ಭಾರತ್ ಬಂದ್: ಮೂರು ಪ್ರಕರಣ ದಾಖಲು

ಮಂಗಳೂರು, ಸೆ.೧೧- ಭಾರತ್ ಬಂದ್ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಬಂಟ್ವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದು ಹಾನಿಗೊಳಿಸಿರುವ ಘಟನೆ ಬಂಟ್ವಾಳ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಬೈಕ್‌ನಲ್ಲಿ ಬಂದ ಕಿಡಿಗೇಡಿಗಳು ಬಸ್ಸಿನ ಗ್ಲಾಸಿಗೆ ಕಲ್ಲೆಸೆದು ಪರಾರಿಯಾಗಿದ್ದಾರೆ. ಘಟನೆಯಲ್ಲಿ ೩೦ ಸಾವಿರ ರೂ. ನಷ್ಟ ಉಂಟಾಗಿರುತ್ತದೆ ಎಂದು ಬಸ್ ನಿರ್ವಾಹಕರೊಬ್ಬರು ನೀಡಿರುವ ದೂರಿನ ಅನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಂಚರಿಸುತ್ತಿದ್ದ ಕಾರಿನ ಮೇಲೆ ಕಲ್ಲೆಸೆದ ಘಟನೆ ಬೋಳಂಗಡಿಯಲ್ಲಿ ನಡೆದಿದೆ. ಬೆಳಗ್ಗೆ ೧೧ ಗಂಟೆಗೆ ತನ್ನ ಟೊಯೊಟಾ ಫಾರ್ಚುನರ್ ಕಾರಿನಲ್ಲಿ ಕಾರ್ಯಕ್ರಮದ ನಿಮಿತ್ತ ಬಿಸಿರೋಡಿನಿಂದ ಕಲ್ಲಡ್ಕ ಕಡೆಗೆ ಹೋಗುತ್ತಿದ್ದಾಗ ಬಂಟ್ವಾಳ ತಾಲೂಕು ಪಾಣೆಮಂಗಳೂರು ಗ್ರಾಮದ ಬೋಳಂಗಡಿ ಎಂಬಲ್ಲಿಗೆ ತಲುಪುವಾಗ ಕಿಡಿಗೇಡಿಗಳು ಕಾರಿಗೆ ಕಲ್ಲೆಸೆದಿದ್ದಾರೆ. ಪರಿಣಾಮ ಕಾರಿನ ಬಲಭಾಗದಲ್ಲಿ ಜಖಂಗೊಂಡಿದೆ ಎಂದು ಶಾಸಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ವಾಹನ ಚಾಲಕನೋರ್ವನಿಗೆ ಹಲ್ಲೆ ನಡೆಸಿದ ಘಟನೆ ಮಾಣಿ ಜಂಕ್ಷನ್‌ನಲ್ಲಿ ನಡೆದಿದೆ. ಇಲ್ಲಿನ ಬರಿಮಾರು ಗ್ರಾಮದ ನಿವಾಸಿ ಅರುಣ್ ಕುಮಾರ್ ಹಲ್ಲೆಗೊಳಗಾದ ವಾಹನ ಚಾಲಕ. ಇಂದು ಬೆಳಗ್ಗೆ ತನ್ನ ಪಿಕ್ ಅಪ್ ವಾಹನದಲ್ಲಿ ಬಾಡಿಗೆಗಾಗಿ ಮಾಣಿ ಜಂಕ್ಷನ್‌ನಲ್ಲಿ ನಿಂತುಕೊಂಡಿರುವಾಗ ಪರಿಚಯದ ಜಗನ್ನಾಥ್ ಜೈನ್, ದಯಾನಂದ ಪೂಜಾರಿ, ಸಲೀಂ ಎಂಬವರು, ಭಾರತ್ ಬಂದ್ ಇದ್ದರೂ ಬಾಡಿಗೆ ಮಾಡಿತ್ತಿದ್ದೀಯಾ ಎಂದು ಪ್ರಶ್ನಿಸಿ ಅವಾಚ್ಯ ಶಬ್ದದಿಂದ ಬೈದು, ಕಲ್ಲಿನಿಂದ ಹೊಡೆದು, ಕುತ್ತಿಗೆಯಲ್ಲಿದ್ದ ಚಿನ್ನದ ಚೈನ್ ಎಳೆದುಕೊಂಡು, ಜೀವ ಬೆದರಿಕೆ ಹಾಕಿದ್ದಾರೆಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment