ಭೂಪೂರು ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಿ

ಪಾವಗಡ, ಜ. ೧೨- ಪಾವಗಡದಿಂದ ಭೂಪೂರು ಗ್ರಾಮವು 16 ಕಿ.ಮೀ. ದೂರವಿದ್ದು, ಭೂಪೂರು ಗ್ರಾಮದ ಕಡೆಯಿಂದ ಪ್ರತಿ ದಿನವೂ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಪಾವಗಡಕ್ಕೆ ಬರುತ್ತಾರೆ. ಆದರೆ ಇಲ್ಲಿಂದ ಬರುವ ವಿದ್ಯಾರ್ಥಿಗಳು ಸಾರಿಗೆ ಸಮಸ್ಯೆಯಿಂದ ತೊಂದರೆ ಅನುಭವಿಸುವಂತಾಗಿದೆ.

ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಬಸ್‌ಪಾಸ್ ಮಾಡಿಸಿದ್ದು, ಸರ್ಕಾರಿ ಬಸ್‍ಗಳಿಗಾಗಿಯೇ ಕಾಯಬೇಕಾಗುತ್ತದೆ. ಬೆಳಿಗ್ಗೆ 7.30 ಗಂಟೆಗೆ ಒಂದೇ ಒಂದು ಸರ್ಕಾರಿ ಬಸ್ ಬರುತ್ತದೆ. ಅನಂತರ 9.30 ಗಂಟೆಗೆ ಖಾಸಗಿ ಬಸ್ಸೊಂದು ಬರುವ ಕಾರಣ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಬೆಳಗಿನ 7.30 ಗಂಟೆಗೆ ಬರುವ ಬಸ್‍ನಲ್ಲಿಯೇ ಹೋಗಬೇಕಾಗುತ್ತದೆ. ಆದರೆ ಈ ಬಸ್ಸಿನಲ್ಲಿ ಎಲ್ಲ ವಿದ್ಯಾರ್ಥಿಗಳು ಹೋಗಲು ಸಾಧ್ಯವಾಗದ ಕಾರಣ ಕೆಲವರು ಕಾಲೇಜಿಗೆ ತಡವಾಗಿ ಹೋಗುವ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಇಲ್ಲವೇ ಬಸ್ಸಿನಲ್ಲಿಯೇ ನೂಕು-ನುಗ್ಗಲಿನಲ್ಲಿ ಹಾಗೂ ಬಾಗಿಲಿನಲ್ಲಿ ನೇತಾಡಿಕೊಂಡು ಹೋಗುವ ಪರಿಸ್ಥಿತಿ ಇಲ್ಲಿನ ವಿದ್ಯಾರ್ಥಿಗಳಿಗಿರುವ ಕಾರಣ ಜೀವದ ಮೇಲೆ ಆಸೆ ಬಿಟ್ಟು ಭಯದಿಂದ ಹೋಗಬೇಕಾದ ಅನಿವಾರ್ಯತೆ ಇದೆ.

ಸಾಮಾನ್ಯವಾಗಿ ಶಾಲಾ-ಕಾಲೇಜುಗಳು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುವುದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ತಡವಾಗಿ ಹೋಗಬೇಕಾಗಿದೆ. ತದ ನಂತರ ಖಾಸಗಿ ಬಸ್ಸುಗಳು ಬರುವುದರಿಂದ ಪಾಸ್ ಮಾಡಿಸಿದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಬರಬೇಕಾದರೆ ಪಾಸ್‍ಗಳ ಬದಲು 10 ರೂ. ನೀಡಿ ಶಾಲೆ-ಕಾಲೇಜುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಇದರಿಂದ ಇಲ್ಲಿಂದ ಬರುವ ವಿದ್ಯಾರ್ಥಿಗಳು ದಿನವೂ ಶಾಲಾ-ಕಾಲೇಜುಗಳಿಗೆ ಬಂದರೂ ಸಹ ಸರಿಯಾಗಿ ಪಾಠ ಕೇಳಲು ಆಗದೇ, ಹಾಗೇ ಹಾಜರಾತಿಯೂ ಇಲ್ಲದೆ ಸಮಸ್ಯೆ ಅನುಭವಿಸುತ್ತಿದ್ದಾರೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಪ್ರತಿ ದಿನ ಬೆಳಿಗ್ಗೆ ಮತ್ತೊಂದು ಬಸ್ ವ್ಯವಸ್ಥೆ ಕಲ್ಪಿಸಿ ಬಡ ವಿದ್ಯಾರ್ಥಿಗಳ ಕಷ್ಟವನ್ನು ನಿವಾರಿಸಬೇಕಾಗಿದೆ.

Leave a Comment