ಭಾರತ ಭೇಟಿ ವೇಳೆ ಕಾಶ್ಮೀರ ವಿವಾದ ಚರ್ಚೆ -ಟ್ರಂಪ್

ದಾವೋಸ್, ಜ. ೨೨- ಕಾಶ್ಮೀರ ವಿವಾದ ಸೇರಿದಂತೆ ಕೆಲವು ಗಡಿ ವಿವಾದಗಳನ್ನು ಬಗೆಹರಿಸುವ ಸಂಬಂಧ ತಾವು ಹಾಗೂ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್‌ಖಾನ್, ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ಟ್ರಂಪ್ ತಿಳಿಸಿದ್ದಾರೆ.
ಫೆಬ್ರವರಿ ತಿಂಗಳಲ್ಲಿ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. ಕೆಲವು ಗಡಿ ವಿವಾದಗಳ ಕುರಿತು ಪರಿಹಾರ ಕಂಡುಕೊಳ್ಳಲು ನಾವು ಯತ್ನಿಸುತ್ತಿದ್ದೇವೆ.
ಕಾಶ್ಮೀರ ವಿವಾದ ಸೇರಿದಂತೆ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧ ಕುರಿತೂ ಚರ್ಚಿಸಲಿದ್ದೇವೆ. ಕಾಶ್ಮೀರ ವಿವಾದವನ್ನು ಬಗೆಹರಿಸಲು ತಮ್ಮ ಸಹಾಯವೇನಾದರು ಅಗತ್ಯವಿದ್ದರೆ ಖಂಡಿತವಾಗಿಯೂ ಮಾಡಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪ್ರತಿಯೊಂದು ಬೆಳವಣಿಗೆಗಳನ್ನು ಅತ್ಯಂತ ಸೂಕ್ಷ್ಯವಾಗಿ ಗಮನಿಸುತ್ತಿದ್ದೇವೆ ಎಂದು ಅವರು ಸ್ವಿಡ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವಆರ್ಥಿಕ ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ಖಾನ್ ಅವರೊಂದಿಗೆ ನಡೆಸಲಿರುವ ಮಾತುಕತೆ ಹಿನ್ನೆಲೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಕೆಲವು ಗಡಿ ವಿವಾದಗಳನ್ನು ಬಗೆಹರಿಸಲು ನಾವು ಚರ್ಚಿಸುತ್ತಿದ್ದೇವೆ ಎಂಬ ಟ್ರಂಪ್ ಅವರ ಹೇಳಿಕೆ ಏನನ್ನೂ ಅರ್ಥೈಸುತ್ತಿದೆ ಎಂಬ ಬಗ್ಗೆ ತಕ್ಷಣಕ್ಕೆ ತಿಳಿಯದಿದ್ದರೂ ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸುವ ಸಂಬಂಧ ಇತ್ತೀಚೆಗೆ ಆ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಮಾತುಕತೆಗಳನ್ನು ಪ್ರಸ್ತಾಪಿಸಿದ್ದಾರೆಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರಿ ವಿವಾದ ವಿಚಾರ ಕುರಿತು ಪಾಕಿಸ್ತಾನ ಭಾರತದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿವಾದವನ್ನು ಬಗೆಹರಿಸಲು ಮಧ್ಯಸ್ಥಿಕೆ ವಹಿಸುವಂತೆ ಅಮೆರಿಕದ ಸಹಾಯವನ್ನು ಕೋರಿತ್ತು.

Leave a Comment