ಭಾವ ಸಾಗರದ ಸುಂದರ ನೃತ್ಯ ಸಂಹಿತೆ

ವಿವಿಧ ಭಾವಗಳನ್ನು ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಲ್ಲ ಅರ್ಥಪೂರ್ಣ ಕಂಗಳ ನೋಟ, ಸುಂದರ ಅಭಿನಯ ಕಲಾವಿದೆ ಸಂಹಿತಳ ಗುಣಾತ್ಮಕ ನೃತ್ಯಾಂಶಗಳು. ಪ್ರಬುದ್ಧ ಅಭಿನಯದಿಂದ ರಸಿಕರ ಮನತುಂಬಿದ ‘ಸಂಹಿತಾ’ ಇತ್ತೀಚಿಗೆ ‘ಐ.ಸಿ.ಸಿ.ಆರ್.’ ಆಶ್ರಯದಲ್ಲಿ ಹಮ್ಮಿಕೊಂಡ ನೃತ್ಯ ಕಾರ್ಯಕ್ರಮವನ್ನು ಭಾರತೀಯ ವಿದ್ಯಾ ಭವನದಲ್ಲಿ ಯಶಸ್ವಿಯಾಗಿ ನೆರವೇರಿಸಿದಳು.
‘ಅಭಿವ್ಯಕ್ತಿ ಡಾನ್ಸ್ ಸೆಂಟರ್ ‘ ನ ಖ್ಯಾತ ನೃತ್ಯಗುರು ಮತ್ತು ಕಲಾವಿದರಾದ ಎಸ್. ರಘುನಂದನ್ ಅವರ ಸಮರ್ಥ ಗರಡಿಯಲ್ಲಿ ತಯಾರಾದ ಹೆಮ್ಮೆ ಇವಳದು. ಸ್ವತಃ ವಾಗ್ಗೇಯಕಾರರೂ ಆದ ಗುರುಗಳ ಉತ್ತಮರಚನೆ ಹಾಗೂ ಸಂಯೋಜನೆ ಅವಳ ಪ್ರಸ್ತುತಿಯ ಸೌಂದರ್ಯವನ್ನು ಹೆಚ್ಚಿಸಿದ್ದವು.
ಮೊದಲಿಗೆ ಹಂಸಧ್ವನಿ ರಾಗದ ‘ಪುಷ್ಪಾಂಜಲಿ’ಯನ್ನು ಕಲಾವಿದೆ, ನಗುಮುಖದಿಂದ, ಖಚಿತ ಹಸ್ತಮುದ್ರಿಕೆ, ವಿವಿಧ ಅಡವುಗಳು, ಮೋಹಕ ನೃತ್ತಗಳ ವಿನ್ಯಾಸವನ್ನು ಪ್ರದರ್ಶಿಸಿ ಆ ಮೂಲಕ ದೇವತೆಗಳಿಗೆ, ಗುರು-ಹಿರಿಯರು, ಸಮಸ್ತ ಶುಭಾಕಾಂಕ್ಷಿಗಳಿಗೆ ನಮನ ಸಲ್ಲಿಸಿದಳು. ನಂತರದ ಗಣೇಶಸ್ತುತಿಯಲ್ಲಿ, ಗಣಪನ ವಿನೂತನ ಭಂಗಿಗಳನ್ನು ತೋರುತ್ತ ಲೀಲಾಜಾಲವಾಗಿ ನರ್ತಿಸಿದ್ದು ವಿಶೇಷವೆನಿಸಿತು. ದುರ್ಗಾ ರಾಗದ ‘ಜಯ ಜಯ ದುರ್ಗಾ ಮಾತೆ ಭವಾನಿ ‘ ಎಂಬ ದೇವಿಸ್ತುತಿಯನ್ನು ಆರಾಧಕ ಭಕ್ತಿಯಿಂದ ಭಾವಪೂರ್ಣವಾಗಿ ಅಭಿನಯಿಸಿದಳು. ಉಮೆಯ ಸೌಮ್ಯಸ್ವರೂಪವನ್ನು ಕಾತ್ಯಾಯಿನಿಯ ಉಗ್ರರೂಪವನ್ನೂ ಅಷ್ಟೇ ಪರಿಣಾಮಕಾರಿಯಾಗಿ ಹೊಮ್ಮಿಸಿದಳು. ಸಂಚಾರಿಯಲ್ಲಿ ಅಭಿನಯಿಸಿದ ‘ಮಹಿಷಾಸುರ ಮರ್ಧಿನಿ’ ಯ ಪ್ರಸಂಗ ದೈವೀಕತೆಯತೆಯಿಂದ ಶೋಭಿಸಿತು. ನಡುನಡುವೆ ಸುಳಿದ ನೃತ್ತಗಳು ಯಾಂತ್ರಿಕವೆನಿಸದೆ, ಅಭಿನಯಕ್ಕೆ ಪೂರಕವಾಗಿ ಬೆಸೆದುಕೊಂಡವು. ಸಂಹಿತಾ ಪ್ರದರ್ಶಿಸಿದ ಆಕಾಶಚಾರಿಗಳು, ವೀರಾಸನ, ಮಂಡಿ ಅಡವುಗಳ ಚೆಲುವು ಎದ್ದುಕಂಡವು. ಚಾಮುಂಡೆಶ್ವರಿಯ ವೀರಾವೇಶದ ಮೋಹಕ ಭಂಗಿಗಳು ಅವಳಿಗಿದ್ದ ಆಂಗಿಕಾಭಿನಯದ ನಿಯಂತ್ರಣವನ್ನು ಬಿಂಬಿಸಿದವು.
