ಭೂ ಕುಸಿತ; 50 ಮಂದಿ ಜೀವಂತ ಸಮಾಧಿ ಶಂಕೆ

ಶಿಮ್ಲಾ, ಆ.೧೩: ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಉಂಟಾದ ಭೂಕುಸಿತಕ್ಕೆ ೨ ಬಸ್‌ಗಳು ಸಿಲುಕಿದ ಪರಿಣಾಮ ೧೦ ಮಂದಿ ಸಾವನ್ನಪ್ಪಿ ೩೦ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ಸಂಭವಿಸಿದ್ದು, ಸಾವಿಗೀಡಾದವರ ಸಂಖ್ಯೆ ೫೦ಕ್ಕೇರುವ ಸಾಧ್ಯತೆ ಇದೆ.

ಮಂಡಿ-ಪಟಾನ್‌ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದುರಂತ ಸಂಭವಿಸಿದ್ದು, ತಕ್ಷಣಕ್ಕೆ ಸಾವಿಗೀಡಾದವರ ಬಗ್ಗೆ ನಿಖರ ಮಾಹಿತಿ ದೊರೆತಿಲ್ಲ.
ಒಂದು ಬಸ್ ಮನಾಲಿಯಿಂದ ಕತ್ರಾಕ್ಕೆ ಮತ್ತೊಂದು ಬಸ್ಸು ಮನಾಲಿಯಿಂದ ಚಾಂಬಾಕ್ಕೆ ಹೋಗುತ್ತಿತ್ತು. ದುರಂತ ಸಂಭವಿಸಿದಾಗ ಎರಡೂ ಬಸ್‌ಗಳು ಹೋಟೆಲ್ ಒಂದರ ಮುಂದೆ ಉಪಹಾರ ಸೇವಿಸಲು ನಿಲ್ಲಿಸಲಾಗಿತ್ತು ಎಂದು ವಿಪತ್ತು ನಿರ್ವಹಣಾ ವಿಭಾಗದ ವಿಶೇಷ ಕಾರ್ಯದರ್ಶಿ ಡಿ.ಡಿ. ಶರ್ಮಾ ತಿಳಿಸಿದ್ದಾರೆ.

ಮಂಡಿ ಹೆದ್ದಾರಿಯಲ್ಲಿ ಏಕಾಏಕಿ ಭೂ ಕುಸಿತ ಉಂಟಾದ್ದರಿಂದ ಬಸ್‌ಗಳು ಸುಮಾರು ೮೦೦ ಮೀಟರ್ ಆಳಕ್ಕೆ ಉರುಳಿತು. ಅದರಲ್ಲಿ ಒಂದು ಬಸ್ ಸಂಪೂರ್ಣವಾಗಿ ಹೂತುಹೋಯಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಬಸ್‌ನಲ್ಲಿ ಒಟ್ಟು ೩೦ರಿಂದ ೪೦ ಮಂದಿ ಪ್ರಯಾಣಿಕರಿದ್ದರು. ಆದರೆ ಮಾರ್ಗ ಮಧ್ಯೆ ಎಷ್ಟು ಮಂದಿ ಬಸ್ ಹತ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ. ದುರಂತದ ಬಗ್ಗೆ ಮಾಹಿತಿ ದೊರೆತ ತಕ್ಷಣ ಎಡಿಎಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಇದೇ ವೇಳೆ ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡ ಕೂಡ ಸ್ಥಳಕ್ಕೆ ಆಗಮಿಸಿ, ಕಾರ್ಯಾಚರಣೆ ಆಗಮಿಸಿದೆ. ಮಧ್ಯರಾತ್ರಿ ಹೊತ್ತಿಗೆ ಮಂಡೀ ಜಿಲ್ಲಾಡಳಿತಕ್ಕೆ ದುರ್ಘಟನೆಯ ಮಾಹಿತಿ ಲಭಿಸಿದೆ. ತಕ್ಷಣವೇ ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಮನಾಲಿ-ಕತ್ರಾ ವೊಲ್ವೊ ಬಸ್‌ನಲ್ಲಿ ಒಟ್ಟು ೮ ಪ್ರಯಾಣಿಕರು ಇದ್ದರು. ಇನ್ನೊಂದು ಬಸ್‌ನಲ್ಲಿ ೪೭ ಮಂದಿ ಪ್ರಯಾಣಿಕರು ಇರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಮೃತದೇಹಗಳ ಮರಣೋತ್ತರ ಪರೀಕ್ಷೆಗೆ ಸ್ಥಳದಲ್ಲೇ ವ್ಯವಸ್ಥೆ ಮಾಡಲಾಗಿದೆ. ಇದುವರೆಗೆ ಒಟ್ಟು ೮ ಮೃತದೇಹಗಳನ್ನು ಹೊರತೆಗೆಯಲಾಗಿದೆ. ಅದರಲ್ಲಿ  ಚಂಬಾ ಡಿಪೋದ ಬಸ್‌ನ ಚಾಲಕ ಚಂದನ್ ಶರ್ಮಾ ಮತ್ತು ಕಂಡಕ್ಟರ್ ಸತ್ಪಾಲ್ ಅವರ ಮೃತದೇಹ ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಇದು ಮೂರನೇ ದುರಂತವಾಗಿದೆ.  ೧೯೮೮ರಲ್ಲಿ ಶಿಮ್ಲಾ ಜಿಲ್ಲೆಯ ಮತಿಯಾನದಲ್ಲಿ ನಡೆದ ಇದೇ ಮಾದರಿಯ ದುರಂತದಲ್ಲಿ ೪೫ ಮಂದಿ ಹಾಗೂ ೧೯೯೪ರಲ್ಲಿ ಕುಲ್ಲು ಜಿಲ್ಲೆಯಲ್ಲಿ ನಡೆದ ದುರಂತದಲ್ಲಿ ೪೨ ಮಂದಿ ಸಾವನ್ನಪ್ಪಿದ್ದರು. ದುರಂತದಲ್ಲಿ ಮಡಿದವರಿಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Comment