ಭಾರತ್ ಬಂದ್‌ಗೆ ಉತ್ತಮ ಪ್ರತಿಕ್ರಿಯೆ

ಮಾಲೂರು, ಜ.೯- ಕಾರ್ಮಿಕ ಸಂಘಟಣೆಗಳು ವಿವಿಧ ಬೇಡಿಗೆಗಳ ಈಡೇರಿಕೆ ಹಾಗೂ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಕರೆ ನೀಡಿದ್ದ ಎರಡು ದಿನಗಳ ಭಾರತ್ ಬಂದ್‌ಗೆ ಮಾಲೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾರ್ಮಿಕ ಸಂಘಟನೆಗಳು ಭಾರತ್ ಬಂದ ಘೋಷಣೆ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ಸುಗಳು, ಖಾಸಗಿ ಬಸ್ಸುಗಳು, ಆಟೋಗಳು ರಸ್ತೆಗೆ ಇಳಿಯಲಿಲ್ಲ, ವಾಹನ ಸಂಚಾರವಿಲ್ಲದ ಕಾರಣ ಸದಾ ಜನ ಜಂಗುಳಿಯಿಂದ ಗಿಜಗುಡುತ್ತಿದ್ದ ಬಸ್ ನಿಲ್ದಾಣ ವಾಹನ ಸಂಚಾರ ಹಾಗೂ ಪ್ರಯಾಣಿಕರಿಲ್ಲದ ಕಾರಣ ಸ್ತಬ್ದವಾಗಿ ಬಿಕೋ ಎನ್ನುತ್ತಿತ್ತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬಂದ್ ನಿಂದ ತೊಂದರೆಯಾಗದಂತೆ ಮುಂಜಾಗೃತೆಯಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ರವರು ರಜೆ ಘೋಷಿಸಿದ್ದರು. ಬೆಳಿಗ್ಗೆಯಿಂದಲೇ ಸಿಐಟಿಯು ಜೆಸಿಐಟಿಯು ಕಾರ್ಯಕರ್ತರು ರಸ್ತೆಗಿಳಿದು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪಟ್ಟಣದ ರಸ್ತೆಗಳಲ್ಲಿ ಪ್ರತಿಭಟಣಾ ರ್‍ಯಾಲಿ ನಡೆಸಿದರು.

ಜೆಸಿಟಿಯು ಕಾರ್ಯಕರ್ತೆ ನಾಗರತ್ನಮ್ಮ ಮಾತನಾಡಿ ಕೇಂದ್ರ ಸರ್ಕಾರ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಾಡಬಾರದು, ಮೋಟಾರ್ ಕಾಯ್ದೆ ತಿದ್ದುಪಡಿ ಮಾಡಬಾರದು, ಕಾರ್ಮಿಕರಿಗೆ ಕನಿಷ್ಟ ವೇತನ ನೀಡಬೇಕು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ, ಕಾಳ ಸಂತೇ ವ್ಯಾಪಾರ ನಿಷೇದ ಮಾಡಲು ಕೇಂದ್ರ ಸರ್ಕಾರದ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಭಾರತ್ ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳು, ಹೋಟೆಲ್ ಗಳು ಸ್ವಯಂ ಪ್ರೇರಿತವಾಗಿ ಮುಚ್ಚಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಚಿತ್ರಮಂದಿರದ ಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿತ್ತು. ಆಸ್ಪತ್ರೆಗಳು, ನಂದಿನ ಹಾಲಿನ ಕೇಂದ್ರಗಳು, ಹೂವಿನ ಅಂಗಡಿ, ಔಷಧಿ ಅಂಗಡಿಗಳು ಎಂದಿನಂತೆ ತೆರೆದಿದ್ದವು. ಯಾವುದೇ ರೀತಿಯ ಅಹಿತಕರ ಘಟನಗೆಲೂ ಸಂಭವಿಸಿದಂತೆ ಮುನ್ನೆಚ್ಚರಿಕೆಯಾಗಿ ಪೊಲೀಸ್ ಸಿಪಿಐ ಸತೀಶ್ ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಶಿವರಾಜ್ ಹಾಗೂ ವಸಂತ್ ಅವರು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ಪ್ರತಿಭಟನೆ ನಡೆಯುತ್ತಿದ್ದ ಮುಖ್ಯರಸ್ತೆಯ ಮಾರಿಕಾಂಭ ದ್ವಾರಕ್ಕೆ ಶಾಸಕ ಕೆ.ವೈ.ನಂಜೇಗೌಡ ಆಗಮಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧ ನೀತಿ ಅನುಸರಿಸುತ್ತಿದ್ದು, ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಕನಿಷ್ಟ ವೇತನ ನೀಡಬೇಕು, ಜನ ಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಮಾಡಬೇಕು, ಮೋಟಾರ್ ಕಾಯ್ದೆ ಜಾರಿಗೆ ತರದಂತೆ ಎಚ್ಚರವಹಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ರಾಜಣ್ಣ ಹಾಗೂ ಪುರಸಭಾ ಸದಸ್ಯ ಅಶ್ವಥ್‌ರೆಡ್ಡಿ, ಜಯರಾಮ್, ಮುನಿಸ್ವಾಮಿಗೌಡ, ನಾರಾಯಣಗೌಡ, ಹಾಜರಿದ್ದರು. ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

Leave a Comment