ಭಾರತ ಅಪಾದಯದ ಸ್ಥಿತಿಯಲ್ಲಿ : ಕನ್ಹಯ್ಯ ಕಳವಳ

 

ಕಲಬುರಗಿ,ಅ.16-“ಹಿಂದು ಮುಸ್ಲಿಮರು ಮಾತ್ರ ಇಂದು ಸಂಕಷ್ಟದಲ್ಲಿಲ್ಲ, ಇಡೀ ದೇಶವೇ ಇಂದು ಅಪಾಯದ ಸ್ಥಿತಿಯಲ್ಲಿದೆ” ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಡಾ.ಕನ್ಹಯ್ಯಕುಮಾರ ಕಳವಳ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಕಾಲೇಜು ಸಭಾಂಗಣದಲ್ಲಿ ಶ್ರೀನಿವಾಸಗುಡಿ ಮೆಮೋರಿಯಲ್ ಟ್ರಸ್ಟ್ ಹಾಗೂ ಸಂವಿಧಾನಪರ ಸಂಘಟನೆಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಸಂವಿಧಾನ ರಕ್ಷಣೆಯಲ್ಲಿ ಯುವಕರ ಪಾತ್ರ ಕುರಿತು ಉಪನ್ಯಾಸ ನೀಡಿದರು.

ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಜನರನ್ನು ತುಳಿದು ದೇಶದ ಬಹುತ್ವವನ್ನು ಅಳಸಿ ಹಾಕುವ ಸಂಚು ನಡೆದಿದ್ದು, ದೇಶದ ಯುವ ಸಮುದಾಯ ಇದನ್ನು ಅರಿತುಕೊಳ್ಳಬೇಕು. ಪ್ರಧಾನಿ ನರೇಂದ್ರ ಮೋದಿ ಬಹುತ್ವ ಭಾರತದ ಮೇಲೆ ಏಕ ಸಂಸ್ಕೃತಿ ಹೇರುವ ಹುನ್ನಾರ ನಡೆಸಿದ್ದು, ದೇಶದ ಯುವ ಜನತೆ ಇದನ್ನು ಪ್ರಶ್ನಿಸಬೇಕು, ಹೀಗೇ ಮುಂದುವರಿದರೆ ಗದ್ದುಗೆಯಿಂದ ಇಳಿಸಬಲ್ಲೆವು ಎಂಬ ಸಂದೇಶವನ್ನು ಅವರಿಗೆ ರವಾನಿಸಬೇಕು ಎಂದು ಕರೆ ನೀಡಿದರು.

ನರೇಂದ್ರ ಮೋದಿ ಅವರನ್ನು ಬಡವ ಎಂದ ಬಿಂಬಿಸಲು ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ. ಪ್ರಧಾನಿಯ ಪ್ರಚಾರಕ್ಕೆ ನಮ್ಮ ತೆರಿಗೆ ಹಣ ಬಳಕೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯ ತಮ್ಮ ಉಪನ್ಯಾಸ ಕಾರ್ಯಕ್ರಮಕ್ಕೆ ಮೊದಲು ಅನುಮತಿ ನೀಡಿ ತದನಂತರ ಅನುಮತಿಯನ್ನು ಹಿಂಪಡೆದುಕೊಂಡಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕನ್ಹಯ್ಯಕುಮಾರ್ ಕುಲಪತಿಯವರಿಗೆ ಭೌತವಿಜ್ಞಾನದ ಮೂಲ ತತ್ವ ಗೊತ್ತಿಲ್ಲ. ಯಾವುದನ್ನೇ ಆದರೂ ಹತ್ತಿಕ್ಕಲು ಯತ್ನಿಸಿದಷ್ಟು ಪುಟಿಯುತ್ತದೆ. ವಿವಿಯ ಒಂದು ಕಾರ್ಯಕ್ರಮದಲ್ಲಿ ಮಾತನಾಡುವುದನ್ನು ತಡೆಯಬಹುದು. ಆದರೆ, ನನ್ನ ಭಾಷಣ ಫೇಸ್ ಬುಕ್ ನಲ್ಲಿ ನೇರ ಪ್ರಸಾರವಾಗುತ್ತದೆ. ಯೂ ಟ್ಯೂಬ್ ಮೂಲಕ ಇಡೀ ದೇಶವನ್ನು ತಲುಪುತ್ತದೆ. ಇದಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ.ಆರ್.ಕೆ.ಹುಡುಗಿ ದೇಶದಲ್ಲಿ ಅನ್ನ, ಆಹಾರ, ನೀರಿಗೆ ಬರ ಬಂದಿದ್ದರೆ ಬೇರೆ ಕಡೆಯಿಂದ ತರಿಸಬಹುದು ಆದರೆ ಈಗ ಮನುಷ್ಯತ್ವಕ್ಕೆ ಬರ ಬಂದಿದೆ. ಸಂವಿಧಾನ ರಕ್ಷಣೆಯ ಮೂಲಕ ಭಾರತದ ಬದುಕನ್ನು ಬದಲಾಯಿಸಬಹುದಾಗಿದೆ ಎಂದರು.

ಸಂಘಟಕಿ ಕೆ.ನೀಲಾ, ಬಸಣ್ಣ ಸಿಂಗೆ, ಮಾರುತಿ ಗೋಖಲೆ, ಲಕ್ಷ್ಮೀಕಾಂತ ಹುಬಳಿ, ಮೆಹರಾಜ್ ಪಟೇಲ್, ದತ್ತಾತ್ರೇಯ ಇಕ್ಕಳಕಿ, ಭೀಮಾಶಂಕರ ಮಾಡ್ಯಾಳ ಸೇರಿದಂತೆ ಮತ್ತಿತರರು ವೇದಿಕೆ ಮೇಲಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಬಿ.ಬಿ.ರಾಂಪುರೆ ಸ್ವಾಗತಿಸಿದರು. ಮಹೇಶಕುಮಾರ ರಾಠೋ‌ಡ್ ಕಾರ್ಯಕ್ರಮ ನಿರೂಪಿಸಿದರು. ಸಹಸ್ರಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Comment