ಭೀಕರ ಅಪಘಾತ 21 ಮಂದಿ ಸಾವು: ತ್ರಿಶೂರ್ ಸಮೀಪ ಕೇರಳ ಸಾರಿಗೆ ಬಸ್ ಲಾರಿ ಮಧ್ಯೆ ಡಿಕ್ಕಿ 28 ಮಂದಿಗೆ ಗಾಯ

ಬೆಂಗಳೂರು/ತಿರಪೂರು, ಫೆ. ೨೦- ಲಾರಿ ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಟ 21 ಮಂದಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನಿಂದ ಕೇರಳದ ತಿರುವನಂತಪುರಕ್ಕೆ ತೆರಳುತ್ತಿದ್ದ ಬಸ್ ಹಾಗೂ ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ. ಈ ದುರ್ಘಟನೆ ತಮಿಳುನಾಡಿನ ತಿರುಪುರ ಸಮೀಪದ ಅವಿನಾಶಿ ಬಳಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ, ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

  • ಟ್ರಕ್ – ಕೇರಳ ಬಸ್ ನಡುವೆ ಭೀಕರ ಅಪಘಾತ.
  • 21 ಮಂದಿ ಧಾರುಣ ಸಾವು.
  • 28 ಮಂದಿಗೆ ಗಾಯ.
  • ಹಲವರ ಸ್ಥಿತಿ ಗಂಭೀರ.
  • ಸಾವಿನ ಸಂಖ್ಯೆ ಹೆಚ್ಚಳವಾಗುವ ಭೀತಿ.
  • ಕೊಯಮತ್ತೂರಿನ ಸಮೀಪ ಅವಘಡ.
  • ಗಾಢನಿದ್ರೆಯಲ್ಲಿದ್ದ ವೇಳೆ ಸಂಭವಿಸಿದ ಅಪಘಾತ.

ನಿನ್ನೆ ರಾತ್ರಿ 8.30ರ ಸಮಯದಲ್ಲಿ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟಿದ್ದ ಕೇರಳದ ಸಾರಿಗೆ ಸಂಸ್ಥೆಯ ಬಸ್ ಇಂದು ಮುಂಜಾನೆ ವೇಗವಾಗಿ ಚಲಿಸುವಾಗ ರಸ್ತೆ ವಿಭಜಕಕ್ಕೆ ಅಪ್ಪಳಿಸಿ, ಪಕ್ಕದ ರಸ್ತೆಗೆ ನುಗ್ಗಿದೆ. ಈ ವೇಳೆ ಕೊಯಮತ್ತೂರಿನಿಂದ ಹೊಸೂರು ಕಡೆಗೆ ಬರುತ್ತಿದ್ದ ಕಂಟೈನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.

ಸ್ಥಳದಲ್ಲೇ 19 ಮಂದಿ ಸಾವನ್ನಪ್ಪಿದ್ದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇನ್ನಿಬ್ಬರು ಅಸುನೀಗಿದ್ದಾರೆ ಎಂದು ಕೇರಳ ಸಾರಿಗೆ ಸಚಿವ ಸಸೀಂದ್ರನ್ ತಿಳಿಸಿದ್ದಾರೆ.

ಈ ಬಸ್‌ನಲ್ಲಿ 48 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಇವರೆಲ್ಲರೂ ತೀರ್ಥಸ್ಥಳಕ್ಕೆ ತೆರಳುತ್ತಿದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ ಬಸ್ ಚಾಲಕನ ಅಜಾಗರೂಕತೆಯೇ ಈ ಭೀಕರ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ.

ನಿದ್ರೆ ಮಂಪರಿನಲ್ಲಿದ್ದ ಬಸ್ ಚಾಲಕ ಈ ಅಪಘಾತ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಕೇರಳ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ, ಬಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರ ಚೀರಾಟ ಮುಗಿಲುಮುಟ್ಟಿತ್ತು. ತಕ್ಷಣವೇ ಸುತ್ತಮುತ್ತಲಿನ ಸಾರ್ವಜನಿಕರು ಸ್ಥಳಕ್ಕೆ ಆಗಮಿಸಿ, ಬಸ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಪ್ರಯಾಣಿಕರನ್ನು ಹೊರಗೆ ತೆಗೆದು ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ನೆರವಾದರು.

ಸುದ್ದಿ ತಿಳಿದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟವರಲ್ಲಿ 6 ಮಂದಿ ಮಹಿಳೆಯರು, 15 ಮಂದಿ ಪುರುಷರು ಇದ್ದಾರೆ ಎಂದು ಹೇಳಲಾಗಿದೆ. ಮೃತದೇಹಗಳನ್ನು ಅವನಾಶಿ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಗಾಯಾಳುಗಳು ಪಾಲಾಕ್ಕಾಡ್, ಎರ್ನಾಕುಲಂ, ತ್ರಿಶೂರ್ ನಿವಾಸಿಗಳೆಂದು ಹೇಳಲಾಗಿದೆ.

ಪ್ರಯಾಣಿಕ ಅಜಯ್ ಸಂತೋಷ್ ಪ್ರತಿಕ್ರಿಯಿಸಿ, ಬಸ್‌ನ ಮುಂಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಗಾಯಗಳಾಗಿವೆ. ಪೊಲೀಸರು ಸ್ಥಳಕ್ಕೆ ಆಗಮಿಸಲು ವಿಳಂಬವಾಗಿದ್ದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದಂತೆ, ತನಿಖೆಗೆ ಆದೇಶಿಸಲಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಭೀಕರ ಅಪಘಾತಕ್ಕೆ ದಿಗ್ಭ್ರಮೆ ವ್ಯಕ್ತಪಡಿಸಿ, ಮೃತಪಟ್ಟವರಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Comment