ಭಾರೀ ಮಳೆ: ಊರುಬೈಲು  ಸೇತುವೆ ನೀರುಪಾಲು

ಸುಳ್ಯ, ಆ. ೨೦- ಕೊಡಗಿನಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಮತ್ತು ಜೋಡುಪಾಲ-ಮದೆನಾಡು ಗುಡ್ಡ ಕುಸಿತದ ಮತ್ತು ಪಯಸ್ವಿನಿ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದ ಪರಿಣಾಮ ೫ ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಸಂಪಾಜೆ ಸಮೀಪದ ಊರುಬೈಲು ಸೇತುವೆ ನೀರುಪಾಲಾಗಿ, ರಸ್ತೆ ಸಂಚಾರಕ್ಕೆ ಸ್ಥಗಿತಗೊಂಡಿದೆ.

ಸಂಪಾಜೆ ಗ್ರಾಮದಿಂದ ಮಾರ್ಪಡ್ಕಕ್ಕಾಗಿ ಊರುಬೈಲು ಸಂಪರ್ಕ ಸಾಧಿಸಲು ಮಾರ್ಪಡ್ಕ ಎಂಬಲ್ಲಿ ಸುಮಾರು ೫ ವರ್ಷದ ಹಿಂದೆ ಉದ್ಯೋಗ ಖಾತರಿ ಯೋಜನೆಯಲ್ಲಿ ಸೇತುವೆಯು ೧೦ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡು ಜನಮನ್ನಣೆಗಳಿಸಿತ್ತು. ಈಗ ಭಾರೀ ಮಳೆಯ ಹಿನ್ನೆಲೆಯಲ್ಲಿ ಕಳೆದ ವಾರ ಈ ಸೇತುವೆಯ ಫಿಲ್ಲರ್‌ಗೆ ಬೃಹದಾಕಾರದ ಮರಗಳು ಬಂದು ಗುದ್ದಿ ಸೇತುವೆಯ ಫಿಲ್ಲರ್ ವಾಲಿ ಅಪಾಯವನ್ನು ಆಹ್ವಾನಿಸುತ್ತಿತ್ತು.

ಇದೀಗ ಸೇತುವೆ ನೀರುಪಾಲಾಗಿದೆ. ಈ ಸೇತುವೆ ಸುಮಾರು ಸಾವಿರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಅಲ್ಲದೆ ಸುಳ್ಯ ಮತ್ತು ಮಡಿಕೇರಿ ಶಾಲಾ-ಕಾಲೇಜುಗಳಿಗೆ ಹೋಗುವ ನೂರಾರು ಮಕ್ಕಳಿದ್ದಾರೆ. ಊರುಬೈಲು ಸೇತುವೆ ಸಂಪರ್ಕ ಕಡಿತಗೊಂಡರೆ ಚೆಂಬು, ಆನ್ಯಳ, ಕಾಂತಬೈಲು, ದಬ್ಬಡ್ಕ ಇತರ ಕಡೆಗಳಿಗೆ ಸಂಪರ್ಕ ಕೊಂಡಿ ಕಳಚಿದಂತಾಗಿದೆ.

Leave a Comment