ಭೀಕರ ಅಪಘಾತ: ಸ್ಥಳದಲ್ಲೇ ಇಬ್ಬರ ಸಾವು

ಅಂಕೋಲಾ, ಅ 11-  ಕಂಟೇನರ್ ಲಾರಿ ಮತ್ತು ಎರ್ಟೀಗಾ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ದಂಪತಿಗಳಿರ್ವರು ಸ್ಥಳದಲ್ಲಿಯೇ ಮೃತಪಟ್ಟು ಓರ್ವರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ರಾ.ಹೆ 66 ರ ಮಾದನಗೇರಿ ತಿರುವಿನಲ್ಲಿ ನಡೆದಿದೆ.
ಬೆಳಗಾವಿ ನೆಹರು ನಗರ ನಿವಾಸಿಗಳಾದ ಸುರೇಶ ಲಕ್ಷ್ಮಣ ರಾಯ್ಕರ (65), ಚಂದ್ರಕಲಾ ಸುರೇಶ ರಾಯ್ಕರ (60) ದಂಪತಿಗಳು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಗೋವಾ ರಾಜ್ಯದ ಮಾಪುಸಾ ನಿವಾಸಿ ಭಾರತಿ ಪ್ರಭಾಕರ ವೆರ್ಣೇಕರ(45) ಎಂಬುವವರಿಗೆ ಗಂಭೀರ ಸ್ವರೂಪದ ಗಾಯಗಳಾಗಿದೆ.
ಎರ್ಟೀಗಾ ಕಾರು ಅಂಕೋಲಾದಿಂದ ಕುಮಟಾ ಮಾರ್ಗವಾಗಿ ಚಲಿಸುತ್ತಿದ್ದು ಅದೆ ಮಾರ್ಗದಲ್ಲಿ ಬಂದಿರುವ ಕಂಟೇನರ್ ಲಾರಿಯು ಹಿಂಬದಿಯಿಂದ ಕಾರಿಗೆ ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಓರ್ವ ಮಹಿಳೆ ಮತ್ತು ಪುರುಷ ಮೃತ ಪಟ್ಟಿದ್ದಾರೆ. ಇನ್ನೋರ್ವ ಮಹಿಳೆಗೆ ಗಂಭೀರ ಗಾಯಗಳಾಗಿದ್ದು ಕುಮಟಾ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರು ಕುಮಟಾದಲ್ಲಿರುವ ಸಂಬಂಧಿಗಳ ಮನೆಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಗೋಕರ್ಣ ಮತ್ತು ಅಂಕೋಲಾ ಠಾಣೆಯ ಪೊಲೀಸರು ಸ್ಥಳೀಯರ ನೆರವಿನಿಂದ ಕ್ರೇನ್ ಮುಖಾಂತರ ಕಂಟೇನರ್ ಲಾರಿಯಡಿ ಸಿಲುಕಿಕೊಂಡಿರುವ ಕಾರನ್ನು ಹೊರ ತೆಗೆಯಲಾಗಿದೆ. ಈ ಕುರಿತು ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment