ಭಾರೀ ಮಳೆಗೆ ತಡೆಗೊಡೆ ಕುಸಿತ: ಜಮೀನಿಗೆ ನುಗ್ಗಿದ ನೀರು

ಹಾಸನ, ಜೂ.೩೦- ನಿನ್ನೆ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು, ಜನರ ಜೀವನ ಅಸ್ತವ್ಯಸ್ತವಾಗಿದೆ. ಜೊತೆಗೆ ಚರಂಡಿಯ ತಡೆಗೋಡೆಯೊಂದು ಕುಸಿದು ಬಿದ್ದಿದೆ. ಇತ್ತ ಕರಾವಳಿಯಲ್ಲಿ ಕೂಡ ಹೆಚ್ಚಿನ ಕಡೆ ಉತ್ತಮ ಮಳೆಯಾಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸುತ್ತಮುತ್ತ ಉತ್ತಮ ಮಳೆಯಾಗಿದ್ದು, ಜಮೀನಿನಲ್ಲಿ ಹಳ್ಳದ ರೀತಿ ನೀರು ನಿಂತಿವೆ. ಚನ್ನರಾಯಪಟ್ಟಣ ಸಮೀಪವಿರುವ ನಂದಿನಿ ಹೈಟೆಕ್ ಹಾಲು ಉತ್ಪನ್ನ ಘಟಕದಿಂದ ಮಳೆ ಬಿದ್ದಾಗ ಹೊರಬರುತ್ತಿರುವ ನೀರು ಶೆಟ್ಟಿಹಳ್ಳಿಯ ಜಮೀನುಗಳಿಗೆ ನುಗ್ಗಿ ಕೆರೆಯಂತಾಗಿದೆ. ನೀರು ಸಮರ್ಪಕವಾಗಿ ಹೊರಹೋಗಲು ಚರಂಡಿಯನ್ನು ನಿರ್ಮಿಸದಿರುವುದರಿಂದ ಡೈರಿ ಒಳಗಿಂದ ಹರಿದು ಬರುವ ನೀರು ಜಮೀನಿಗೆ ನುಗ್ಗುತ್ತಿದೆ ಎಂದು ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಇನ್ನೂ ಮಡಿಕೇರಿ ನಗರದ ಗೌಳಿಬೀದಿಯಲ್ಲಿ ಸೋಮವಾರ ಸಂಜೆಯಿಂದ ಸುರಿಯುತ್ತಿರುವ ಮಳೆಗೆ ಸಡಿಲಗೊಂಡ ಹಾಗೂ ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ ಒಳ ಚರಂಡಿಯ ತಡೆಗೋಡೆ ಕುಸಿದು ಬಿದ್ದಿದೆ. ತಡೆಗೋಡೆ ಕುಸಿದ ಸ್ಥಳದಲ್ಲಿ ಯಾವುದೇ ಮನೆಗಳು ಇಲ್ಲದೇ ಇದ್ದುದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ನಗರದ ಆಕಾಶವಾಣಿ ಸಮೀಪ ಗೌಳಿಬೀದಿಗೆ ಹೊಂದಿಕೊಂಡಂತೆ ಕಟ್ಟಿರುವ ತಡೆಗೋಡೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತೇವಾಂಶಗೊಂಡ ಗೋಡೆ ಏಕಾಏಕಿ ಕುಸಿದಿದೆ. ಗೋಡೆ ಕುಸಿದ ಸ್ಥಳದಲ್ಲಿ ಪಾಳುಬಿದ್ದ ಜಾಗ ಇದ್ದುದ್ದರಿಂದ ಅಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಎನ್‌ಡಿಆರೆಫ್ ತಂಡ, ನಗರ ಪೊಲೀಸ್ ಸಿಬ್ಬಂದಿ ಹಾಗೂ ಉಪವಿಭಾಗ ಅಧಿಕಾರಿ ಜವರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ತಡೆಗೋಡೆಗೆ ಹೊಂದಿಕೊಂಡಿರುವ ಕುಟುಂಬಗಳನ್ನು ಮುನ್ನೆಚ್ವರಿಕಾ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ. ಅಪಾಯದ ಸ್ಥಳದಲ್ಲಿ ಇರುವುದರಿಂದ ೩ ಕುಟುಂಬಗಳು ಸಂಬಂಧಿಕರ ಮನೆಗೆ ತೆರಳಿದ್ದಾರೆ.

Share

Leave a Comment