ಭೀಕರ ಅಪಘಾತ, 17 ಬಲಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಪಲ್ಟಿ ಹೊಡೆದ ಬಸ್

ಲಕ್ನೋ, ಜೂ. ೧೩: ಉತ್ತರ ಪ್ರದೇಶ ಮೈನ್‌ಪುರಿ ಜಿಲ್ಲೆಯಲ್ಲಿ ಇಂದು ಮುಂಜಾನೆ ನಡೆದ ಭೀಕರ ಬಸ್ ಅಪಘಾತದಲ್ಲಿ ೧೭ ಮಂದಿ ಮೃತಪಟ್ಟು ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ದುರಂತ ಮೈನ್‌ಪುರಿ ಜಿಲ್ಲೆ ತೀರ್ಥಪುರ ಎಂಬ ಗ್ರಾಮದ ಬಳಿ ಇಂದು ಮುಂಜಾನೆ ನಡೆದಿದೆ.

  • ಅತಿವೇಗವೇ ಅಪಘಾತಕ್ಕೆ ಕಾರಣ
  • 17 ಮೃತರಲ್ಲಿ ಓರ್ವ ಮಹಿಳೆ
  • ಬಹುತೇಕರು ಇಟ್ಟಿಗೆ ಕಾರ್ಮಿಕರು
  • ಬಸ್ ಚಾಲಕನ ಎಡಗಾಲು ತುಂಡು
  • ಸಿಎಂ ಯೋಗಿ ಸಂತಾಪ

ಖಾಸಗಿ ಬಸ್ ರಸ್ತೆ ವಿಭಜಕಕ್ಕೆ ಅಪ್ಪಳಿಸಿ, ಅದೇ ವೇಗದಲ್ಲಿ ಮೊಗುಚಿಕೊಂಡ ಪರಿಣಾಮ ಹೆಚ್ಚು ಸಾವು ನೋವುಗಳಾದವು; ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಬಸ್ ಚಾಲಕನ ಎಡಗಾಲು ತುಂಡಾಗಿದ್ದು ಆತನನ್ನು ಸಮೀಪದ ಸಾಯ್‌ಫಾಯ್ ಆಸ್ಪತ್ರೆಗೆ ದಾಖಲಿಸಲಾಗಿದೆ; ೧೭ ಮೃತರ ಪೈಕಿ ಓರ್ವ ಮಹಿಳೆ ಸೇರಿದ್ದು ಅವರೆಲ್ಲರ ಗುರುತು ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ; ಇತರ ೨೦ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೈನ್‌ಪುರಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಓಂಪ್ರಕಾಶ್ ಸಿಂಗ್ ತಿಳಿಸಿದ್ದಾರೆ.

ರಾಜಾಸ್ತಾನದ ಜೈಪುರದಿಂದ ಫರೂಖಾಬಾದ್‌ನತ್ತ ಹೋಗುತ್ತಿದ್ದ ಈ ಬಸ್‌ನಲ್ಲಿ ಸುಮಾರು ೬೦ ರಿಂದ ೭೦ ಪ್ರಯಾಣಿಕರಿದ್ದರು. ವೇಗವಾಗಿ ಬರುತ್ತಿದ್ದ ಬಸ್ ತೀರ್ಥಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಮೊಗುಚಿಕೊಂಡಿತು. ಮೈನ್‌ಪುರಿ-ಇಟಾವಾ ರಸ್ತೆಯಲ್ಲಿ ಮುಂಜಾನೆ ೫.೩೦ರ ಸಮಯದಲ್ಲಿ ಈ ದುರಂತ ನಡೆಯಿತು ಎಂದು ಎಎಸ್‌ಪಿ ಹೇಳಿದ್ದಾರೆ. ಗಾಯಾಳುಗಳ ನರಳಾಟ ಹಾಗೂ ಮೃತರ ಸಂಬಂಧಿಕರ ಚೀರಾಟ ಕರುಳು ಹಿಂಡುವಂತಿತ್ತು.

ಗಾಯಾಳುಗಳನ್ನು ಸಮೀಪದ ಸಾಯ್‌ಫಾಯ್ ಹಾಗೂ ಮೈನ್‌ಪುರಿ ಆಸ್ಪತ್ರೆಗಳಿಗೆ ರವಾನಿಸಲಾಗಿದೆ; ಅವರ ಪೈಕಿ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರುಗಳನ್ನು ಆಗ್ರಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಈ ನತದೃಷ್ಟ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಬಹುತೇಕರು ಕೂಲಿ ಕಾರ್ಮಿಕರಾಗಿದ್ದು ತಾವು ಕೆಲಸ ಮಾಡುವ ಇಟ್ಟಿಗೆ ಗೂಡುಗಳಿಂದ ತಮ್ಮ ಮನೆಗಳಿಗೆ ವಾಪಸಾಗುತ್ತಿದ್ದರೆನ್ನಲಾಗಿದೆ.

‘ಯುಪಿ-೭೬’ ನೊಂದಣಿ ಸಂಖ್ಯೆ ಹೊಂದಿರುವ ಈ ಖಾಸಗಿ ಬಸ್ ಫರೂಖಾಬಾದ್‌ನಲ್ಲಿ ನೊಂದಣಿಯಾಗಿದೆ; ಮೃತರ ಪೈಕಿ ಬಸ್ ಮೇಲ್ಛಾವಣಿ ಮೇಲೆ ಮಲಗಿದ್ದವರೂ ಸೇರಿದ್ದಾರೆ; ಹೆಚ್ಚಿನ ವಿವರಗಳಿಗಾಗಿ ಕಾಯಲಾಗುತ್ತಿದೆ ಎಂದು ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಯೋಗಿ ಸಂಪಾಪ:

ಅಪಘಾತದಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಕೋರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ವಾರಸುದಾರರಿಗೆ ಈ ದುಖಃ ಭರಿಸುವ ಶಕ್ತಿಯನ್ನು ಆ ದೇವರು ಕರುಣಿಸಲಿ ಎಂದು ಮುಖ್ಯಮಂತ್ರಿ ಪ್ರಾರ್ಥಿಸಿದ್ದಾರೆ. ಗಾಯಾಳುಗಳ ಸೂಕ್ತ ಚಿಕಿತ್ಸೆಗೆ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಳ್ಳಬೇಕೆಂದು ಸಹ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆ ಆರಂಭಿಸಲಾಗಿದ್ದು, ಮತ್ತಷ್ಟು ವಿವರಗಳು ತಿಳಿದುಬರಬೇಕಾಗಿದೆ.

Leave a Comment