ಭಾರತ್ ಬಂದ್: ಮೈಸೂರಲ್ಲಿ ಮಿಶ್ರ ಬೆಂಬಲ

ಮೈಸೂರು, ಸೆ.10- ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಜತೆಗೆ ಹಲವು ವಿರೋಧ ಪಕ್ಷಗಳು ಸೋಮವಾರ ಕರೆಕೊಟ್ಟಿದ್ದ `ಭಾರತ್ ಬಂದ್’ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತಾದರೂ, ಜನಜೀವನ ಅಸ್ತವ್ಯಸ್ತಗೊಂಡಿತು.
ಬಂದ್ ಹಿನ್ನೆಯಲ್ಲಿ ಮೈಸೂರು ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿ ಅಭಿರಾಂ ಭಿ.ಶಂಕರ್ ರಜೆ ಘೋಷಿಸಿದ್ದಾರೆ. ರಾಜ್ಯ ರಸ್ತೆ ಸಾರಿಗೆ, ಖಾಸಗೀ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಆಟೋ ರಿಕ್ಷಾ ಹಾಗೂ ಇತರ ಸಾರ್ವಜನಿಕ ಬಳಕೆ ವಾಹನಗಳ ಓಡಾಟ ವಿರಳ ಸಂಖ್ಯೆಯಲ್ಲಿತ್ತು.
ಎಂದಿನಂತೆ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಬೆಳಿಗ್ಗೆ 6ಗಂಟೆಗೆ ನಗರದ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಆಗಮಿಸಿದ ಕಾಂಗ್ರೆಸ್ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರ ದಂಡು ಬಸ್ ತಡೆದು ಪ್ರತಿಭಟನೆ ನಡೆಸಿತು. ಇದರಿಂದ ಸಾರಿಗೆ ಅಧಿಕಾರಿಗಳು ಬಸ್ ಸಂಚಾರವನ್ನು ಸಂಪೂರ್ಣವಾಗಿ ನಿಲ್ಲಿಸುವ ನಿರ್ಧಾರ ಕೈಗೊಂಡರು. ತುರ್ತು ಸನ್ನಿವೇಶ ಹಾಗೂ ಅನಿವಾರ್ಯ ಕಾರಣಗಳಿಗೆ ದೂರದೂರುಗಳಿಗೆ ಪ್ರಯಾಣಿಸಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರನೇಕರು ಬಸ್ ವ್ಯವಸ್ಥೆ ಇಲ್ಲದೆ ಪರದಾಡಿದರು.
ಬೆಳಿಗ್ಗೆ 10ಗಂಟೆಯ ನಂತರ ಬಂದ್‍ನ ತೀವ್ರತೆ ತುಸು ಹೆಚ್ಚಾಯಿತು. ನಗರದಾದ್ಯಂತ ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಗೂ ಎಡಪಕ್ಷಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಬೀದಿಗಿಳಿದು ಹೋರಾಟ ಮಾಡಿದರು. ಶಾಸಕ ತನ್ವೀರ್ ಸೇಠ್, ಮಾಜಿ ಶಾಸಕರಾದ ವಾಸು ನೇತೃತ್ವದಲ್ಲಿ ಅಲ್ಲಲ್ಲಿ ಪ್ರಮುಖ ವೃತ್ತಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಜೆಡಿಎಸ್ ಸಹ ಇಂದಿನ ಬಂದ್ ಗೆ ಬೆಂಬಲ ಘೋಷಿಸಿದ್ದ ಹಿನ್ನೆಲೆಯಲ್ಲಿ ಜೆಡಿಎಸ್ ಕಾರ್ಯಕರ್ತರು ರಸ್ತೆಗಳಿದು ಪ್ರತಿಭಟಿಸಿದರು. ತಳ್ಳುವ ಗಾಡಿಯಲ್ಲಿ ತರಕಾರಿಗಳನ್ನು ಇರಿಸಿ, ಮಾರಾಟ ಮಾಡುವ ಮೂಲಕ ವಿನೂತನ ಪ್ರತಿಭಟನೆ ಮಾಡಿ ಗಮನ ಸೆಳೆದದರು. ಒಂದಿಬ್ಬರು ಜೆಡಿಎಸ್ ಕಾರ್ಯಕರ್ತರು ನ್ಯಾಯಾಲಯದ ಮುಂದೆ ಇರುವ ಗಾಂಧಿ ಪ್ರತಿಮೆ ಎದುರು ರಸ್ತೆಯಲ್ಲಿಯೇ ಒಲೆ ಹಾಕಿ ಬೆಂಕಿ ಹಚ್ಚಿ ಅಡುಗೆ ಮಾಡುವ ಮೂಲಕ ಪ್ರತಿಭಟಿಸಿದರು.
