ಭೂಸ್ವಾಧೀನ: ರೈತ ವಿರೋಧಿ ಕ್ರಮ ಖಂಡಿಸಿ ಹೆದ್ದಾರಿ ಬಂದ್

ತುಮಕೂರು, ಜೂ. ೧೦- ಕೇಂದ್ರ ಸರ್ಕಾರ ರೂಪಿಸಿರುವ ಭೂಸ್ವಾಧೀನ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿ ರೈತ ವಿರೋಧಿ ಕಾಯ್ದೆಯನ್ನಾಗಿ ಪರಿವರ್ತಿಸಿರುವುದನ್ನು ವಿರೋಧಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಕ್ಯಾತ್ಸಂದ್ರದ ಟೋಲ್‌ ಬಳಿ ರಾಷ್ಟ್ರೀಯ ಬಂದ್‌ ಮಾಡಿ ಪ್ರತಿಭಟನೆ ನಡೆಸಲಾಯಿತು.

ನಗರದ ಹೊರವಲಯದ ಮಂಚಕಲ್‌ಕುಪ್ಪೆಯ ಜಾಸ್‌ಟೋಲ್‌ಗೇಟ್ ಬಳಿ ಜಮಾಯಿಸಿದ ರೈತ ಸಂಘ ಮತ್ತು ಹಸಿರುಸೇನೆಯ ನೂರಾರು ಮಂದಿ ಕಾರ್ಯಕರ್ತರುಗಳು ತುಮಕೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ತುಮಕೂರು ಕಡೆಗೆ ಬರುತ್ತಿದ್ದ ವಾಹನಗಳನ್ನು ತಡೆದು ಹೆದ್ದಾರಿಯಲ್ಲಿ ಅಡ್ಡಲಾಗಿ ಕುಳಿತು ಬಂದ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿ ಘೋಷಣೆಗಳನ್ನು ಕೂಗಿದರು.

2013ರಲ್ಲಿ ಕೇಂದ್ರ ಸರ್ಕಾರದಲ್ಲಿ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೊಳಿಸಿದ್ದ ಕಾಯ್ದೆಯನ್ನು ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ನೆರವಾಗುವಂತೆ ತಿದ್ದುಪಡಿ ಮಾಡಲಾಗಿದೆ. 2013ರ ಕಾಯ್ದೆಯ ಪ್ರಕಾರ ರೈತರ ಜಮೀನು ಪಡೆಯುವಾಗ ಅವರ ಅನುಮತಿ ಪಡೆದು ನಂತರ ಭೂಸ್ವಾದೀನ ಮಾಡಿಕೊಳ್ಳಬೇಕು. ಅವರಿಗೆ ನೀಡಿದ ಪರಿಹಾರದ ಹಣ ತೃಪ್ತಿದಾಯಕವಾಗಿರಬೇಕು. ಒಂದು ವೇಳೆ ಅದರಿಂದ ರೈತರು ಅತೃಪ್ತರಾದಲ್ಲಿ ಅವರು ನ್ಯಾಯಾಲಯದಲ್ಲಿ ದಾವೆ ಹೂಡಬಹುದಾಗಿತ್ತು. ಆದರೆ ಇದೀಗ ಈ ಕಾಯ್ದೆಯನ್ನು ರಾಜ್ಯ ಸರ್ಕಾರ ತಿದ್ದುಪಡಿ ಮಾಡಿದ್ದು, ಸಂಪುರ್ಣ ರೈತ ವಿರೋಧಿಯಾಗಿದೆ ಎಂದು ಪ್ರತಿಭಟನಾನಿರತ ರೈತರು ದೂರಿದರು.

