ಭಾರತ್ ಬಂದ್ ಸಂಪೂರ್ಣವಾಗಿ ಯಶಸ್ವಿ

ಕೆಜಿಎಫ್: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆ ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಮಿಕ ಸಂಘಟನೆಗಳು ನೀಡಿದ್ದ ಭಾರತ್ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು.

ರಾಬರ್ಟಸನ್‌ಪೇಟೆಯ ಎಂ.ಜಿ.ಮಾರುಕಟ್ಟೆ ಮತ್ತು ಆಂಡರಸನ್‌ಪೇಟೆಯ ಮಾರುಕಟ್ಟೆಗಳು ಸಂಪೂರ್ಣವಾಗಿ ನಿಸ್ತೇಜವಾಗಿದ್ದವು. ಆಟೋ, ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಸಂಚಾರವನ್ನು ಸ್ಥಗಿತಗೊಳಿಸಿತ್ತು. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಬಾಗಿಲು ಹಾಕಿದ್ದವು.  ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು, ಬ್ಯಾಂಕ್‌ಗಳು, ಸಹ ಬಾಗಿಲು ತೆರೆಯಲಿಲ್ಲ.

ಕೇಂದ್ರ ಪೋಸ್ಟ್ ಆಫೀಸ್ ಮುಂಭಾಗದಲ್ಲಿ ಅಂಚೆ ಕಚೇರಿಯ ಸಿಬ್ಬಂದಿ ಬಂದ್ ಗೆ ಬೆಂಬಲ ವ್ಯಕ್ತಪಡಿಸಿ ಧರಣಿ ನಡೆಸಿದರು. ಹಳೇ ಪಿಂಚಣಿ ವ್ಯವಸ್ಥೆ, ಕನಿಷ್ಠ ವೇತನ ಮತ್ತಿತರ ಬೇಡಿಕೆಗಳನ್ನು ಇಟ್ಟುಕೊಂಡು ಪ್ರತಿಭಟನೆ ನಡೆಸಿದರು. ಶಾಸಕಿ ಎಂ.ರೂಪಕಲಾ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು. ಅಂಚೆ ಕಚೇರಿ ಸಿಬ್ಬಂದಿ ಸಂಘದ ಅಧ್ಯಕ್ಷ ಪಳನಿ, ಶಿವಾನಂದನ್, ಅನ್ಬರಸನ್, ಜಾನಕಿರಾಮನ್ ಮತ್ತಿತರರು ಇದ್ದರು.

ನಗರದಲ್ಲಿ ಪ್ರತಿಭಟನಾಕಾರರು ಸಂಚರಿಸಿ ಬಂದ್‌ಗೆ ಬೆಂಬಲ ನೀಡುವಂತೆ ಆಗ್ರಹಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಎಲ್ಲೂ ಅಹಿತಕರ ಘಟನೆ ನಡೆಯಲಿಲ್ಲ.

ಸಿಪಿಎಂ ಮುಖಂಡರಾದ ಪಿ.ತಂಗರಾಜ್, ಎ.ಆರ್.ಬಾಬು, ಶ್ರೀನಿವಾಸನ್, ಸಿಪಿಐನ ಜ್ಯೋತಿಬಸು, ದಲಿತ ಸಂಘಟನೆಯ ಎಪಿಎಲ್ ರಂಗನಾಥ್, ಶ್ರೀಧರ್ ಮತ್ತಿತರರು ಭಾಗವಹಿಸಿದ್ದರು.

ಬೆಮಲ್‌ನಗರದಲ್ಲಿ ಕಾರ್ಮಿಕ ಸಂಘದ ಅಧ್ಯಕ್ಷ ಆಂಜನೇಯರೆಡ್ಡಿ ನೇತೃತ್ವದಲ್ಲಿ ಬಂದ್ ಆಚರಣೆ ಮಾಡಲಾಯಿತು. ನಾಳೆ ಬಂದ್‌ಗೆ ಸಹಕಾರವಿರುವುದಿಲ್ಲ. ಎಂದಿನಿಂತೆ ಕಾರ್ಖಾನೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

Leave a Comment