ಮುಂದೆ ತೋಡಿರಾಗದ ವರ್ಣಂ ‘ರೂಪಮು ಜೂಚಿ…’ ? ಪ್ರಥಮಾರ್ಧ ಮುತ್ತುಸ್ವಾಮಿ ದೀಕ್ಷಿತರು ಹಾಗೂ ಉತ್ತರಾರ್ಧ ಟೈಗರ್ ವರದಾಚಾರ್ ಅವರ ರಚನೆ. ಕಲಾಕ್ಷೇತ್ರದ ರುಕ್ಮಿಣೀ ಅರುಂಡೆಲ್ ಅವರ ನೃತ್ಯ ಸಂಯೋಜನೆಯಲ್ಲಿ ನೃತ್ತ ಹಾಗೂ ಅಭಿನಯದ ಸಮನ್ವಯದ ಈ ದೀರ್ಘಬಂಧದ ನೃತ್ಯದಲ್ಲಿ, ಶುದ್ಧ ನೃತ್ತ-ನೃತ್ಯಗಳ ವಿವಿಧ ಆಯಾಮಗಳು ಮನೋಜ್ಞವಾಗಿ ಮೂಡಿಬಂದವು. ಸಂಚಾರಿಯಲ್ಲಿ ಕಲಾವಿದೆಯ ಹಸಿತವದನ, ನವಿರಾದ ಬಾಗು-ಬಳುಕುಗಳ ಅಭಿನಯದಲ್ಲಿ ಪ್ರಾವೀಣ್ಯ ಮೈದೋರಿತು. ಜೊತೆಗೆ ಅವಳಿಗಿದ್ದ ಸ್ಮರಣಶಕ್ತಿ, ತಾಳಜ್ಞಾನ ಮತ್ತು ಲಯಜ್ಞಾನವೂ ಸುವ್ಯಕ್ತವಾದವು. ಮೆಲುಹೆಜ್ಜೆಯ ಲಾವಣ್ಯ ಸೃಷ್ಟಿಸಬಲ್ಲ ಸಂಹಿತಾ, ತೀವ್ರಗತಿಯ ಅಡವುಗಳಲ್ಲೂ ಗಮನೀಯಳಾದಳು . ಬೆರಗು ತಂದ ಅದೆಷ್ಟು ನೃತ್ತಗಳು ನೋಡಿದಷ್ಟೂ ವಿಭಿನ್ನ. ಗುರು ರಘುನಂದನ್ ಅವರ ಉತ್ಸಾಹಪೂರ್ಣ, ಘನವಾದ ನಟುವಾಂಗವೂ ಪೂರಕವಾಯಿತು.
ನಾಟ್ಯಾಚಾರ್ಯ ಹೆಚ್.ಆರ್.ಕೇಶವಮೂರ್ತಿ ನೃತ್ಯ ಸಂಯೋಜಿಸಿದ ‘ಪದಂ’ -‘ಅವರಿವರೆಂದರೇ ಏನಾಯ್ತೇ ?’ – ಭೈರವಿರಾಗ- ಮಿಶ್ರಛಾಪು ತಾಳಕ್ಕೆ ನಿಬದ್ಧವಾಗಿತ್ತು. ಅಷ್ಟನಾಯಕಿಯರ ಪೈಕಿ ಇಲ್ಲಿನ ನಾಯಕಿ ‘ಸ್ವಾಧೀನಪತ್ತಿಕಾ ನಾಯಕಿ’-ಪ್ರಿಯತಮ ಕೃಷ್ಣನಲ್ಲಿ ಅತೀವ ವಿಶ್ವಾಸ, ನಂಬಿಕೆ. ಉಳಿದ ಗೋಪಿಕೆಯರು ಆಡಿಕೊಂಡರೆ ಏನಾಗುತ್ತದೆ, ನನ್ನ ನಲ್ಲನಲ್ಲಿ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ನೆಚ್ಚಿ ನರ್ತಿಸುವ ನಾಯಕಿಯ ಪಾತ್ರದೊಳಗೆ ಕಲಾವಿದೆ ಪರಕಾಯ ಪ್ರವೇಶ ಮಾಡಿ ಬಹು ಮನೋಜ್ಞವಾಗಿ ಅಭಿನಯಿಸಿದಳು. ಸಂಹಿತಾ, ಆತ್ಮವಿಶ್ವಾಸದಿಂದ ಬಹು ಸೊಗಸಾಗಿ ನರ್ತಿಸಿದ ಈ ಅಪ್ಪಟ ಕನ್ನಡ ಕೃತಿ ರಸಿಕರಿಗೆ ಅಪ್ಯಾಯಮಾನವಾಯಿತು.
ಜಯದೇವನ ‘ಅಷ್ಟಪದಿ’ ಯಾರಿಗೆ ತಾನೇ ಇಷ್ಟವಾಗುವುದಿಲ್ಲ?…ಶೃಂಗಾರಭಾವದ ಓಕುಳಿಯಲ್ಲಿ ಮೀಯದವರಾರು? ‘ಲಲಿತ ಲವಂಗ ಪರಿಶೀಲನ ಕೋಮಲ ಮಲಯ ಸಮೀರೇ’ ಎಂಬುದಾಗಿ ರಾಧೆ, ಕೃಷ್ಣನ ಅಗಲಿಕೆಯ ವಿರಹದಲ್ಲಿ ಮೊದಲೇ ಮಿಡುಕುತ್ತಿದ್ದರೆ, ಅವಳ ಸಖಿ ಬಂದು ಚಿತಾಯಿಸುವ ಪರಿ ನೋಡಬೇಕು. ಚಿಂತಾವ್ಯಾಕುಲ ರಾಧೆಯ ನೋವನ್ನು ಸಂಹಿತಾ, ತನ್ನ ಪರಿಣತ ಮುಖಾಭಿವ್ಯಕ್ತಿಯಿಂದ, ನವಿರಾದ ಅಭಿನಯದಿಂದ ಮನಮುಟ್ಟಿಸಿದಳು. ವಿಪ್ರಲಬ್ಧ ನಾಯಕಿಯ ಮನೋವೇದನೆಯನ್ನು ಕಾನಡ ರಾಗದ ಜಾವಳಿಯಲ್ಲಿ ಕಲಾವಿದೆ, ‘ವಾರಿಜಮುಖಿ …’ ಎಂಬ ಪಾರ್ಥಸಾರಥಿಯವರ ಕೃತಿಯನ್ನು ಸಾಕಾರಗೊಳಿಸಿದಳು. ಅನಂತರ ‘ಬೇಲೂರು ಚೆನ್ನ ಕೇಶವಸ್ವಾಮಿ’ ಕುರಿತ ‘ತಿಲ್ಲಾನ’ವನ್ನು ಲವಲವಿಕೆಯಿಂದ ನರ್ತಿಸಿ ತನ್ನ ಪ್ರಸ್ತುತಿಯನ್ನು ಸಂಪನ್ನಗೊಳಿಸಿದಳು ಕಲಾವಿದೆ . ಹಿನ್ನಲೆ ವಾದ್ಯ ಸಹಕಾರದಲ್ಲಿ ಗಾಯನ-ವಿನಯ್ ರಾಜಮಾನ್ಯ, ಮೃದಂಗ-ಭವಾನಿ ಶಂಕರ್,ಕೊಳಲು-ವಿವೇಕ ಕೃಷ್ಣ, ಪಿಟೀಲು-ಹೇಮಂತ ಕುಮಾರ್ ಮತ್ತು ನಟುವಾಂಗ-ರಘುನಂದನ್ ಕಾರ್ಯಕ್ರಮವನ್ನು ಕಳೆಗೂಡಿಸಿದರು.

 ವೈ.ಕೆ.ಸಂಧ್ಯಾ ಶರ್ಮ

Leave a Comment