ಜೆಸ್ಕಾಂ ವಿದ್ಯುತ್ ದರ ಏರಿಕೆ ಬೇಡ:ಗ್ರಾಹಕರ ಮನವಿ

ಕಲಬುರಗಿ ಫೆ 15: ಗುಲಬರ್ಗ ವಿದ್ಯುತ್ ಸರಬರಾಜು ಕಂಪನಿ ನಿಯಮಿತ  (ಜೆಸ್ಕಾಂ ) ಪ್ರಸ್ತಾಪಿತ ವಿದ್ಯುತ್ ದರ ಪರಿಷ್ಕರಣೆ ಬೇಡ ಎಂದು  ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ( ಕೆಇಅರ್‍ಸಿ)ಕ್ಕೆ ಗ್ರಾಹಕರು ಒಕ್ಕೊರಲಿನ  ಮನವಿ ಮಾಡಿದರು.

ಇಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದಿಂದ ಆಯೋಜಿಸಿದ ಜೆಸ್ಕಾಂ ವಿದ್ಯುತ್ ದರ ಪರಿಷ್ಕರಣೆ ಮತ್ತಿತರ ವಿಷಯ ಕುರಿತಾದ ಸಾರ್ವಜನಿಕ ಅಹವಾಲುಗಳ ವಿಚಾರಣೆ ಸಭೆಯಲ್ಲಿ ವಿದ್ಯುತ್ ದರ ಪರಿಷ್ಕರಣೆಗೆ ವಿರೋಧ ವ್ಯಕ್ತವಾಯಿತು.

ಆಯೋಗದ ಅಧ್ಯಕ್ಷರಾದ ಶಂಭುದಯಾಳ್ ಮೀನಾ ಮತ್ತು ಸದಸ್ಯರಾದ ಎಚ್.ಎಂ ಮಂಜುನಾಥ, ಎಂ.ಡಿ ರವಿ ಅವರು ವೇದಿಕೆ ಮೇಲಿದ್ದರು. ಜೆಸ್ಕಾಂ ಎಂಡಿ ಡಾ. ಆರ್ ರಾಗಪ್ರಿಯಾ ಅವರು ಜೆಸ್ಕಾಂ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು.

ಹೈಕ ಪರಿಸರ ಜಾಗೃತಿ ಮತ್ತು ಸಂರಕ್ಷಣೆ ಸಂಘಟನೆ ಅಧ್ಯಕ್ಷ ಮತ್ತು ಕೆಇಅರ್‍ಸಿ ಸಲಹಾ ಸಮಿತಿ ಸದಸ್ಯ ದೀಪಕ್ ಗಾಲಾ ಅವರು ಗ್ರಾಮೀಣ ಭಾಗದಲ್ಲಿ ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು .ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಬೇಕು. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ವಿದ್ಯುತ್ ವಿತರಣೆ ಸಂದರ್ಭದಲ್ಲಿ ಜನಪ್ರಿಯ ಯೋಜನೆ ಪ್ರಕಟಿಸುವ ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ಬಡವರಿಗೆ ವಿದ್ಯುತ್ ಪೂರೈಸಿದ  ಜೆಸ್ಕಾಂಗೆ ನೀಡಬೇಕಿದ್ದ  1065 ಕೋಟಿ ರೂ  ಸಬ್ಸಿಡಿಯನ್ನು ಬಾಕಿ ಉಳಿಸಿಕೊಂಡಿದ್ದು ಅದನ್ನು ಪಾವತಿಸಲು ಸರ್ಕಾರಕ್ಕೆ ಸೂಚಿಸುವಂತೆ ಆಯೋಗವನ್ನು ಕೋರಿದರು.

ಆರ್ಟಿಐ ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ಅವರು, ಜೆಸ್ಕಾಂ ಅನಾವಶ್ಯಕ ಖರ್ಚುಗಳ ಮೂಲಕ ಹಣ ಪೋಲು ಮಾಡುತ್ತಿದೆ ಎಂದು ದೂರಿದರು. ಗ್ರಾಹಕರ ಕುಂದುಕೊರತೆ ಸಭೆಗಳನ್ನು ಕಾಟಾಚಾರಕ್ಕೆ ನಡೆಸುತ್ತಿದ್ದು ,ಸಭೆ ನಡೆಸದ ಘಟಕಗಳಿಗೆ 1 ಲಕ್ಷ ರೂ ದಂಡ ವಿಧಿಸಬೇಕೆನ್ನುವ ನಿಯಮ ಎಷ್ಟರ ಮಟ್ಟಿಗೆ ಜಾರಿ ತಂದಿದೆ ಎಂಬುದನ್ನು ಪರಿಶೀಲಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಚಂದ್ರಶೇಖರ ಗೌಡ ,ಬಸವರಾಜ ಸಜ್ಜನ, ಚನ್ನಬಸಯ್ಯ ನಂದಿಕೋಲ,ಸುಭಾಶ್ಚಂದ್ರ ಸೇರಿದಂತೆ ಅನೇಕರು ತಮ್ಮ ಅಹವಾಲುಗಳನ್ನು  ಸಲ್ಲಿಸಿದರು. ಸಭೆಯಲ್ಲಿ ಅನೇಕ ಸಂಘಸಂಸ್ಥೆಗಳ ಪ್ರಮುಖರು, ಉದ್ಯಮಿಗಳು ರೈತರು ಭಾಗವಹಿಸಿದರು. ಕೆಇಅರ್‍ಸಿ ಮತ್ತು ಜೆಸ್ಕಾಂ ಅಧಿಕಾರಿಗಳು ಉಪಸ್ಥಿತರಿದ್ದರು..

Leave a Comment