ಭೂಮಿಯ ಅಡಿಯಿಂದ ಹೊರಬಂದ ಭಕ್ತ

ಕಲಬುರಗಿ:ಕಳೆದ ಮೂರು ದಿನಗಳಿಂದನಾಲ್ಕು ಅಡಿ ಆಳದ ಭೂಮಿಯಲ್ಲಿ ಅನುಷ್ಠಾನಕ್ಕೆ ಕುಳಿತಿದ್ದ ಭಕ್ತ ಇಂದು ಬೆಳಗ್ಗೆ ಭೂಮಿಯಿಂದ ಮೇಲೆ ಎದ್ದು ಬಂದಿದ್ದಾನೆ. ಭಕ್ತನ ಅನುಷ್ಠಾನ ಸಮಾರೋಪಕ್ಕೆ ನೂರಾರು ಜನರು ಸಾಕ್ಷಿಯಾದ್ರು. ಅಂದ್ಹಾಗೆ, ಮೂರು ದಿನ ಅನುಷ್ಠಾನ ಕೂಡದಿದ್ದರೆ ನಿನ್ನನ್ನು ಲಿಂಗೈಕ್ಯ ಮಾಡ್ತಿನಿ ಅಂತ ಆ ಭಕ್ತನಿಗೆ ದೇವಿ ಎಚ್ಚರಿಕೆ ನೀಡಿದ್ದಳಂತೆ.
ಹೀಗೆ ಮಣ್ಣು ಅಗೆದು ನಾಲ್ಕು ಫೂಟ್ ಆಳದ ಗುಂಡಿಯಲ್ಲಿ ಕಳೆದ ಮೂರು ದಿನಗಳಿಂದ ಅನುಷ್ಠಾನಕ್ಕೆ ಕುಳಿತಿದ್ದ ಭಕ್ತ ಇಂದು ಬೆಳಗ್ಗೆ ಅನುಷ್ಠಾನ ಪೂರ್ಣಗೊಳಿಸಿದ್ದಾನೆ‌.
ಕಲಬುರಗಿ ತಾಲೂಕಿನ ಕೊಟನೂರ- ಉದನೂರ- ನಂದಿಕೂರ್ ಗ್ರಾಮಗಳ ಸೀಮೆಯ ಕರಿಬಸಮ್ಮ‌ ದೇವಿ ದೇವಸ್ಥಾನದ ಮುಂಭಾಗದಲ್ಲಿ ವಿಜಯಕುಮಾರ್ ಪವಾರ್ ಎಂಬ ಭಕ್ತನೆ ಅನುಷ್ಠಾನಕ್ಕೆ ಕುಳಿತಿದ್ದ. ದೇವಿ ಬಂದು ಕನಸಿನಲ್ಲಿ ಹೇಳಿದ್ದಾರೆ ಅನ್ನೋ ಕಾರಣಕ್ಕೆ ಮೊನ್ನೆ ಸಂಜೆ 5ಗಂಟೆಗೆ ನಾಲ್ಕು ಅಡಿ ತಗ್ಗು ತೆಗೆದು ಅದರಲ್ಲಿ ಭಕ್ತ ವಿಜಯಕುಮಾರ್ ಕುಳಿತಿದ್ದ. ವಿಭೂತಿ, ಕುಂಕುಮ, ಭಂಡಾರ ಹಾಕಿ ಕುತ್ತಿಗೆವರೆಗೂ ಮಣ್ಣು ಮುಚ್ಚಿ ಆ ನಂತರ ಅರ್ಧ ಭೂ ಭಾಗದಿಂದ ಹಿಡಿದು ಮೇಲ್ಭಾಗದ ನಾಲ್ಕು ಅಡಿವರೆಗೂ ಬೇವಿನ ತಪ್ಪಲಿನಿಂದ ಮುಚ್ಚಲಾಗಿತ್ತು. ಇಂದು ಬೆಳಗ್ಗೆ 7.30ಕ್ಕೆ ಅನುಷ್ಠಾನ ಮುಗಿಯಿತು. ಸುತ್ತಲಿನ ಗ್ರಾಮಗಳ ಭಕ್ತರು ಅದ್ಧೂರಿಯಾಗಿಯೇ ಅನುಷ್ಠಾನ ಸಮಾರೋಪ ಕಾರ್ಯಕ್ರಮ ನಡೆಸಿದ್ರು. ದೇವಿಯ ಅಣತಿಯಂತೆ ಅನುಷ್ಠಾನ ಮಾಡಿದ್ದಾಗಿ ವಿಜಯಕುಮಾರ ಪವಾರ್ ಹೇಳಿದ್ರು‌.