ಕನ್ನಡ ಪರ ಸಂಘಟನೆಗಳೂ ಸಹ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ, ಬೀದಿಗಿಳಿದು ಪ್ರತಿಭಟಿಸಿದವು. ಅಗ್ರಹಾರ ವೃತ್ತದಲ್ಲಿ ಎತ್ತಿನ ಗಾಡಿಯ ಮೇಲೆ ಬೈಕ್ ನಿಲ್ಲಿಸಿ, ಗಾಡಿಯನ್ನು ಎಳೆಯುವ ಮೂಲಕ ವಿನೂತನ ಮಾದರಿಯ ಪ್ರತಿಭಟನೆ ಮಾಡಿದರು. ಇನ್ನೂ ಕೆಲವರು ತಮ್ಮ ದ್ವಿಚಕ್ರ ವಾಹನಗಳನ್ನು ಪ್ರಮುಖ ವೃತ್ತಗಳಲ್ಲಿ ನಿಲ್ಲಿಸಿ, ಅಣಕು ಹರಾಜು ಪ್ರಕ್ರಿಯೆ ನಡೆಸಿ, ಪ್ರತಿಭಟನೆ ದಾಖಲಿಸಿದರು.
ಮುಚ್ಚಿದ ಹೋಟೆಲ್, ಮಾಲ್
ಬಂದ್‍ಗೆ ನೈತಿಕ ಬೆಂಬಲ ಘೋಷಿಸಿ, ಹೋಟೆಲ್ ತೆರೆಯಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿತ್ತು. ಆದರೆ, ಆಯಕಟ್ಟಿನ ಸ್ಥಳಗಳನ್ನು ಹೊರತುಪಡಿಸಿ, ಉಳಿದೆಡೆ ಹೋಟೆಲ್‍ಗಳು ತೆರೆಯಲಿಲ್ಲ. ಇದರಿಂದ ಊಟ, ತಿಂಡಿಗೆ ಹೋಟೆಲ್‍ಗಳನ್ನೇ ಆಶ್ರಯಿಸಿದ್ದ ಗ್ರಾಹಕರು ತೊಂದರೆ ಅನುಭವಿಸಿದರು.
ತೆರೆದ ಮಾರುಕಟ್ಟೆ
ನಗರದ ಪ್ರಮುಖ ಮಾರುಕಟ್ಟೆಯಾದ ದೇವರಾಜ ಮಾರುಕಟ್ಟೆ ಬೆಳಿಗ್ಗೆ ಹತ್ತು ಗಂಟೆಯ ನಂತರ ತೆರೆದುಕೊಂಡಿತು. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟು ನಿರೀಕ್ಷೆಯಲ್ಲಿದ್ದ ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ತೆರೆದು ವ್ಯಾಪಾರಕ್ಕೆ ಕುಳಿತರು. ಆದರೆ, ಗ್ರಾಹಕರಿಲ್ಲದೆ ಹೂವು, ಹಣ್ಣುಗಳು ಕೊಳೆಯುತ್ತಿವೆ ಎಂದು ಅನೇಕ ವರ್ತಕರು ಬೇಸರ ವ್ಯಕ್ತಪಡಿಸಿದರು.
ಹಾಜರಾತಿ ವಿರಳ
ಸರ್ಕಾರಿ ಕಚೇರಿಗಳು, ಬ್ಯಾಂಕುಗಳು ತೆರೆದಿದ್ದವಾದರೂ, ಅಧಿಕಾರಿ, ಸಿಬ್ಬಂದಿಗಳ ಹಾಜರಾತಿ ವಿರಳವಾಗಿತ್ತು. ಬಹುತೇಕ ಮಾಲ್‍ಗಳು ಬಂದ್ ಆಗಿವೆ. ಚಿತ್ರಮಂದಿರಗಳು ಬಾಗಿಲು ಹಾಕಿವೆ. ನಗರದ ಪ್ರಮುಖ ರಸ್ತೆಗಳಾದ ಕೆ.ಆರ್. ಸರ್ಕಲ್, ದೇವರಾಜ ಅರಸು ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆ, ಶಿವರಾಂ ಪೇಟೆ ರಸ್ತೆಗಳಲ್ಲಿ ಅಂಗಡಿಗಳು ಬಂದ್ ಆಗಿ, ರಸ್ತೆ ಬಿಕೋ ಎನ್ನುತ್ತಿವೆ.
