ಭಾರೀ ಗಾತ್ರದ ಕಾಳಿಂಗ ಸರ್ಪ ಸೆರೆ

ಮಡಿಕೇರಿ: ಜ.27- ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಾಳೆಲೆ ಸಮೀಪದ ಸುಳುಗೋಡು ಗ್ರಾಮದಲ್ಲಿ ಸೆರೆಯಾಗಿದೆ.
ಗ್ರಾಮದ ಜಯ ಎಂಬವರ ತೋಟದ ತಾಳೆ ಮರದಲ್ಲಿ ಬಂದು 12 ಅಡಿ ಉದ್ದ 17 ಕೆ.ಜಿ ತೂಕದ ಭಾರೀ ಗಾತ್ರದ ಕಾಳಿಂಗ ಸರ್ಪ ಸೇರಿಕೊಂಡಿತ್ತು. ಈ ಬಗ್ಗೆ ಮಾಹಿತಿ ತಿಳಿದು ಉರಗ ತಜ್ಞ ಶರತ್ ಹಾಗೂ ಅವರ ತಂಡದವರು ಕಾರ್ಯಾಚರಣೆ ಮಾಡಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ನಿನ್ನೆ ಸಂಜೆ ಕಾಳಿಂಗ ಸರ್ಪ ಮರದಲ್ಲಿರುವ ಬಗ್ಗೆ ಮಾಹಿತಿ ತಿಳಿದು ಶರತ್ ಮತ್ತು ಅವರ ತಂಡ ಸ್ಥಳಕ್ಕೆ ಹೋಗಿದ್ದಾರೆ. ನಂತರ ಸತತ ಒಂದು ಗಂಟೆ ಪ್ರಯತ್ನಪಟ್ಟು ಹಾವನ್ನು ಸೆರೆಹಿಡಿದಿದ್ದಾರೆ. ಸೆರೆ ಹಿಡಿದ ಅಪರೂಪದ ಕಾಳಿಂಗ ಸರ್ಪವನ್ನು ಇಂದು ಮಡಿಕೇರಿಯ ಗಾಂಧಿ ಮೈದಾನಕ್ಕೆ ತಂದು ಸಾರ್ವಜನಿಕವಾಗಿ ಪ್ರದರ್ಶನ ಮಾಡಲಾಗಿದೆ. ಶರತ್ ಹಾವುಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಹಾವು, ಅವುಗಳ ಅಳಿವಿನ ಬಗ್ಗೆ ಜನರಿಗೆ ಇರುವ ಕೆಲ ತಪ್ಪು ತಿಳುವಳಿಕೆಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಅಲ್ಲದೇ ಹಾವು ಕಂಡರೆ ಕೊಲ್ಲಬೇಡಿ, ನಮಗೆ ಮಾಹಿತಿ ನೀಡಿ. ನಾವು ಹಾವನ್ನು ರಕ್ಷಿಸಿ ತೆಗೆದುಕೊಂಡು ಹೋಗಿ ಜೀವ ಉಳಿಸುತ್ತೇವೆ ಎಂದು ಮನವಿ ಮಾಡಿಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಹಾವುಗಳನ್ನ ರಕ್ಷಣೆಯ ಕೆಲಸಮಾಡುತ್ತಿರೋ ಶರತ್ ಈವರೆಗೆ 3 ಸಾವಿರಕ್ಕೂ ಹೆಚ್ಚು ಹಾವುಗಳನ್ನ ರಕ್ಷಿಸಿ ಕಾಡಿಗೆ ಮರಳಿಸಿದ್ದಾರೆ. ಇವುಗಳ ಪೈಕಿ 23ಕ್ಕೂ ಹೆಚ್ಚು ಕಾಳಿಂಗ ಸರ್ಪಗಳು ಸೇರಿವೆ.
ಸಾಮಾನ್ಯವಾಗಿ ಶೀತ ಪ್ರದೇಶಗಳಲ್ಲಿ ವಾಸಮಾಡುವ ಕಾಳಿಂಗ ಸರ್ಪ ಆಕಶ್ಮಿಕವಾಗಿ ನೀರಿನ ಸಮೀಪ ಇರುವ ತಾಳೆ ಮರಕ್ಕೆ ಬಂದು ಸೇರಿಕೊಂಡಿತ್ತು. ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ ಶರತ್ ವಿರಾಜಪೇಟೆ ಸಮೀಪದ ಮಾಕುಟ್ಟ ಮೀಸಲು ಅರಣ್ಯಕ್ಕೆ ಬಿಟ್ಟಿದ್ದಾರೆ.

Leave a Comment