ಭಾರತ ಬಂದ್ : ಹೈಕದಲ್ಲಿ ಮಿಶ್ರ ಪ್ರತಿಕ್ರಿಯೆ

(ನಮ್ಮ ಪ್ರತಿನಿಧಿಯಿಂದ)ಕಲಬುರಗಿ,ಸೆ.10-ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ “ಭಾರತ ಬಂದ್”ಗೆ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೆ, ಬೀದರ್ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ನೀರಸ ಪ್ರತ್ರಿಕ್ರಿಯೆ ವ್ಯಕ್ತವಾಗಿದೆ.

ಬಂದ್ ಹಿನ್ನೆಲೆಯಲ್ಲಿ ಕಲಬುರಗಿ ನಗರವು ಸೇರಿದಂತೆ ಜಿಲ್ಲೆಯಾದ್ಯಂತ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಕೆಲವು ಕಡೆ ಆಟೋ ಓಡಾಡುತ್ತಿದ್ದರೂ ಪ್ರಯಾಣಿಕರು ಪರದಾಡುವಂತಾಗಿದೆ.

ನಗರದ ಪ್ರಮುಖ ಬೀದಿಗಳಲ್ಲಿನ ಹೊಟೇಲ್, ಅಂಗಡಿ ಮುಂಗಟ್ಟುಗಳು ಮುಚ್ಚಿವೆ, ಜನರ ಓಡಾಟವಿಲ್ಲದೆ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ನೀಡಿದೆ.

ಬಸ್ ಸಂಚಾರವಿಲ್ಲದೆ ಕೇಂದ್ರ ಬಸ್ ನಿಲ್ದಾಣ ಮತ್ತು ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದು, ಬಸ್ ಸಂಚಾರವಿಲ್ಲದೆ ಪ್ರಯಾಣಿಕರು ಪರದಾಡುವಂತಾಯಿತು.

ಬಂದ್ ಹಿನ್ನೆಲೆಯಲ್ಲಿ ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಖರ್ಗೆ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ಬಿಜೆಪಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಬರೀ ಸುಳ್ಳು ಹೇಳುವುದೇ ಅದರ ಕೆಲಸವಾಗಿದೆ. ತೈಲ ಬೆಲೆ ಏರಿಕೆ ಮಾಡುವುದರ ಮೂಲಕ ಜನ ಸಾಮಾನ್ಯರ ಮೇಲೆ ಹೆಚ್ಚಿನ ಹೊರೆ ಹೇರಿದೆ. ಸರ್ಕಾರದ ಈ ಜನವಿರೋಧಿ ನೀತಿ ವಿರುದ್ಧ ಜನ ಸ್ವಯಂ ಪ್ರೇರಿತವಾಗಿ ಬಂದ್ ನಲ್ಲಿ ಭಾಗವಹಿಸುವುದರ ಮೂಲಕ ಭಾರತ್ ಬಂದ್ ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು. ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ, ಮುಖಂಡರಾದ ವಸಂತಕುಮಾರ, ತಿಪ್ಪಣ್ಣಪ್ಪ ಕಮಕನೂರ,  ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಕಾಂಗ್ರೆಸ್ ಕಾರ್ಯಕರ್ತರು ಬೆಳಿಗ್ಗೆ ನಗರದ ಕೇಂದ್ರ ಬಸ್ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಟೈಯರ್ ಗೆ ಬೆಂಕಿ ಹಚ್ಚಿ ಕೆಲಕಾಲ ಪ್ರತಿಭಟನೆ ನಡೆಸಿದರು. ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡುವಂತೆ ಆಗ್ರಹಿಸಿದರು.

@12bc = ಎಡಪಕ್ಷಗಳ ಪ್ರತಿಭಟನೆ

ಬಂದ್ ಗೆ ಬಂಬಲ ಸೂಚಿಸಿ ಎಡಪಕ್ಷಗಳ ಕಾರ್ಯಕರ್ತರು ನಗರದ ಕೇಂದ್ರ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿದರು. ಟೈಯರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುವುದರ ಮೂಲಕ ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಮಾರುತಿ ಮಾನ್ಪಡೆ, ಹೆಚ್.ವಿ.ದಿವಾಕರ್, ಭೀಮಾಶಂಕರ ಮಾಡಿಯಾಳ, ಮೌಲಾ ಮುಲ್ಲಾ, ಮಹೇಶ ನಾಡಗೌಡ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಂದ್ ಗೆ ಬೆಂಬಲ ಸೂಚಿಸಿ ಎಸ್.ಡಿ.ಪಿ.ಐ ಸಂಘಟನೆ ಕಾರ್ಯಕರ್ತರು ಮುಸ್ಲಿಂ ಚೌಕ್ ನಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಬಂದ್ ಬಿಸಿ ತಟ್ಟಿದ್ದು, ಬಸ್ ಮತ್ತು ಆಟೋ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ಯಾದಗಿರಿ ಜಿಲ್ಲೆಗಳಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಜಯಪುರ ಮತ್ತು ಬೀದರ್ ನಲ್ಲಿ ಮಾತ್ರ ಬಂದ್ ಅಷ್ಟೇನು ಪರಿಣಾಮ ಬೀರಿಲ್ಲ. ಬಸ್ ಮತ್ತು ಆಟೋ ಸಂಚಾರ ಎಂದಿನಂತಿದ್ದು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಡು ರಸ್ತೆಯಲ್ಲಿ ಅಡುಗೆ

ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಕರೆ ನೀಡಿರುವ ಭಾರತ್ ಬಂದ್ ಗೆ ಬೆಂಬಲ ಸೂಚಿಸಿ ಹೋರಾಟಗಾರ್ತಿ ಕೆ.ನೀಲಾ ಅವರ ನೇತೃತ್ವದಲ್ಲಿ ನಗರದ ಸೇಡಂ ರಸ್ತೆಯ ಬಿಲಗುಂದಿ ವೃತ್ತದಲ್ಲಿ ಒಲೆ ಹಚ್ಚಿ ಅಡುಗೆ ಮಾಡಿ ಅನಿಲ ಬೆಲೆ ಏರಿಕೆ ಖಂಡಿಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಲತಾ ರವಿ ರಾಠೋಡ್ ಅವರ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಗರದ ಸುಪರ್ ಮಾರ್ಕೆಟ್ ನ ಚೌಕ್ ಪೊಲೀಸ್ ಠಾಣೆ ಹತ್ತಿರ ಒಲೆ ಹಚ್ಚಿ ಅಡುಗೆ ಮಾಡುವುದರ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು.

 

Leave a Comment