ಭೂ ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ

ರಾಯಚೂರು.ಜ.03- ನಂದವಾಡಗಿ ಏತ ನೀರಾವರಿ ಯೋಜನೆಗೆ ಭೂ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ಮತ್ತು ಬೆಳೆ ನಷ್ಟ ಪರಿಹಾರ ನೀ‌ಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸ್ಥಳೀಯ ಜಿಲ್ಲಾಧಿಕಾಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಲಿಂಗಸೂಗೂರು ತಾಲೂಕಿನ ನಾರಾಯಣಪೂರು ಬಲದಂಡೆ ಕಾಲುವೆಗೆ ಹೊಂದಿಕೊಂಡಿರುವ ಗ್ರಾಮಗಳಾದ ಉಪನಾಳ, ಅಂಕನಾಳ, ತೊಂಡಿಹಾಳ, ಪಲಗಲದಿನ್ನಿ ಹಾಗೂ ಅಲ್ಕವಟ್ಟಿ ಗ್ರಾಮಗಳು ಸಂಪೂರ್ಣ ಮುಳುಗಡೆಯಾಗಿವೆ. ಆದ್ದರಿಂದ 5 ಗ್ರಾಮಗಳಿಗೆ ಶೀಘ್ರ ನೀರಾವರಿ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ನಂದವಾಡಗಿ ಏತ ನೀರಾವರಿ ಯೋಜನೆಗೆ ಭೂ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಇದುವರೆಗೂ ಸರ್ಕಾರ ಪರಿಹಾರ ವಿತರಿಸಿಲ್ಲ. 5 ಗ್ರಾಮಗಳಿಗೆ ಶೀಘ್ರ ನೀರಾವರಿ ಸೌಲಭ್ಯ ಒದಗಿಸಿ, ಕುಡಿವ ನೀರು, ದನ-ಕರುಗಳಿಗೆ ಮೇವು ಪೂರೈಸಬೇಕೆಂದು ಒತ್ತಾಯಿಸಿದರು. ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದ್ದರೂ, ಬ್ಯಾಂಕ್ ಮತ್ತು ಫೈನಾನ್ಸ್ ಅಧಿಕಾರಿಗಳು ರೈತರಿಗೆ ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿರುವುದನ್ನು ತಡೆಯಬೇಕು. ರೈತರಿಗೆ ಬೆಳೆ ಮತ್ತು ಭೂ ಪರಿಹಾರ ಸೇರಿದಂತೆ ಇನ್ನಿತರ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ವಾಸುದೇವ ಮೇಟಿ, ರವಿ ಕುಮಾರ್, ಶಿವಪುತ್ರಗೌಡ, ಮಲ್ಲಿಕಾರ್ಜುನ ರೆಡ್ಡಿ, ಉಮಾದೇವಿ, ವಿಷ್ಣುವರ್ಧನ ಗೌಡ, ನರಸಿಂಹ ನಾಯಕ, ಲಕ್ಷ್ಮಣ ಸೇರಿದಂತೆ ಅನೇಕ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Comment