ಭಾರತ- ಪಾಕ್ ಬಿಕ್ಕಟ್ಟು; ಗಡಿ ಜಿಲ್ಲೆಗಳ ವ್ಯಾಪಾರಕ್ಕೆ ಕುತ್ತು

ನವದೆಹಲಿ, ಜ. ೧೭- ಕಾಶ್ಮೀರ ವಿಶೇಷಾಧಿಕಾರ ರದ್ಧತಿ ನಂತರ ಹಾಗೂ ಗಡಿಯಲ್ಲಿ ಪದೇಪದೇ ಪಾಕ್‌ನ ಕದನ ವಿರಾಮ ಉಲ್ಲಂಘನೆಯಿಂದ ಇಂಡೋ ಪಾಕ್ ನಡುವೆ ಸೃಷ್ಟಿಯಾಗಿರುವ ಉದ್ವಿಗ್ನತೆಯಿಂದಾಗಿ ಗಡಿ ಪ್ರದೇಶದ ಜಿಲ್ಲೆಗಳ ವ್ಯಾಪಾರದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದ್ದು, ಮಾಸಿಕ ೩೦ ಕೋಟಿ ರೂ. ನಷ್ಟ ಅನುಭವಿಸುವಂತಾಗಿದೆ.
ಇಂಡೋ – ಪಾಕ್ ಗಡಿಯಲ್ಲಿನ ಅಮೃತಸರ ಜಿಲ್ಲೆಯ ಮೇಲೆ ಈ ಉದ್ವಿಗ್ನತೆ ತೀವ್ರ ಪರಿಣಾಮ ಉಂಟುಮಾಡಿದೆ. ಪಾಕ್ ಹಾಗೂ ಭಾರತದ ನಡುವೆ ವ್ಯಾಪಾರ ಅವಲಂಬಿಸಿದ್ದ ಅಂದಾಜು ೫೨ ಸಾವಿರ ಕುಟುಂಬಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಕುಟುಂಬಗಳು ಟ್ರಕ್ ಮೂಲಕ ಗಡಿ ಪ್ರದೇಶಗಳಲ್ಲಿ ಸರಕು ಸಾಗಾಣಿಕೆ ವ್ಯವಹಾರವನ್ನು ನಡೆಸುತ್ತಿದ್ದವು ಎಂದು ವರದಿಯಾಗಿದೆ.
ಭಾರತ ಮತ್ತು ಪಾಕ್ ನಡುವಿನ ದ್ವಿಪಕ್ಷೀಯ ವ್ಯಾಪಾರದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ೨.೬ ಬಿಲಿಯನ್ ಡಾಲರ್ ವಾಣಿಜ್ಯ ವಹಿವಾಟು ಸ್ಥಗಿತಗೊಂಡಿದೆ. ಉಳಿದಂತೆ, ಕಸ್ಟಮ್ಸ್ ಅಧಿಕಾರಿಗಳ ಆಡಳಿತ ಮತ್ತು ಕಾನೂನುಗಳು ಎರಡೂ ದೇಶಗಳ ಗಡಿ ಪ್ರದೇಶಗಳ ವ್ಯಾಪಾರದ ಮೇಲೆ ತೀವ್ರ ಪರಿಣಾಮ ಉಂಟುಮಾಡಿದೆ.
ಅತ್ತಾರಿ – ವಾಘಾ ಗಡಿ ಮೂಲಕ ಅಮೃತಸರ ಜಿಲ್ಲೆಯಲ್ಲಿ ಮಾಸಿಕ ೩೦ ಕೋಟಿ ರೂ. ವಹಿವಾಟು ನಡೆಯುತ್ತಿದ್ದು, ಇದರಿಂದ ಪ್ರತಿದಿನ ೭೫ ಲಕ್ಷ ರೂ. ನಷ್ಟ ಉಂಟಾಗುತ್ತಿದೆ. ವ್ಯಾಪಾರಿಗಳ (೧,೭೨೪) ಟ್ರಕ್‌ಗಳ (೪,೦೫೦), ಕಸ್ಟಮ್ಸ್ ಹೌಸ್ ಏಜೆಂಟ್ (೧೨೬) ಕಾರ್ಮಿಕ (೨,೫೦೭), ಮಾರಾಟಗಾರರ (೯,೩೫೪) ಕುಟುಂಬಗಳ ಮೇಲೆ ನೇರಪರಿಣಾಮ ಉಂಟುಮಾಡಿದೆ. ಉಳಿದಂತೆ, ಇಂಧನ ಕೇಂದ್ರಗಳು ೩೨, ಟೈರ್ ರಿಪೇರಿ ಮತ್ತು ಮೆಕ್ಯಾನಿಕ್ ಅಂಗಡಿಗಳು ೫೧, ತೂಕದ ಯಂತ್ರಗಳು ೮, ವಾಹನ ನಿಲುಗಡೆ ೮೦ ಮತ್ತು ಇತರ ಪೂರಕ ೬೦೦ ವಹಿವಾಟುಗಳು ಸ್ಥಗಿತಗೊಂಡ ಹಿನ್ನೆಲೆ ಗಡಿ ಭಾಗದ ಜಿಲ್ಲೆ ವ್ಯಾಪಾರದಲ್ಲಿ ನಷ್ಟ ಅನುಭವಿಸುವಂತಾಗಿದೆ.
ಬ್ಯೂರೋ ಆಫ್ ರಿಸರ್ಚ್ ಅಂಡ್ ಇಂಡಸ್ಟ್ರಿ ಎಕನಾಮಿಕ್ ಫಂಡಮೆಂಟಲ್ ನಡೆಸಿರುವ ಅಧ್ಯಯನದಿಂದ ಈ ಮಾಹಿತಿ ಬಹಿರಂಗಗೊಂಡಿದೆ.
ಭದ್ರತೆ ಮತ್ತು ಇನ್ನಿತರ ಕಾರಣಗಳಿಗಾಗಿ ಗಡಿ ನಿಯಂತ್ರಣಾ ರೇಖೆ ಬಳಿ ವ್ಯಾಪಾರವನ್ನು ನಿಷೇಧಿಸಿದ ನಂತರವೂ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದು, ೨೦೦೮ ರಿಂದ ೨೦೧೯ರ ನಡುವೆ ಇಂಡೋ – ಪಾಕ್ ಗಡಿಯಲ್ಲಿ ೭,೫೦೦ ಕೋಟಿ ರೂ. ವಹಿವಾಟು ದಾಖಲಾಗಿತ್ತು. ೧.೭ ಲಕ್ಷ ಉದ್ಯೋಗ ದಿನಗಳು ಮತ್ತು ಸರಕು ಸಾಗಾಣಿಕೆದಾರರಿಗೆ ೬೬.೪ ಕೋಟಿ ರೂ. ಆದಾಯ ಲಭಿಸಿತ್ತು. ಹಲವು ವ್ಯಾಪಾರಗಳಲ್ಲಿ ಉಂಟಾಗಿರುವ ಹಲವು ನಿಷೇಧಗಳಿಂದ ೧೫ ಕೋಟಿ ರೂ. ಮೌಲ್ಯದ ಲಾಭವನ್ನು ವ್ಯಾಪಾರಿಗಳು ಕಳೆದುಕೊಂಡಿದ್ದರೆ, ೫.೫ ಕೋಟಿ ರೂ. ನಷ್ಟನ್ನು ಸರಕು ಸಾಗಾಣಿಕೆದಾರರು ಕಳೆದುಕೊಂಡಿದ್ದಾರೆ.

Leave a Comment