ಭೂಮಿಗೆ ಹತ್ತಿರದಲ್ಲೇ ಹಾದು ಹೋದ ಕ್ಷುದ್ರಗ್ರಹ

ನಿನ್ನೆ (ಫೆ. 10) ಭೂಮಿಗೆ ತೀರ ಹತ್ತಿರದಲ್ಲಿ ಕ್ಷುದ್ರಗ್ರಹವೊಂದು (ಆಸ್ಟಿರಾಯಿಡ್) ಹಾದು ಹೋಗಿದೆ. 2018 ಸಿಬಿ ಹೆಸರಿನ ಈ ಕ್ಷುದ್ರಗ್ರಹ ಭೂಮಿಯಿಂದ 39,000 ಮೈಲುಗಳ ಹತ್ತಿರದಿಂದ ನಿರುಪದ್ರವಿಯಾಗಿ ಹಾದು ಹೋಗಿದೆ ಎಂದು ನಾಸಾ ಹೇಳಿದೆ. 15 ರಿಂದ 40 ಮೀಟರ್‌ನಷ್ಟು ಗಾತ್ರದ ಈ ಕ್ಷುದ್ರಗ್ರಹ ಫೆ. 10 ರಂದು ಬೆಳಗಿನ ಜಾವ ಭೂಮಿಗೆ ಅತೀ ಸಮೀಪ ಬರಲಿದೆ ಎಂದು ನಾಸಾ ಹೇಳಿತ್ತು.

  • ಭೂಮಿಗೆ 39,000 ಮೈಲುಗಳಷ್ಟು ಹತ್ತಿರದಲ್ಲಿ ನಿನ್ನೆ ಕ್ಷುದ್ರಗ್ರಹವೊಂದು ಯಾವುದೇ ಪ್ರಮಾದ ಮಾಡದೆ ಹಾದು ಹೋಗಿದೆ. 2018 ಸಿಬಿ ಹೆಸರಿನ ಈ ಕ್ಷುದ್ರಗ್ರಹ 15 ರಿಂದ 40 ಕಿ.ಮೀ.ನಷ್ಟು ಗಾತ್ರದ್ದಾಗಿದ್ದು, ನಿನ್ನೆ ಬೆಳಗಿನ ಜಾವ ಭೂಮಿಯನ್ನು ಹಾದು ಹೋಗಿದೆ ಎಂದು ನಾಸಾ ಹೇಳಿದೆ.
  • ಸಾಮಾನ್ಯವಾಗಿ ಇಷ್ಟು ಗಾತ್ರದ ಕ್ಷುದ್ರಗ್ರಹ ಭೂಮಿಗೆ ಹತ್ತಿರ ಬರುವುದಿಲ್ಲ ಎಂದು ಹತ್ತಿರದ ಭೂಕಕ್ಷೆಯಲ್ಲಿ ವಸ್ತುಗಳ ವಿಷಯದಲ್ಲಿಯ ನಾಸಾದ ಅಧ್ಯಯನ ಕೇಂದ್ರದ ವಿಜ್ಞಾನಿ ಪಾಲ್ ಛೋಡಸ್ ಹೇಳಿದ್ದಾರೆ.

2018 ಸಿಬಿ ಹೆಸರಿನ ಕ್ಷುದ್ರಗ್ರಹ ಭೂಮಿಗೆ ಕೇವಲ 39,000 ಮೈಲುಗಳ ಹತ್ತಿರದವರೆಗೆ ಬರಲಿದೆ ಎಂಬ ನಾಸಾ ವರದಿ ಭಾರಿ ಆತಂಕ ಮೂಡಿಸಿತ್ತಾದರೂ ಯಾವುದೇ ಪ್ರಮಾದಕ್ಕೆ ಕಾರಣವಾಗದಂತೆ ಆ ಕ್ಷುದ್ರಗ್ರಹ ಭೂಮಿಯನ್ನು ಹಾದು ಹೋಗಿದೆ.

ಕೆಲವು ವರ್ಷಗಳ ಹಿಂದೆ ರಷ್ಯಾದಲ್ಲಿ ಕ್ಷುದ್ರಗ್ರಹ ಅಪ್ಪಳಿಸಿದ್ದ ವರದಿಯಾಗಿತ್ತು. ಇದು ಭೂಮಿಗೆ ಅಪ್ಪಳಿಸಿದ ರಭಸಕ್ಕೆ 100 ಕಿ.ಮೀ ವ್ಯಾಪ್ತಿಯಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿತ್ತು.

ಕ್ಷುದ್ರಗ್ರಹಗಳು ವರ್ಷದಲ್ಲಿ ಒಂದೆರೆಡು ಭಾರಿ ಭೂಮಿಯನ್ನು ಹಾದು ಹೋಗುತ್ತವೆ. ಕೆಲವೊಮ್ಮೆ ತೀರಾ ಹತ್ತಿರದಲ್ಲಿ ಕೆಲವೊಮ್ಮೆ ಭಾರಿ ದೂರದಲ್ಲಿ ಹಾದು ಹೋಗುತ್ತವೆ. ಆದರೆ, ನಿನ್ನೆಯಂತೆ ಭೂಮಿಗೆ ತೀರಾ ಹತ್ತಿರದಲ್ಲೇ ಹಾದು ಹೋಗುವುದು ಅಪರೂಪ. ಕೆಲವು ಕ್ಷುದ್ರಗ್ರಹಗಳು ಭೂಮಿಯಿಂದ ಲಕ್ಷಾಂತರ ಕಿ.ಮೀ ದೂರದಲ್ಲೇ ಹಾದು ಹೋಗುತ್ತವೆ.

