ಭಾರತ್ ಬಂದ್ : ನಗರ ಸಂಪೂರ್ಣ ಯಶಸ್ವಿ – ವ್ಯಾಪಾರ ಸ್ತಬ್ಧ

* ಶಾಲಾ-ಕಾಲೇಜು, ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟು ಬಂದ್
ರಾಯಚೂರು.ಸೆ.10- ಕೇಂದ್ರ ಬಿಜೆಪಿ ಸರ್ಕಾರದ ಜನ ವಿರೋಧಿ ಧೋರಣೆ, ತೈಲ ಬೆಲೆ ಹೆಚ್ಚಳ, ರೂಪಾಯಿ ಅಪಮೌಲ್ಯ, ರಫೇಲ್ ಭ್ರಷ್ಟಾಚಾರ ವಿರುದ್ಧ ಇಂದು ಕಾಂಗ್ರೆಸ್ ನೇತೃತ್ವದಲ್ಲಿ ನಡೆದ ಭಾರತ್ ಬಂದ್ ಚಳುವಳಿ ಅಂಗವಾಗಿ ನಡೆದ ಬಂದ್ ಮುಷ್ಕರ ಅತ್ಯಂತ ಯಶಸ್ವಿಯಾಗಿ ನಡೆಯಿತು.
ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಾದ ಸರಾಫ್ ಬಜಾರ್, ಕಿರಾಣಿ ಬಜಾರ್, ತೀನ್ ಖಂದೀಲ್, ತರಕಾರಿ ಮಾರುಕಟ್ಟೆ, ರಾಜೇಂದ್ರ ಗಂಜ್, ಪೆಟ್ರೋಲ್ ಬಂಕ್, ಶಾಲಾ-ಕಾಲೇಜು, ಎಲ್ಲಾ ಅಂಗಡಿ ಮುಂಗಟ್ಟು ಬಂದ್ ಮಾಡುವ ಮೂಲಕ ಭಾರತ್ ಬಂದ್‌ಗೆ ಬೆಂಬಲಿಸಲಾಯಿತು. ವಾರದ ಮೊದಲನೇ ದಿನವಾದ ಇಂದು ಸಾಮಾನ್ಯವಾಗಿ ನಗರದಲ್ಲಿ ಜನ ಸಂದಣಿ ತೀವ್ರವಾಗಿರುತ್ತದೆ.
ಆದರೆ, ಬಂದ್ ಹಿನ್ನೆಲೆಯಲ್ಲಿ ಅನೇಕ ಕಡೆ ರಸ್ತೆ ಬಿಕೋ ಎನ್ನುತ್ತಿದ್ದವು. ಬಂದ್ ಮುಷ್ಕರ ಬಿಟ್ಟರೆ, ಸಾಮಾನ್ಯ ಜನರ ಓಡಾಟ ಅತ್ಯಂತ ಅಲ್ಪ ಪ್ರಮಾಣದಲ್ಲಿತ್ತು. ಜಿಲ್ಲಾ ಬಸ್ ಸಂಚಾರ ಆಗಮನ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಉಂಟಾಯಿತು. ಬಂದ್ ಹಿನ್ನೆಲೆ ನಿನ್ನೆ ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸೈಕಲ್ ಜಾಥಾ, ಬಂಡಿ ಜಾಥಾ ಮೂಲಕ ಪ್ರತಿಭಟನೆ ನಡೆಸಿದರೆ, ಮತ್ತೊಂದು ಕಡೆ ಜಾದಳ ಹಾಗೂ ಕಮ್ಯೂನಿಸ್ಟ್ ಪಕ್ಷ ಬಂದ್ ಬೆಂಬಲಿಸಿ ಪ್ರತಿಭಟನೆಗಿಳಿದಿದ್ದರು.
ಬ್ಯಾಂಕ್ ವಹಿವಾಟು ಸಾಮಾನ್ಯವಾಗಿತ್ತು. ಸರ್ಕಾರಿ ಕಛೇರಿ ಹಾಜರಾತಿ ಸಂಖ್ಯೆಯೂ ಕಡಿಮೆಯಾಗಿರುವುದು ಕಂಡು ಬಂದಿತ್ತು. ಸೋಮವಾರ ನಗರದ ರಾಜೇಂದ್ರ ಗಂಜ್ ಸಂತೆ ನಿರ್ವಹಿಸಲಾಗುತ್ತದೆ. ಆದರೆ, ಬಂದ್ ಹಿನ್ನೆಲೆ, ಸಂತೆ ಮೇಲೆಯೂ ಪರಿಣಾಮ ಬೀರಿತ್ತು. ಚಿತ್ರಮಂದಿರಗಳು ಮುಂಜಾನೆ ಪ್ರದರ್ಶನ ಸ್ಥಗಿತಗೊಳಿಸಿದ್ದವು. ಕೇಂದ್ರ ಸರ್ಕಾರದ ತೈಲ ಬೆಲೆ ಹೆಚ್ಚಳ ಪ್ರತಿಭಟನೆಯಿಂದಾಗಿ ರವಿ ಬೋಸರಾಜು ಅವರ ನೇತೃತ್ವದಲ್ಲಿ ಸೈಕಲ್ ಜಾಥಾ ನಡೆಸಲಾಯಿತು. ಸಂಸದ ಬಿ.ವಿ.ನಾಯಕ ಅವರು ಎತ್ತಿನಬಂಡಿ ಮೇಲೆ ಪ್ರತಿಭಟನೆ ನಡೆಸಿದರು. ಭಾರತ್ ಬಂದ್‌ಗೆ ಎಲ್ಲೆಡೆಯಿಂದಲೂ ಭಾರೀ ಬೆಂಬಲ ವ್ಯಕ್ತಗೊಂಡಿತ್ತು.

Leave a Comment