ಭೂ ಒಡೆತನ ಯೋಜನೆ : ಕೋಟ್ಯಾಂತರ ಹಣ ದುರ್ಬಳಕೆ

ಕಾಳೆ ವಿರುದ್ಧ ತನಿಖೆಗೆ ಡಿಎಸ್ಎಸ್ ಒತ್ತಾಯ
ರಾಯಚೂರು.ಜೂ.20- ಭೂ ಒಡೆತನ ಯೋಜನೆಯಡಿ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಎಲ್ಲೇಶ ಆನಂದ ಕಾಳೆ ಅವರು 6 ಕೋಟಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಬಸವರಾಜ ನಕ್ಕುಂದಿ ಅವರು ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರಾಗಿ ತಮ್ಮದೇಯಾದ ಆಡಳಿತ ನಡೆಸುತ್ತಿದ್ದಾರೆ. ಕಳೆದ 8-10 ವರ್ಷಗಳಿಂದ ಜಿಲ್ಲೆಯಲ್ಲಿ ಬೀಡು ಬಿಟ್ಟಿದ ಅವರು ಭೂ ಒಡೆತನ ಯೋಜನೆಯಡಿ ಸಾಕಷ್ಟು ದುರ್ಬಳಕೆ ಮಾಡಿಕೊಂಡಿದ್ದಾರೆ. ನೀರಮಾನ್ವಿಯ ಬಂದೇ ನವಾಜ್ ಎನ್ನುವವರನ್ನು ಮುಂದಿಟ್ಟುಕೊಂಡು ಈ ಕೆಲಸ ನಡೆಸುತ್ತಿದ್ದಾರೆ.
29-10-2018 ರ ಪತ್ರದಲ್ಲಿ ಭೂ ಒಡೆತನ ಯೋಜನೆಯಡಿ ಮಾರ್ಗಸೂಚಿ ಬೆಲೆ ಮೂರು ಪಟ್ಟು ಹಾಗೂ ದರ ಅದರ ಮೇಲ್ಪಟ್ಟು ನಿಗದಿ ಪಡಿಸುವ ಪ್ರಸ್ತಾವನೆಯನ್ನು ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯಲ್ಲಿ ನಿಷ್ಕರ್ಷಿಸಿ ಮಂಜೂರಾತಿಗೆ ಕಳುಹಿಸಿಕೊಡಲು ಸೂಚಿಸಲಾಗಿದೆ. ಆದರೆ, ಕಾಳೆ ಅವರು ಸಿಂಧನೂರಿನ ಧಡೇಸೂಗೂರು, ಬಳಗನೂರು, ಗೌಡರಬಾವಿ, ಮಸ್ಕಿ, ದಿದ್ದಗಿ, ಮಾನ್ವಿ ತಾಲೂಕಿನ ಬ್ಯಾಗವಾಟ, ಬಲ್ಲಟಗಿ, ಜಾನೇಕಲ್, ಅಮರಾವತಿ, ಹಿರೇಕೊಟ್ನೇಕಲ್ ಇನ್ನಿತರ ಪ್ರಸ್ತಾವನೆ ಅನುಮೋದನೆ ಪಡೆದುಕೊಂಡಿರುತ್ತವೆ.
ಈ ಮೇಲಿನ ಪ್ರಸ್ತಾವನೆಗಳು ಈ ಹಿಂದೆ ಮೂರು ಪಟ್ಟು ಬೆಲೆ ನಿಗದಿ ಪಡಿಸಿದ ಪ್ರಸ್ತಾವನೆಗಳಾಗಿರದೆ, ಹೊಸ ಪ್ರಸ್ತಾವನೆಗಳಾಗಿರುತ್ತವೆ. ಈ ಭೂಮಿಗೆ ಸಂಬಂಧಿಸಿ, ಈ ಹಿಂದೆ ಜಿಲ್ಲಾ ಅನುಷ್ಠಾನ ಸಭೆಯಲ್ಲಿ ಮಂಡಿಸಿರುವುದಿಲ್ಲ. ಹಾಗೂ ಅನುಮೋದನೆ ಪಡೆದಿರುವುದಿಲ್ಲ. ಆದರೂ ಸಹ ಸಮಿತಿ ಅಧ್ಯಕ್ಷರು, ಜಿಲ್ಲಾಧಿಕಾರಿಗಳನ್ನು ಕತ್ತಲಲ್ಲಿ ಮಾರ್ಗಸೂಚಿ ಹೆಚ್ಚಿನ ಬೆಲೆ ಸೀಮಾಂತರಗಳ ಜನರಿಗೆ ಮಾತ್ರ ಅನುಮೋದನೆ ಪಡೆದುಕೊಂಡಿದ್ದಾರೆ ಎನ್ನುವುದು ದಲಿತ ಸಂಘರ್ಷ ಸಮಿತಿ ಆರೋಪಿಸಿದೆ.
ಸಿಂಧನೂರು ತಾಲೂಕಿನ ಸೀಮಾಂತರಕ್ಕೆ ಸಂಬಂಧಿಸಿ, ಖುಷ್ಕಿ ಜಮೀನನ್ನು ನೀರಾವರಿ ಜಮೀನಿಯೆಂದು ನಕಲಿ ದಾಖಲೆ ಸೃಷ್ಟಿಸಿ, ನಿಯಮ ಉಲ್ಲಂಘಿಸಿ, ಫಲಾನುಭವಿಗಳ ವಾಸಸ್ಥಳದಿಂದ ನೂರು ಕಿ.ಮೀ. ಒಳಗಡೆ ಬರುವ ಫಲಾನುಭವಿಗಳನ್ನು ಆಯ್ಕೆ ಮಾಡಲು ಸುತ್ತೋಲೆಯಿದ್ದರೂ, ವ್ಯವಸ್ಥಾಪಕ ನಿರ್ದೇಶಕರು ಮಾತ್ರ ಮಾನ್ವಿ ತಾಲೂಕಿನ ಬ್ಯಾಗವಾಟ ಗ್ರಾಮಕ್ಕೆ ಕವಿತಾಳ ಗ್ರಾಮದ ಫಲಾನುಭವಿಗಳನ್ನು ಆಯ್ಕೆ ಮಾ‌ಡುವ ಮೂಲಕ ಸರ್ಕಾರ ಆದೇಶ ಉಲ್ಲಂಘಿಸಿದ್ದಾರೆ.
ಸಿಂಧನೂರು ತಾಲೂಕಿನ ಧ‌‌ಡೇಸೂಗೂರು ಗ್ರಾಮದಲ್ಲಿ ಇದೇ ರೀತಿ ಮಾಡಲಾಗಿದೆ. ಭೂ ಒಡೆತನ ಯೋಜನೆಯಡಿ ಸರ್ಕಾರದ ನಿಯಮಗಳನ್ನೇ ಉಲ್ಲಂಘಿಸಿ, ಕೋಟ್ಯಾಂತರ ರೂ. ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಅಂಶಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಿ, ದುರ್ಬಳಕೆಯಾದ ಹಣವನ್ನು ಮರಳಿ ಪಡೆಯಬೇಕು. ಅಲ್ಲದೇ, ಕಾಳೆ ಅವರ ವಿರುದ್ಧ ತೀವ್ರ ತನಿಖೆಗೆ ಆದೇಶಿಸಬೇಕೆಂದು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಈರಣ್ಣ, ರಮೇಶ, ಅಜೀಜ್, ಯೇಸು, ಮಲ್ಲಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment