ಭೂಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಲು ರೈತರ ಆಗ್ರಹ

ತುಮಕೂರು, ಜು.೧- ಸಣ್ಣ ಹಿಡುವಳಿ ರೈತರು ಬೀದಿಗೆ ಬೀಳುವ, ಬಂಡವಾಳಿಗರ ಕೃಷಿ ಬೆಳವಣಿಗೆಗೆ ಸಹಕಾರಿಯಾಗುವ ಇತ್ತೀಚಿನ ಭೂಸುಧಾರಣಾ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಒತ್ತಾಯಿಸಿದರು.

ಶಾಸಕ, ಸಂಸದರ ಕಚೇರಿಯ ಮುಂದೆ ನಡೆಸುವ ಪ್ರತಿಭಟನೆ ಭಾಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ರೈತರು ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಹಾರ ಭದ್ರತೆ ನಾಶವಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ನಿರ್ಮಾಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದು ಸಾಮಾನ್ಯ ಜನತೆಯ ಮೇಲೂ ಹೊಡೆತ ಬೀಳುತ್ತದೆ. ಕುಲಾಂತರಿ ಬೀಜಗಳ ಬಳಕೆ, ರಾಸಾಯನಿಕ ಕೃಷಿ ಮತ್ತು ಮಾನೋ ಕಲ್ಚರ್‍ಗೆ ಒತ್ತು ನೀಡಿ ಇಡೀ ಪರಿಸರವೇ ನಾಶವಾಗುವ ಪರಿಸ್ಥಿತಿ ಉದ್ಭವಿಸುತ್ತದೆ ಎಂದು ಹೇಳಿದರು.

ಎಐಕೆಎಸ್‍ಸಿಸಿ ಸಂಚಾಲಕ ಸಿ. ಯತಿರಾಜು ಮಾತನಾಡಿ, ಇಡೀ ರೈತ ಸಮುದಾಯವನ್ನು ಮತ್ತು ಸಂಘ ಸಂಸ್ಥೆಗಳನ್ನು ಕತ್ತಲಲ್ಲಿಟ್ಟು ಸುಗ್ರೀವಾಜ್ಞೆ ತರುತ್ತಿರುವುದರ ಹಿಂದೆ ಯಾವ ಉದ್ದೇಶವಿದೆ ಎಂದು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಇಂದು ಎಪಿಎಂಸಿ, ಭೂಸುಧಾರಣೆ, ವಿದ್ಯುತ್ ಮತ್ತು ಬೀಜ ಕಾಯ್ದೆ ಎಲ್ಲವೂ ಕಾರ್ಪೋರೇಟ್ ಕುಳಗಳು ನೀಡುವ ಮಾರ್ಗದರ್ಶನದಲ್ಲೇ ಬದಲಾವಣೆಯಾಗುತ್ತಿದ್ದು, ರೈತರ ಶೋಷಣೆಗೆ ಮುಕ್ತವಾದ ವಾತಾವರಣ ಸೃಷ್ಠಿಯಾಗುತ್ತಿದೆ. ಪ್ರಧಾನಿಗಳ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವುದು ಅರ್ಥ ಕಳೆದುಕೊಳ್ಳುವುದು ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಸಂಚಾಲಕ ಸಿ.ಅಜ್ಜಪ್ಪ ಮಾತನಾಡಿ, ರೈತರಿಗೆ ಭೂಮಿ ಮತ್ತು ಪರಿಹಾರ ನೀಡುವಾಗ ಕಾನೂನುಗಳ ಸರಮಾಲೆಯೇ ಎದ್ದು ಬರುತ್ತವೆ. ಆದರೆ ಇತ್ತೀಚಿನ ಕಾಯ್ದೆಗಳು ಯಾವುದೇ ಆತಂಕವಿಲ್ಲದೆ ಜಾರಿಗೆ ಬರುತ್ತಿರುವುದನ್ನು ನೋಡಿದರೆ ಸರ್ಕಾರದ ನೀತಿ ಯಾರ ಪರ ಎಂಬುದು ಗೊತ್ತಾಗುತ್ತದೆ. ಇಂತಹ ಕಾನೂನು ವಿರುದ್ಧ ಬಲಿಷ್ಠ ಹೋರಾಟಗಳು ಬೆಳೆಯಬೇಕು ಎಂದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್. ರಾಮಯ್ಯ ಮಾತನಾಡಿ, ರಾಜ್ಯದ 224 ಶಾಸಕರ ಅಭಿಪ್ರಾಯ ಮತ್ತು 6.5 ಕೋಟಿ ಜನರ ಮೇಲೆ ವಿಶ್ವಾಸವಿಲ್ಲದೆ ಸುಗ್ರೀವಾಜ್ಞೆ ತರುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನ ಮಾಡಿದಂತಾಗಿದೆ ಎಂದು ಹೇಳಿದರು.

ಜನಪರ ಚಿಂತಕ ಕೆ. ದೊರೈರಾಜು ಅವರು ಚಳವಳಿಯನ್ನು ಬೆಂಬಲಿಸಿ ಮಾತನಾಡಿ, ಕೊರೊನಾ ಸೋಂಕು ಹರಡುವುದನ್ನು ಸಮರ್ಥವಾಗಿ ತಡೆಯದೆ ರೈತ ಕಾರ್ಮಿಕರು ಆತಂಕದಲ್ಲಿರುವಾಗ ಇಂತಹ ಕಾಯ್ದೆಗಳ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು. ಪ್ರಸ್ತುತ ಸಂದರ್ಭದಲ್ಲಿ ಇರುವ ನಿರುದ್ಯೋಗ, ಅನಾರೋಗ್ಯ, ಆತಂಕವನ್ನು ದೂರ ಮಾಡಲು ಆದ್ಯತೆ ನೀಡಬೇಕು ಎಂದು ಹೇಳಿದರು.