ಭೂಮಿಯ ಆಳದಿಂದ ಹೊರ ಬಂದ ವಿಜಯಕುಮಾರ್ ಕಲಬುರಗಿಯ ನಂದಿಕೂರ್ ಗ್ರಾಮದ ನಿವಾಸಿಯಾಗಿದ್ದು, ಕಟ್ಟಡಗಳ ಕಾಂಟ್ರಾಕ್ಟರ್ ಆಗಿ ಕೆಲಸ‌ ಮಾಡುತ್ತಿದ್ದಾರೆ. ಮದುವೆಯಾಗಿ ಎರಡು ಮಕ್ಕಳು ಕೂಡ ಇವರಿಗಿದ್ದಾರೆ. ದೇವಿ ಕರಿಬಸಮ್ಮ ಆಜ್ಞೆ ಆಗಿದೆಯಂತೆ. ಹೀಗಾಗಿ ಅದನ್ನ ಪಾಲಿಸಬೇಕು ಇಲ್ಲವಾದರೆ ಮೂರು ದಿನಗಳಲ್ಲಿ ಲಿಂಗೈಕ್ಯ ಆಗುತ್ತೇನೆ ಎಂದು ಹೇಳಿದ್ದರಿಂದ ಈ ರೀತಿ‌ ಕೂಡಿಸಲು ಮನೆಯವರು ಒಪ್ಪಿದ್ದಾರೆ. ಆದ್ರೇ ಇದಕ್ಕೂ ಮುನ್ನ ಮನೆಯವರ ವಿರೋಧ ಇದ್ರೂ ವಿಜಯಕುಮಾರ್ ದೇವಿ ಆಜ್ಞೆ ಪಾಲಿಸಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಮನೆಯವರು ಅನುಷ್ಠಾನಕ್ಕೆ ಒಪ್ಪಿಗೆ ನೀಡಿದ್ದರು. ಮೊನ್ನೆ ಸಂಜೆಯಿಂದ ಎಲ್ಲರೂ ಅನುಷ್ಠಾನಕ್ಕೆ ಕುಳಿತಿರುವ ವಿಜಯಕುಮಾರ್ ಅವರ ಬಳಿಯೇ ಇದ್ದರು.
ಕರಿಬಸಮ್ಮ ದೇವಿ ಬೆಳ್ಳಿ ಮೂರ್ತಿ ಮಾಡಿಸಬೇಕು ಅಂತ ಕನಸಲ್ಲಿ ಬಂದು ವಿಜಯಕುಮಾರ್ ಗೆ ಹೇಳಿದ್ರಂತೆ. ಆ ಬಳಿಕ ಅನುಷ್ಠಾನ ಮಾಡುವಂತೆಯೂ ಉಪದೇಶ ನೀಡಿದ್ದಳಂತೆ. ಭೂಮಿಯಿಂದ ಹೊರಬಂದ ವಿಜಯಕುಮಾರ್ ಮೇಲೆ ಕುಂಕುಮ, ಅರಿಶಿನ, ವಿಭೂತಿ ಎರಚಲಾಯಿತು. ಮೈಮೇಲೆ ದೇವತೆ ಬಂದವರಂತೆ ಅನುಷ್ಠಾನಕ್ಕೆ ಕುಳಿತಿದ್ದ ವಿಜಯಕುಮಾರ್ ಹೆಜ್ಜೆ ಹಾಕಿದ್ರು. ಅಷ್ಟೇ ಅಲ್ಲ ಪ್ರತಿವರ್ಷ ಜಾತ್ರೆಯನ್ನು ಅದ್ಧೂರಿಯಾಗಿ ಮಾಡುವಂತೆ ಹೇಳಿಕೆ ಕೂಡ ನಡೆಯಿತು. ಕೈಯಲ್ಲಿ ಹಿಡಿದಿದ್ದ ಟೆಂಗು ಲಂಬವಾಗಿ ನಿಂತಿದ್ದಕ್ಕೆ ಭಕ್ತರು ಹರ್ಷ ವ್ಯಕ್ತಪಡಿಸಿದ್ರು‌

Leave a Comment