‘ಭಾರತ್ ಬಂದ್’ ಬಿಸಿ ಉತ್ತರ ಕರ್ನಾಟಕ ಸ್ತಬ್ಧ

ಹುಬ್ಬಳ್ಳಿ,ಸೆ 10- ಪೆಟ್ರೋಲ್-ಡೀಸೆಲ್ ದರ ಏರಿಕೆ ಮತ್ತು ಹಣದುಬ್ಬರ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಇಂದು ಕರೆ ನೀಡಿದ ಭಾರತ್ ಬಂದ್ ಉತ್ತರ ಕರ್ನಾಟಕದಾದ್ಯಂತ ಸಂಪೂರ್ಣ ಯಶಸ್ವಿಯಾಗಿದ್ದು ಜನಸಾಮಾನ್ಯರಿಗೆ ಬಂದ್‌ನ ಬಿಸಿ ತಟ್ಟಿದುದು ಕಂಡುಬಂದಿತು.
ಧಾರವಾಡ ಜಿಲ್ಲೆ
ಧಾರವಾಡ ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದಲೂ ಬಂದ್‌ನ ಪ್ರಭಾವ ತೀವ್ರವಾಗಿದ್ದು ಮುಂಜಾನೆ ತೆರೆದಿದ್ದ ಕೆಲ ಹೊಟೇಲ್‌ಗಳಿಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ದಾಂಧಲೆ ನಡೆಸಿದ ಘಟನೆ ಹಳೆಯ ಕೇಂದ್ರ ಬಸ್ ನಿಲ್ದಾಣದ ಎದುರು ನಡೆಯಿತು.
ಹೊಟೇಲ್ ಅಯೋಧ್ಯಾ ಹಾಗೂ ಹೊಟೇಲ್ ಸಂತೋಷಗಳಿಗೆ ನುಗ್ಗಿದ ಪ್ರತಿಭಟನಾಕಾರರು ಬಂದ್‌ಗೆ ಬೆಂಬಲಿಸಲದೇ ಹೊಟೇಲ್ ತಟ್ಟೆ, ಗ್ಯಾಸ್, ಜಗ್ ಮತ್ತಿತರ ವಸ್ತುಗಳನ್ನು ತೂರಾಡಿದರು.
ಹು.ಧಾ. ಮಹಾನಗರಕ್ಕೆ ಬರಬೇಕಾದ ಗ್ರಾಮೀಣ ಬಸ್‌ಗಳನ್ನೆಲ್ಲ ರಾತ್ರಿಯೇ ಮರಳಿ ಕರೆಸಿ ಡಿಪೋಗಳಿಗೆ ಸೇರಿಸಿದ್ದರಿಂದ ಇಂದು ಮುಂಜಾನೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಬೆಳಗಿನ ವಸತಿ ಬಸ್‌ಗಳು ಸಹ ದೊರಕದಂತಾಗಿತ್ತು.
ಪರಊರುಗಳಿಗೂ ಇಲ್ಲಿಂದ ಮುಂಜಾನೆಯಿಂದಲೇ ಯಾವ ಬಸ್‌ಗಳೂ ತೆರಳಲಿಲ್ಲ. ಬೆಳಿಗ್ಗೆ ನಗರದ ಹೊರ ಪ್ರದೇಶಗಳಲ್ಲಿ ಅಲ್ಲೊಂದು ಇಲ್ಲೊಂದು ಆಟೋಗಳ ಸಂಚಾರ ನಡೆದಿತ್ತಾದರೂ ಹೊತ್ತೇರುತ್ತಿದ್ದಂತೆ ಅದೂ ಸ್ಥಗಿತಗೊಂಡಿತು.
ಮಹಾನಗರದ ಹೊಟೇಲ್‌ಗಳು, ಅಂಗಡಿ-ಮುಂಗಟ್ಟುಗಳು ಮುಚ್ಚಿದ್ದು ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿದ್ದವು.
ಪ್ರಮುಖ ಪ್ರದೇಶಗಳಲ್ಲೆಲ್ಲೂ ತರಕಾರಿ, ಹೂವು-ಹಣ್ಣು ಮಾರಾಟ ನಡೆಯಲಿಲ್ಲ.
ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದು, ವಿದ್ಯಾರ್ಥಿಗಳು ರಜವೇ ರಜ ಸಂಭ್ರಮದಲ್ಲಿ ಖಾಲಿ ಖಾಲಿ ರಸ್ತೆಗಳಲ್ಲಿ ಆಟಗಳಲ್ಲಿ ತೊಡಗಿದ್ದುದು ಕಂಡುಬಂದಿತು.
ಮಹಾನಗರದಲ್ಲಿ ಎಲ್ಲಿಯೂ ಅಹಿತಕರ ಘಟನೆಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಬಾಗಲಕೋಟ ಜಿಲ್ಲೆ
ಬಾಗಲಕೋಟ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕರೆ ನೀಡಿದ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದ್ದರಿಂದ ಬಂದ್ ಯಶಸ್ವಿಯಾಯಿತು.
ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರೆ ಶಾಲಾ, ಕಾಲೇಜುಗಳು, ಅಂಗಡಿಗಳು ಮುಚ್ಚಿದ್ದವು.
ಬಸವೇಶ್ವರ ವೃತ್ತದಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಟಾಂಗಾಕ್ಕೆ ಟಂಟಂ ಗಾಡಿಯನ್ನೂ ಕಟ್ಟಿ ಎಳೆಯುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಪ್ರಧಾನಿ ಮೋದಿಯವರ ಪ್ರತಿಕೃತಿ ಹಿಡಿದುಕೊಂಡು ಕತ್ತೆಯ ಮೇಲೆ ಸಾಗಿ ಪ್ರತಿಭಟನೆ ನಡೆಸಿದರು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.
ಗದಗ
ಗದಗ ಜಿಲ್ಲೆಯಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು ಜಿಲ್ಲೆಯ ಬಹುತೇಕ ಪಟ್ಟಣಗಳಲ್ಲಿ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು.
ಬಸ್‌ಗಳ ಸಂಚಾರ ಬಂದ್ ಆಗಿದ್ದರಿಂದ ಪ್ರಯಾಣಿಕರು ಅದರಲ್ಲೂ ರೋಗಿಗಳು ತೀವ್ರ ಪರದಾಡುವ ಸ್ಥಿತಿ ಕಂಡುಬಂದಿತು.
ಗದಗ ಶಹರದ ಪ್ರಮುಖ ಸ್ಥಳಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೈಲ ಬೆಲೆ ಏರಿಕೆ ಖಂಡಿಸಿ ಘೋಷಣೆ ಕೂಗಿದರು.
ಬೆಳಗಾವಿ
ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕಾ ಪ್ರದೇಶಗಳಲ್ಲಿ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದು ಬಂದ್ ಯಶಸ್ವಿಯಾಯಿತು.
ಅಲ್ಲಲ್ಲಿ ಮೆರವಣಿಗೆ, ಟಯರ್‌ಗಳಿಗೆ ಬೆಂಕಿ ಹಚ್ಚಿದ ಘಟನೆಗಳನ್ನು ಹೊರತುಪಡಿಸಿದರೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ನಗರದ ಹೊರ ವಲಯದಲ್ಲಿ ಅಲ್ಲೊಂದು ಇಲ್ಲೊಂದು ಅಂಗಡಿ ತೆರೆದಿದ್ದು ಬಿಟ್ಟರೆ ಬೇರೆ ಕಡೆಗಳಲ್ಲಿ ವ್ಯಾಪಾರ -ವಹಿವಾಟು ನಡೆಯಲಿಲ್ಲ.
ಹಾವೇರಿ
ಹಾವೇರಿ ಶಹರದಲ್ಲಿ ಮುಂಜಾನೆಯಿಂದ ಬಸ್ ಸಂಚಾರ ಸ್ಥಗಿತಗೊಂಡಿದ್ದು ಹೊಟೇಲ್‌ಗಳು, ಅಂಗಡಿಗಳು ಬಾಗಿಲು ಮುಚ್ಚಿದ್ದವು.
ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

Leave a Comment