ರೈತರ ಪರ ಇರಬೇಕಾದ ಸರ್ಕಾರಗಳು ಈಗ ರೈತರ ವಿರೋಧಿಯಾಗಿವೆ. ರೈತರಿಗೆ ಅನುಕೂಲವಾಗುವ ಯಾವೊಂದು ಯೋಜನೆಗಳನ್ನು ಜಾರಿ ಮಾಡಿಲ್ಲ. ರೈತರಿಗೆ ಬೇಕಾದ ನೀರಾವರಿ ಯೋಜನೆಯ ಕಾಮಗಾರಿಗಳನ್ನು ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ ರಸ್ತೆಯ ಅಭಿವೃದ್ಧಿ ಮಾಡಲು ರೈತರ ಜಮೀನುಗಳನ್ನು ಪಡೆದಿದ್ದು, ಅದಕ್ಕೆ ಸೂಕ್ತ ಪರಿಹಾರ ದೊರಕಿಸಿಲ್ಲ. ಕಳೆದ 2 ವರ್ಷಗಳಿಂದ ಕೊಟ್ಟ ನೋಟಿಸ್‍ನ್ನು ಜಲನಿಗಮ ಭೂಸ್ವಾಧಿನಾಧಿಕಾರಿಗಳು ಇತ್ಯರ್ಥ ಮಾಡುವಲ್ಲಿ ವಿಫಲರಾಗಿದ್ದಾರೆ. ಅವರು ರೈತರನ್ನು ಕರೆದು ಸಮಸ್ಯೆಗಳ ಬಗ್ಗೆ ಮಾತನಾಡುವ ಸೌಜನ್ಯವನ್ನೂ ತೋರಲಿಲ್ಲ. ಇದೀಗ ರಾಜ್ಯ ಸರ್ಕಾರದ ನೀತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಹಿಡಿಗಂಟು ನೀಡಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. .

ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರುಸೇನೆಯ ಕೆಂಕೆರೆ ಸತೀಶ್, ಧನಂಜಯ ಆರಾಧ್ಯ, ಆನಂದ ಪಟೇಲ್, ಕೋಡಿಹಳ್ಳಿ ಸಿದ್ದರಾಜು,  ಹಳೆಸಂಪಿಗೆ ಕೀರ್ತಿ, ಪ್ರಸನ್ನ, ಲಕ್ಕಣ್ಣ, ಬೆಟ್ಟೇಗೌಡ, ವೆಂಕಟೇಶ್ ಸೇರಿದಂತೆ ನೂರಾರು ಮಂದಿ ಪಾಲ್ಗೊಂಡಿದ್ದರು.

ಬಿಗಿ ಭದ್ರತೆ

ರೈತರು ರಾಜ್ಯ ಸರ್ಕಾರ ವಿರುದ್ಧ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ನಗರ ಡಿವೈಎಸ್ಪಿ ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಸುಮಾರು 250ಕ್ಕೂ ಹೆಚ್ಚು ಪೋಲಿಸರ ನಿಯೋಜನೆ ಮಾಡಲಾಗಿತ್ತು.

ಬಂದೋಬಸ್ತ್‌ನಲ್ಲಿ ಕ್ಯಾತ್ಸಂದ್ರ ವೃತ್ತ ನಿರೀಕ್ಷಕರಾದ ರಾಘವೇಂದ್ರ, ತಿಲಕ್ ಪಾರ್ಕ್ ವೃತ್ತ ನಿರೀಕ್ಷಕರಾದ, ರಾಧಾಕೃಷ್ಣ, ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕ ಮಧುಸೂದನ್, ನಗರ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್, ಸಬ್ಡಇನ್ಸ್‌ಪೆಕ್ಟರ್‌ಗಳಾದ ರಾಜು, ಲಕ್ಷ್ಮಯ್ಯ, ಶೇಷಾದ್ರಿ ಸೇರಿದಂತೆ ಕೆಎಸ್‌ಆರ್‌ಪಿ ತುಕಡಿಯ ಸಿಬ್ಬಂದಿ ಬಿಗಿ ಭದ್ರತಾ ಕಾರ್ಯದಲ್ಲಿ ತೊಡಗಿದ್ದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ‌ .ಕೋನಾ ವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿ ಡಾ. ಶೋಭಾರಾಣಿ ಅವರು ಜಾಸ್‌ಟೋಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Comment