ಭಾರತ ಕ್ರಿಕೆಟ್ ಕೋಚ್ ರವಿಶಾಸ್ತ್ರಿ ಬಹುತೇಕ ಖಚಿತ

ಮುಂಬೈ, ಜು. ೯- ಭಾರತೀಯ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಈಗ ಪುರುಷರ ಕ್ರಿಕೆಟ್ ತಂಡದ ಕೋಚ್ ಆಗಲು ಹವಣಿಸುತ್ತಿದ್ದು ಅವರ ಹೆಸರು ನಾಳೆ ಮೂವರು ಸದಸ್ಯರ ಕ್ರಿಕೆಟ್ ಸಲಹಾ ಸಮಿತಿ ಮುಂದೆ ಪ್ರಮುಖವಾಗಿ ಪರಿಶೀಲನೆಗೆ ಬರಲಿದೆ.

ಒಟ್ಟು 10 ಜನ ಅರ್ಜಿ ಹಾಕಿದ್ದು ಆ ಪೈಕಿ ವೀರೇಂದರ್ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೈಬಸ್, ದೊಡ್ಡ ಗಣೇಶ್, ಲಾಲ್‌ಚಂದ್ ರಾಜಪುಟ್, ಲ್ಯಾನ್ಸ್ ಕ್ಲುಸನೆರ್, ರಾಕೇಶ್ ಶರ್ಮ, ಫಿಲ್ ಸಿಮ್ಮನ್ಸ್ ಮತ್ತು ಉಪೇಂದ್ರನಾಥ್ ಬ್ರಹ್ಮಚಾರಿ (ಇಂಜಿನಿಯರ್) ಸೇರಿದ್ದಾರೆ.

ಈ ಪೈಕಿ ಕೇವಲ 6 ಅಭ್ಯರ್ಥಿಗಳನ್ನು ಮಾತ್ರ ಮಂಡಳಿ ಸಂದರ್ಶಿಸಲಿದೆ. ಮೂಲಗಳ ಪ್ರಕಾರ ಶಾಸ್ತ್ರಿ, ಸೆಹ್ವಾಗ್, ಮೂಡಿ, ಸಿಮ್ಮನ್ಸ್, ಪೈಬಸ್ ಹಾಗೂ ರಜಪುಟ್ ಇವರೇ 6 ಆಕಾಂಕ್ಷಿಗಳು.

ಕ್ಲುಸೆನೆರ್‌ಗೆ ಕೋಚ್ ಆಗುವ ಅವಕಾಶ ಕಾಣುತ್ತಿಲ್ಲ. ಸ್ಪಿನ್ನರ್ ಅನಿಲ್ ಕುಂಬ್ಳೆ ರಾಜೀನಾಮೆಯಿಂದ ಕೋಚ್ ಹುದ್ದೆ ಖಾಲಿಯಾಗಿದೆ. ಕುಂಬ್ಳೆ ಮತ್ತು ವಿರಾಟ್ ಕೊಹ್ಲಿ ಹೊಂದಾಣಿಕೆ ಸರಿಯಾಗಿಲ್ಲದೆ ಭಿನ್ನಾಭಿಪ್ರಾಯಗಳು ಹೆಚ್ಚಿದ್ದರಿಂದ ಈ ಪರಿಸ್ಥಿತಿ ಬಂದಿದೆ.

ಈಗ ಕೋಚ್ ಆಗುವವರಿಗೆ 2 ವರ್ಷದ ಗುತ್ತಿಗೆ ನೀಡಲಾಗುವುದು. ಈ ಬಾರಿ ಅನುಭವದಿಂದ ಪಾಠ ಕಲಿಯಬೇಕಾಗಿರುವ ಮಂಡಳಿ ತುಂಬ ಜಾಗರೂಕತೆಯಿಂದ ಆಯ್ಕೆ ಮಾಡಬೇಕಾಗಿದೆ.

ಆರಂಭದಲ್ಲೂ ಶಾಸ್ತ್ರಿ, ಈ ಹುದ್ದೆಗೆ ಅರ್ಜಿ ಹಾಕಿರಲಿಲ್ಲ. ಆದರೆ ಕೊನೆ ಗಳಿಗೆಯಲ್ಲಿ ಅರ್ಜಿ ಹಾಕಿ ಈಗ ಇದ್ದಕ್ಕಿದಂತೆ ಎಲ್ಲರ ಅಚ್ಚುಮೆಚ್ಚು ಎನಿಸತೊಡಗಿದ್ದಾರೆ.

ವಿರಾಟ್ ಮತ್ತು ಶಾಸ್ತ್ರಿ ನಡುವೆ ಸೌಹಾರ್ದ ಸಂಬಂಧ ಇರುವುದೂ ಅವರ ಅರ್ಹತೆ ಹೆಚ್ಚಿಸಿದೆ. ಆದರೆ ಸೌರವ್ ಗಂಗೂಲಿ ಜತೆ ಸಾರ್ವಜನಿಕವಾಗಿ ಕಚ್ಚಾಡಿದ್ದ ಶಾಸ್ತ್ರಿ, ಬಗ್ಗೆ ಅವರ ಅಭಿಪ್ರಾಯ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Leave a Comment