ದಸರಾ ಸಮಿತಿಗೂ ಬಂದ್ ಬಿಸಿ
ದಸರಾ ಕಾರ್ಯಕಾರಿ ಸಮಿತಿಯ ಸಭೆಗೂ ಬಂದ್ ಬಂದ್ ಬಿಸಿ ತಟ್ಟಿದೆ. ಇಂದು ನಿಗದಿಯಾಗಿದ್ದ ದಸರಾ ಕಾರ್ಯಕಾರಿ ಸಮಿತಿ ಸಭೆ ಮುಂದೂಡಲಾಗಿದೆ. ಈ ಸಭೆಯನ್ನು ಸೆಪ್ಟೆಂಬರ್ 14ಕ್ಕೆ ಮುಂದೂಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಬಂದ್‍ಗೆ ಬೆಂಬಲ
ಭಾರತ್ ಬಂದ್‍ಗೆ ಬಿಎಸ್‍ಪಿ, ಅಖಿಲ ಭಾರತ ಟ್ರೇಡ್ ಯೂನಿಯನ್, ಎನ್‍ಎಸ್‍ಯುಐ, ಎಡಪಕ್ಷಗಳ ಜಂಟಿ ಸಮಿತಿ, ಮೈಸೂರು ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ, ಆಟೋ ಚಾಲಕರು ಮತ್ತು ಮಾಲೀಕರ ಸಂಘ, ಖಾಸಗಿ ಬಸ್ ಮಾಲೀಕರ ಸಂಘ, ಖಾಸಗಿ ಟ್ಯಾಕ್ಸಿ ಮಾಲೀಕರ ಸಂಘ, ಓಲಾ ಮತ್ತು ಉಬರ್ ಚಾಲಕರ ಸಂಘ, ಟೂರ್ಸ್ ಮತ್ತು ಟ್ರಾವೆಲ್ಸ್ ಟ್ಯಾಕ್ಸಿ ಸಂಘ, ಕರ್ನಾಟಕ ಸಿಟಿ ಟ್ಯಾಕ್ಸಿ ಡ್ರೈವರ್ಸ್ ಸಂಘ, ವಿವಿಧ ಕನ್ನಡ ಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಸೋಮವಾರ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಗಜಪಡೆ ಬಿಂದಾಸ್ ವಾಕಿಂಗ್
ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ ಗಜಪಡೆಗೆ ಭಾರತ್ ಬಂದ್ ಬಿಸಿ ತಟ್ಟಲಿಲ್ಲ. ಬಿಕೋ ಎನ್ನುತ್ತಿದ್ದ ರಸ್ತೆಯಲ್ಲಿ ಬೆಳಿಗ್ಗೆ ದಸರಾ ಆನೆಗಳು ಎಂದಿನಂತೆ ಜಂಬೂಸವಾರಿ ತಾಲೀಮು ನಡೆಸಿದವು. ಬೆಳಿಗ್ಗೆ 6.30ಕ್ಕೆ ಅರಮನೆಯಿಂದ ಹೊರಟ ಆನೆಗಳು ಕೆ.ಆರ್. ಸರ್ಕಲ್, ನ್ಯೂ ಸಯ್ಯಾಜಿ ರಾವ್ ರಸ್ತೆ ಮೂಲಕ ಸಾಗಿ ಬನ್ನಿಮಂಟಪ ತಲುಪಿದವು. ಆ ನಂತರ ಅದೇ ಮಾರ್ಗದಲ್ಲಿ ವಾಪಸ್ ಅರಮೆನೆಗೆ ಬಂದು ತಲುಪಿದವು. ನಿನ್ನೆ ಅಮವಾಸ್ಯೆ ಕಾರಣಕ್ಕೆ ಜಂಬೂಸವಾರಿ ತಾಲೀಮಿಗೆ ಬ್ರೇಕ್ ಬಿದ್ದಿತ್ತು. ಹೀಗಾಗಿ ಆನೆಗಳು ಭಾನುವಾರ ದಿನವಿಡೀ ಅರಮನೆಯಲ್ಲಿಯೇ ವಿಶ್ರಾಂತಿಗೆ ಮೊರೆಹೋಗಿದ್ದವು.

Leave a Comment