ಸೂರ್ಯನ ಸುತ್ತ ಸುತ್ತುವ ಈ ಆಕಾಶಕಾಯಗಳು 4.6 ಶತಕೋಟಿ ವರ್ಷಗಳಷ್ಟು ಹಿಂದೆ ಸೌರಮಂಡಲ ರಚನೆಯಾದ ಸಂದರ್ಭದಲ್ಲಿ ಉಳಿದು ಹೋದ ಭಾಗಗಳು ಎಂಬುದು ಇವುಗಳ ರಚನೆ ಕುರಿತಂತೆ ಇರುವ ಸಿದ್ಧಾಂತಗಳಲ್ಲಿ ಪ್ರಮುಖವಾದದ್ದು.

ಗುರು ಮತ್ತು ಮಂಗಳ ಗ್ರಹಗಳ ನಡುವೆ ವಿಶಾಲ ಪ್ರದೇಶದಲ್ಲಿ ವ್ಯಾಪಿಸಿಕೊಂಡಿರುವ ಕ್ಷುದ್ರಗ್ರಹಗಳ ಸಮೂಹಕ್ಕೆ ಆಸ್ಟಿರಾಯಿಡ್ ಬೆಲ್ಟ್ ಎಂದು ಕರೆಯಲಾಗುತ್ತದೆ. ಬಹುಪಾಲು ಕ್ಷುದ್ರಗ್ರಹಗಳು ಇಲ್ಲಿಯೇ ಕಾಣಿಸುವುದು.

ಸೌರಮಂಡಲದಲ್ಲಿ 50 ದಶಲಕ್ಷಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕ್ಷುದ್ರಗ್ರಹಗಳಿವೆ. ಇವುಗಳಲ್ಲಿ 1 ಕಿ.ಮೀ ವ್ಯಾಪ್ತಿಯಷ್ಟು ಚಿಕ್ಕವು. ಇನ್ನೂ ಕೆಲವು 100 ಕಿ.ಮೀ ವ್ಯಾಪ್ತಿಯನ್ನು ಹೊಂದಿರುವಷ್ಟು ದೊಡ್ಡದಾಗಿರುತ್ತವೆ. ಇದು ಶಿಲೆ, ಲೋಹ, ಮಂಜಿನಿಂದ ಕೂಡಿರುತ್ತವೆ.

ಮೊಟ್ಟ ಮೊದಲಿಗೆ ಪತ್ತೆಯಾದ ಕ್ಷುದ್ರಗ್ರಹ ಸೆರೆಸ್. ಇದನ್ನು 1801ರಲ್ಲಿ ಪತ್ತೆ ಮಾಡಲಾಗಿದೆ. ಇದರ ಗಾತ್ರ 940 ಕಿ.ಮೀ ವ್ಯಾಪ್ತಿಯಷ್ಟು ದೊಡ್ಡದು. ಇದುವರೆವಿಗೂ ಪತ್ತೆಯಾಗಿರುವ ಕ್ಷುದ್ರಗ್ರಹಗಳಲ್ಲಿ ಇದೇ ದೊಡ್ಡದು. ಭೂಮಿಯ ದ್ರವ್ಯರಾಶಿಯ 5ನೇ ಒಂದು ಭಾಗದ ದ್ರವ್ಯರಾಶಿಯನ್ನು ಇದು ಹೊಂದಿದೆ.

ಕ್ಷುದ್ರಗ್ರಹಗಳು ವಿವಿಧ ಆಕಾಶಗಳನ್ನು ಮತ್ತು ಗಾತ್ರಗಳನ್ನು ಹೊಂದಿರುತ್ತವೆ. ಕೆಲವು ಗೋಳಾಕಾರದ್ದಾದರೆ, ಇನ್ನು ಕೆಲವು ವಕ್ರ ವಕ್ರವಾಗಿ ಇರುತ್ತವೆ. ಇವುಗಳ ಆಕಾರ, ಗಾತ್ರ ಏನೇ ಇರಲಿ, ಆದರೆ ಇವು ಭೂಮಿಗೆ ಎಷ್ಟು ಸಮೀಪದಲ್ಲಿ ಬಂದು ಹಾದು ಹೋಗುತ್ತದೆ ಎನ್ನುವುದಕ್ಕೆ ವಿಜ್ಞಾನಿಗಳು ಹೆಚ್ಚಿನ ನಿಗಾ ನೀಡುತ್ತಾರೆ.

ಕೆಲವು ಕ್ಷುದ್ರಗ್ರಹಗಳು ಭೂಮಿಯಿಂದ ಬಹುದೂರದಲ್ಲಿ ಹಾದು ಹೋದರೆ, ಇನ್ನು ಕೆಲವು ಭೂಮಿಗೆ ಅತಿ ಸಮೀಪದಲ್ಲೇ ಹಾದು ಹೋಗುತ್ತವೆ. ಭೂಮಿಗೆ ಅತಿ ಸಮೀಪದಲ್ಲೇ ಕ್ಷುದ್ರಗ್ರಹಗಳು ಹಾದು ಹೋಗುತ್ತವೆ ಎನ್ನುವಾಗಲೆಲ್ಲ ಭಾರಿ ಆತಂಕ, ಕುತೂಹಲ ಮೂಡುತ್ತದೆ. ಇವು ಎಲ್ಲಿ ಭೂಮಿಗೆ ಅಪ್ಪಳಿಸುತ್ತವೊ ಎಂಬುದೇ ಆ ಆತಂಕ. ಒಂದು ವೇಳೆ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಅದು ಭಾರಿ ವಿನಾಶ ಪರಿಣಾಮ ಸೃಷ್ಟಿಸುತ್ತದೆ.

ಉತ್ತನೂರು ವೆಂಕಟೇಶ್

Leave a Comment