಿರುವ ಸೈನಿಕರನ್ನು, ರೈತರನ್ನು ನಾವು ಇಂದು ನೆನಪಿಸಿಕೊಳ್ಳುವ ಅವಶ್ಯಕತೆ ಇದ್ದು, ಯುವಪೀಳಿಗೆ ಎಚ್ಚೆತ್ತುಕೊಂಡು ಸ್ವಚ್ಚ, ಸುಂದರ, ಸಮೃದ್ಧ ಭಾರತ ಕಟ್ಟುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು.

ಪ್ರತಿಯೊಬ್ಬರು ಆದರ್ಶ ಬದುಕನ್ನು ಕಟ್ಟಿಕೊಂಡಾಗ ಮಾತ್ರ ನೆಮ್ಮದಿ, ಶಾಂತಿಯುತವಾಗಿ ಬದುಕಲು ಸಾಧ್ಯ ಎಂದರು.
ಜಿಲ್ಲಾ ಲೀಡ್‌ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಜ್ಯೋತಿಗಣೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸರ್ವಾಂಗೀಣ ಪ್ರಗತಿಗೆ ಶಿಕ್ಷಣ ಅವಶ್ಯಕವಾಗಿದ್ದು, ನಮ್ಮ ದೇಶವೂ ಸಹ ಉನ್ನತ ಮಟ್ಟಕ್ಕೆ ತಲುಪಿದ್ದು, ಶಿಕ್ಷಣದಿಂದ ಉತ್ತಮ ರಾಷ್ಟ್ರವಾಗಿ ಬೆಳೆದಿದೆ ಎಂದರು.

ಉಪನ್ಯಾಸಕ ಕೆ.ಎನ್. ರೇಣುಕಯ್ಯ ಮಾತನಾಡಿ, ಭಾರತ ಬ್ರಿಟೀಷರ ಕಪಿಮುಷ್ಟಿಯಿಂದ ಮುಕ್ತಿ ಪಡೆದ ಶುಭದಿನವೇ ಸ್ವಾತಂತ್ರ್ಯ ದಿನವಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಾತ್ಮಗಾಂಧೀಜಿ ಸೇರಿದಂತೆ ಹಲವು ಮಹನೀಯರನ್ನು ಸ್ಮರಿಸುವ ಮೂಲಕ ಪ್ರತಿಯೊಬ್ಬರು ಭವ್ಯ ಭಾರತದ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದರು.
ಶ್ರೀ ಚೌಡೇಶ್ವರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ಸೋಮಶೇಖರ್ ಮಾತನಾಡಿ, ನಮ್ಮ ದೇಶ ಇಂದು

ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧಿಸಿದೆ. ಏಷ್ಯಾ ಖಂಡದಲ್ಲಿ 3ನೇ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮುತ್ತಿದ್ದು, ಇನ್ನೂ ಸಾಧಿಸಬೇಕಾದ್ದು ಸಾಕಷ್ಟಿದೆ. ಆದ್ದರಿಂದ ಯುವಪೀಳಿಗೆ ದೇಶದ ಅಭಿವೃದ್ಧಿಗೋಸ್ಕರ ಕಂಕಣಬದ್ಧರಾಗಿ ನಿಲ್ಲಬೇಕಿದೆ ಎಂದರು.

ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಹೆಚ್.ಎನ್. ದೀಪಕ್‌ರವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ನಂತರ ಮಕ್ಕಳಿಗೆ ನೋಟ್‍ಪುಸ್ತಕ, ಲೇಖನಸಾಮಗ್ರಿಗಳು ಹಾಗೂ ಸಿಹಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರಸ್ವಾಮಿ, ಪ್ರಕಾಶ್‌ಸಾರ್ಥವಳ್ಳಿ, ನಗರಸಭಾ ಮಾಜಿ ಸದಸ್ಯ ಶ್ರೀನಿವಾಸ್, ಯುವ ಘಟಕದ ಅಧ್ಯಕ್ಷ ಮೋಹನ್‌ಬಾಬು, ಅಲ್ಪಸಂಖ್ಯಾತ ಘಟಕದ ಫೈರೋಜ್, ಎಸ್ಸಿ ಘಟಕದ ಆನಂದ್, ವಿದ್ಯಾರ್ಥಿ ಘಟಕದ ಮಧು, ಗಂಗಾಧರಯ್ಯ, ಗಿರಿಯಪ್ಪ, ಶಿವಣ್ಣ, ಮಂಜು, ಕೋದಂಡರಾಮು, ನವೀನ್, ದೇವರಾಜ್, ಮಹೇಶ್ ಮತ್ತಿತರು ಉಪಸ್ಥಿತರಿದ್ದರು.

Leave a Comment