ಎಐಕೆಎಸ್‍ಸಿಸಿ ಕಾರ್ಯದರ್ಶಿ ಬಿ. ಉಮೇಶ್ ಮಾತನಾಡಿ ಭೂಸುಧಾರಣೆಗಳು ರೈತರ ಬದುಕಿನಲ್ಲಿ ಬದಲಾವಣೆ ತರಲು ಬಂದದ್ದು ಇತಿಹಾಸವಾಗಿದೆ. ಇಂದು ಹಣವುಳ್ಳವರು ರೆಸಾರ್ಟ್, ರಫ್ತು ಆಧಾರಿತ ಕೃಷಿಗೆ ಒತ್ತು ಕೊಡಲು ಸರ್ಕಾರದ ಮೇಲೆ ಪ್ರಭಾವ ಬೀರಿ ಆತುರವಾಗಿ ಇಂತಹ ಕಾಯ್ದೆಗಳನ್ನು ಜಾರಿ ಮಾಡಿಸಿಕೊಳ್ಳುತ್ತಿವೆ. ಮಂಡ್ಯ ಜಿಲ್ಲೆಯ ಮಳವಳ್ಳಿಯ ಕಾಮೇಗೌಡರನ್ನು ಹೊಗಳುವ ಪ್ರಧಾನಿ ಇಡೀ ರೈತ ಸಮುದಾಯಕ್ಕೆ ಅವರ ಕೊಡುಗೆ ಏನೆಂಬುದನ್ನು ತಿಳಿಸಬೇಕಿತ್ತು. ಅದನ್ನು ಬಿಟ್ಟು ಭಾವನಾತ್ಮಕ ರಾಜಕಾರಣ ಮಾಡುವುದನ್ನು ಜನರು ಮನಗಾಣಬೇಕು ಎಂದರು.

ಸ್ಥಳಕ್ಕೆ ಆಗಮಿಸಿದ ಸಂಸದ ಜಿ.ಎಸ್.ಬಸವರಾಜು ಮನವಿ ಸ್ವೀಕರಿಸಿ ಮಾತನಾಡಿ ಕಾಯ್ದೆಯಲ್ಲಿ ಕೆಲ ಗೊಂದಲವನ್ನು ಸರಿಪಡಿಸುವ ಭರವಸೆ ನೀಡಿದರು. ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಮನವಿ ಸ್ವೀಕರಿಸಿ ವಿಧಾನಸಭೆಯಲ್ಲಿ ರೈತರ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರು ಮನವಿ ಸ್ವೀಕರಿಸುವಾಗ ರೈತಮುಖಂಡರೊಂದಿಗೆ ಮಾತಿನ ಚಕಮುಕಿ ನಡೆಸಿದರು.
ನಂತರ ಜಿಲ್ಲಾಧಿಕಾರಿಗಳ ಸಮಜಾಯಿಷಿಯಿಂದ ಉಸ್ತುವಾರಿ ಸಚಿವರು ರೈತರೊಂದಿಗೆ ಪುನಃ ಮಾತನಾಡಿ ಹಾಲಿ ಕಾಯ್ದೆಯಲ್ಲಿ ನೀರಾವರಿ ಆಧಾರಿತ ಭೂಮಿಯನ್ನು ಇದರಿಂದ ಕೈಬಿಡುವುದು ಮತ್ತು ಭೂಮಿ ಖರೀದಿಗೆ ಮನವಿ ಬರುತ್ತಿರುವುದನ್ನು ಮನಗಂಡು ಈ ಕಾಯ್ದೆಯನ್ನು ಜಾರಿಗೆ ತರುತ್ತಿದ್ದೇವೆ. ಆದರೆ ನೀವು ನೀಡಿರುವ ಮನವಿಯನ್ನು ಪರಿಗಣಿಸಲಾಗುವುದು ಎಂದರು.

ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ತಮ್ಮ ಪ್ರತಿನಿಧಿಯ ಮೂಲಕ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್. ಶಂಕರಪ್ಪ, ಮುಖಂಡರಾದ ವೆಂಕಟೇಗೌಡ, ಎಚ್.ಎಂ. ರವೀಶ್, ಲೋಕೇಶ್, ಚಿಕ್ಕವೆಂಕಟೇಗೌಡ, ಜಯರಾಮಯ್ಯ, ಪುಟ್ಟಸ್ವಾಮಿ, ಪ್ರಾಂತ ರೈತ ಸಂಘದ ದೊಡ್ಡನಂಜಯ್ಯ ರಂಗಧಾಮಯ್ಯ ಕರಿಬಸವಯ್ಯ, ಮಂಜುನಾಥ್, ಎಐಕೆಎಸ್‌ನ ಗಿರೀಶ್, ಬಸವರಾಜು, ದೊಡ್ಡತಿಮ್ಮಯ್ಯ, ಡಿಎಸ್‍ಎಸ್ ಕಾರ್ಯಕರ್ತರು ಭಾಗವಹಿಸಿದ್ದರು.

Share

Leave a Comment